ಕಲಬುರಗಿ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅ. 28 ಮತ್ತು 29 ರಂದು ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಕಾಲ ಕಲಬುರಗಿ ಜಿಲ್ಲಾ 23 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆ ಭರದಿಂದ ಸಾಗಿದ್ದು, ಸಮ್ಮೇಳನದ ಯಶಸ್ವಿಗಾಗಿ ರಚಿಸಲಾದ ಸ್ವಾಗತ ಸಮಿತಿಗೆ ಅಧ್ಯಕ್ಷರಾಗಿ ನೇಮಕಗೊಂಡ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳೂಂಡಗಿ ಹಾಗೂ ಗೌರವಾಧ್ಯಕ್ಷರೂ ಆದ ಮಾಜಿ ಉಪ ಮಹಾಪೌರರಾದ ನಾಗವೇಣಿ ತಿಪ್ಪಣ್ಣಪ್ಪ ಕಮಕನೂರ ಅವರನ್ನು ಸತ್ಕರಿಸಿ ಗೌರವಿಸಲಾಯಿತು.
ನಾಗವೇಣಿ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಈ ಮುಂಚೆ ಪಂಡಿತರಿಗಷ್ಟೇ ಸೀಮಿತ ಆಗಿತ್ತು. ಆದರೆ ಈಗ ಜಿಲ್ಲೆಯಲ್ಲಿ ನಮ್ಮಂಥ ಜನ ಸಾಮಾನ್ಯರ ಸಂಸ್ಥೆಯಾಗಿ ಬೆಳೆಸಿದ ಕೀರ್ತಿ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರಿಗೆ ಸಲ್ಲುತ್ತದೆ. ಇದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ. ಸಮ್ಮೇಳನಕ್ಕೆ ಸಹಕರಿಸುವುದಾಗಿ ತಿಳಿಸಿದರು.
ಸಮಿತಿ ಅಧ್ಯಕ್ಷರೂ ಆದ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ, ಸಮಾಜಕ್ಕೆ ಕೊಡುಗೆ ನೀಡಿದ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಕನ್ನಡಾಭಿಮಾನ ಬೆಳೆಸಿಕೊಂಡು ಕನ್ನಡ ಭಾಷೆ ಉಳಿಸುವ ಕಾರ್ಯ ಪರಿಷತ್ ವತಿಯಿಂದ ಮಾಡಲಾಗುತ್ತಿದೆ ಎಂದು ಮಾರ್ಮಿಕವಾಗಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕನ್ನಡ ಭಾಷೆಯ ಅಭಿವೃದ್ಧಿಗೆ, ಸಂಸ್ಕೃತಿ, ಸಾಹಿತ್ಯದ ರಕ್ಷಣೆಗೆ ಕನ್ನಡ ಸಾಹಿತ್ಯ ಪರಿಷತ್ ಶ್ರಮಿಸುತ್ತಿದೆ. ನನ್ನ ಐದು ವರ್ಷದ ಈ ಅವಧಿಯಲ್ಲಿ ಆರು ಜಿಲ್ಲಾ ಸಾಹಿತ್ಯ ಸಮ್ಮೇಳನಗಳು ಆಯೋಜಿಸಿ ದಾಖಲೆ ಮಾಡಿದೆ ಎಂದರು.
ಜಿಲ್ಲಾ ಕಸಾಪ ಕಾರ್ಯದರ್ಶಿ ಶಿವರಾಜ ಅಂಡಗಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಪ್ರಮುಖರಾದ ಸೈಯ್ಯದ್ ನಜಿರುದ್ದಿನ್ ಮುತ್ತವಲ್ಲಿ, ರವೀಂದ್ರಕುಮಾರ ಭಂಟನಳ್ಳಿ, ಧರ್ಮರಾಜ ಜವಳಿ, ಹಣಮಂತರಾವ ಪೆಂಚನಪಳ್ಳಿ, ನಾಗರಾಜ ಪಾಟೀಲ, ಅನೀಲಕುಮಾರ ಪಾಟೀಲ ತೇಗಲತಿಪ್ಪಿ, ರವಿಕುಮಾರ ಶಹಾಪೂರಕರ್, ರಾಜು ಕೋಷ್ಟಿ, ಪ್ರೊ. ಬಿ.ಎ. ