Shubhashaya News

ತೊಗರಿ ಹೂ ಮತ್ತು ಕಾಯಿ ಹಂತದಲ್ಲಿ ಸಸ್ಯ ಸಂರಕ್ಷಣೆ ಅತ್ಯಗತ್ಯ: ಡಾ. ಸುನಿಲ್ ಕುಮಾರ್

ಕಲಬುರಗಿ: ತೊಗರಿ ಬೆಳೆಯ ಹೂ, ಮೊಗ್ಗು ಮತ್ತು ಕಾಯಿ ಕಟ್ಟುವ ಹಂತಗಳಲ್ಲಿ ಕೀಟ ಹಾಗೂ ರೋಗಗಳ ಬಾಧೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ರೈತರು ಸೂಕ್ತ ಸಮಯದಲ್ಲಿ ವೈಜ್ಞಾನಿಕ ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೃಷಿ ಕೀಟಶಾಸ್ತ್ರ ಪ್ರಾಧ್ಯಾಪಕ ಡಾ. ಎನ್. ಎಂ. ಸುನಿಲ್ ಕುಮಾರ್ ಸಲಹೆ ನೀಡಿದರು.

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯಾಪ್ತಿಯ ಕಲಬುರಗಿ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದ ಅಂಗವಾಗಿ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬೈರಾಮಡಗಿ ಗ್ರಾಮದಲ್ಲಿ ಪ್ರಗತಿಪರ ರೈತ ಮಲ್ಲಿನಾಥ್ ಪಾಟೀಲ್ ಅವರ ಸಮಗ್ರ ಕೃಷಿ ಕ್ಷೇತ್ರದಲ್ಲಿ ಆಯೋಜಿಸಿದ್ದ ಸಮಗ್ರ ಕೀಟ ಮತ್ತು ರೋಗ ನಿರ್ವಹಣೆ ಕುರಿತ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗ್ರಾಮದಲ್ಲಿ ಬಹುತೇಕ ಮಳೆಯಾಶ್ರಿತ ತೊಗರಿ ಬೆಳೆ ಹೂ ಬಿಡುವ ಹಂತ ತಲುಪಿದ್ದು, ಈ ಸಂದರ್ಭದಲ್ಲಿ ಬೆಳೆಗೆ ಹಾನಿ ಉಂಟುಮಾಡುವ ಕೀಟಗಳ ಗುರುತಿಸುವಿಕೆ ಹಾಗೂ ಅವುಗಳ ಪರಿಸರಸ್ನೇಹಿ ನಿರ್ವಹಣೆ ಕುರಿತು ರೈತರಿಗೆ ಮಾಹಿತಿ ನೀಡಿದರು. ಎಲೆ, ಹೂವು ಮತ್ತು ಕಾಯಿಗಳಿಗೆ ಹಾನಿ ಉಂಟುಮಾಡುವ ಕೀಟಗಳ ಬಾಧೆಯನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ, ಸೂಕ್ತ ನಿರ್ವಹಣಾ ಕ್ರಮಗಳನ್ನು ಅನುಸರಿಸುವುದು ಮುಖ್ಯ ಎಂದು ತಿಳಿಸಿದರು.

ತೋಟಗಾರಿಕೆ ಸಹ ಪ್ರಾಧ್ಯಾಪಕ ಡಾ. ಮಲ್ಲಿಕಾರ್ಜುನ ನಿಂಗದಲ್ಲಿ ಅವರು ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳು ಹಾಗೂ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಕಡಿಮೆ ಪ್ರಮಾಣದ ನೀರನ್ನು ಬಳಸಿಕೊಂಡು ತರಕಾರಿ ಬೆಳೆಗಳನ್ನು ಬೆಳೆಯುವ ವಿಧಾನಗಳ ಬಗ್ಗೆ ವಿವರಿಸಿ, ರೈತರು ಲಭ್ಯವಿರುವ ನೀರಿನ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಸ್ಯ ರೋಗಶಾಸ್ತ್ರ ಸಹ ಪ್ರಾಧ್ಯಾಪಕ ಡಾ. ಜಹೀರ್ ಅಹಮದ್ ಅವರು ಮಧ್ಯಮ ಅವಧಿಯ ತೊಗರಿ ತಳಿಗಳ ವಿಶೇಷತೆಗಳು ಹಾಗೂ ಹವಾಮಾನ ಬದಲಾವಣೆಯಿಂದ ಬೆಳೆಯಲ್ಲಿ ಕಾಣಿಸಿಕೊಳ್ಳಬಹುದಾದ ವಿವಿಧ ಸಸ್ಯ ರೋಗಗಳ ಕುರಿತು ಮಾಹಿತಿ ನೀಡಿದರು. ಹೂ ಮತ್ತು ಕಾಯಿ ಹಂತದಲ್ಲಿ ಮಂಜು ಸೇರಿದಂತೆ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ಉಂಟಾಗಬಹುದಾದ ರೋಗಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಿದರು.

