ಕಲಬುರಗಿ: ಕರ್ನಾಟಕ ವಿಧಾನ ಪರಿಷತ್ತಿಗೆ ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಒಂದು ಸ್ಥಾನ ಆಯ್ಕೆಗೆ ಶುಕ್ರವಾರ ಕಲಬುರಗಿ ಜಿಲ್ಲೆಯಲ್ಲಿ ಶಾಂತಿಯುತವಾಗಿ ಮತದಾನ ನಡೆದಿದ್ದು, ಒಟ್ಟು 40 ಮತಗಟ್ಟೆಯಲ್ಲಿ ಶೇ.84.38ರಷ್ಟು ಮತದಾನವಾಗಿದೆ ಎಂದು ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಯಾಗಿರುವ ಕಲಬುರಗಿ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ತಿಳಿಸಿದ್ದಾರೆ.
ಕಲಬುರಗಿ ನಗರದಲ್ಲಿ 10 ಸೇರಿದಂತೆ ಒಟ್ಟಾರೆಯ ಜಿಲ್ಲೆಯ 40 ಮತಗಟ್ಟೆಯಲ್ಲಿ ಮತದಾನ ಶಾಂತಿಯುತವಾಗಿ ನಡೆದಿದೆ.
ಜಿಲ್ಲೆಯಲ್ಲಿ 5,672 ಪುರುಷರು, 4,980 ಮಹಿಳೆಯರು ಸೇರಿ ಒಟ್ಟು 10,652 ಮತದಾರರ ಪೈಕಿ 5,002 ಪುರುಷರು, 3,986 ಮಹಿಳೆಯರು ಸೇರಿ 8,988 ಜನ ತಮ್ಮ ಹಕ್ಕು ಚಲಾಯಿಸಿದ್ದು, ಶೇ.84.38ರಷ್ಟು ಮತದಾನವಾಗಿದೆ ಎಂದಿದ್ದಾರೆ.
ಸೇಡಂ ತಾಲೂಕಿನ ಅಡಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆ ಸಂ.91ರಲ್ಲಿ ಪುರುಷ 15, ಮಹಿಳೆ 9 ಸೇರಿ ಒಟ್ಟು 25 ಮತದಾರರಿದ್ದು, ಅಷ್ಟು ಜನ ಮತದಾನ ಮಾಡುವ ಮೂಲಕ ಶೇ.100ರಷ್ಟು ಮತದಾನವಾದ ಮತಗಟ್ಟೆಯಾಗಿ ಗುರುತಿಸಿಕೊಂಡಿದೆ. ಇನ್ನು ಕಲಬುರಗಿ ತಾಲೂಕಿನ ಪಟ್ಟಣ ನಾಡ ಕಚೇರಿ ಮತಗಟ್ಟೆ ಸಂಖ್ಯೆ-69ರಲ್ಲಿ 42 ಪುರುಷ, 25 ಮಹಿಳೆ ಸೇರಿ ಒಟ್ಟು 67 ಮತದಾರರಿದ್ದು, ಇದರಲ್ಲಿ ಪುರುಷ 35, ಮಹಿಳೆ 16 ಸೇರಿ ಒಟ್ಟು 51 ಜನ ಮತದಾರರು ಮತ ಚಲಾಯಿಸಿದ್ದು(ಶೇ.76.12) ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಮತದಾನವಾದ ಕೇಂದ್ರವಾಗಿದೆ.