ಅರಣ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಗಜೇಂದ್ರ ಅವರು ಹೊಲದ ಬದುಗಳಲ್ಲಿ ಬೆಳೆಸಬಹುದಾದ ಬಹುಪಯೋಗಿ ಅರಣ್ಯ ಮರಗಳ ಕುರಿತು ಮಾಹಿತಿ ನೀಡಿದರು. ತೇಗ ಮತ್ತು ಹೆಬ್ಬೇವು ಮೊದಲಾದ ಮರಗಳನ್ನು ಬೆಳೆಸುವುದರಿಂದ ರೈತರಿಗೆ ದೀರ್ಘಾವಧಿಯಲ್ಲಿ ದೊರೆಯಬಹುದಾದ ಪ್ರಯೋಜನಗಳ ಬಗ್ಗೆ ತಿಳಿಸಿದರು.

ಕಾರ್ಯಕ್ರಮದ ಅಂಗವಾಗಿ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ಬೈರಾಮಡಗಿ ಗ್ರಾಮದ ವಿವಿಧ ಕೃಷಿ ಕ್ಷೇತ್ರಗಳಿಗೆ ಭೇಟಿ ನೀಡಿ ರೈತರೊಂದಿಗೆ ಸಂವಾದ ನಡೆಸಿದರು. ಬರ ಪರಿಸ್ಥಿತಿಯಲ್ಲಿ ಬೆಳೆಗಳ ನಿರ್ವಹಣೆ, ಜಾನುವಾರು ಸಾಕಾಣಿಕೆ ಹಾಗೂ ಕೃಷಿ ಯಂತ್ರೋಪಕರಣಗಳ ಬಳಕೆ ಕುರಿತು ರೈತರ ಅನುಭವ ಮತ್ತು ಅಭಿಪ್ರಾಯಗಳನ್ನು ಸಂಗ್ರಹಿಸಿದರು. ಈ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿನ ಕೃಷಿ ಸಮಸ್ಯೆಗಳನ್ನು ಅರಿತುಕೊಳ್ಳಲು ಹಾಗೂ ಪ್ರಾಯೋಗಿಕ ಜ್ಞಾನ ಪಡೆಯಲು ವಿದ್ಯಾರ್ಥಿಗಳಿಗೆ ಅವಕಾಶ ದೊರೆಯಿತು.

ಕೃಷಿ ಮಹಾವಿದ್ಯಾಲಯದ ಡೀನ್ ಡಾ. ಬಿ. ಎಂ. ದೊಡ್ಡಮನಿ, ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಮುಖ್ಯಸ್ಥ ಡಾ. ಕೆ. ಎಂ. ದೊಡ್ಡಮನಿ ಹಾಗೂ ಕೃಷಿ ವಿಸ್ತರಣಾ ಸಹ ಪ್ರಾಧ್ಯಾಪಕ ಡಾ. ಸಿದ್ರಾಮ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಎರಡು ತಿಂಗಳ ಅವಧಿಯ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮವು ಗಬ್ಬೂರು ಬಿ ಮತ್ತು ಬೈರಾಮಡಗಿ ಗ್ರಾಮಗಳಲ್ಲಿ ಮುಂದುವರಿಯಲಿದೆ.

Leave A Reply

Your email address will not be published.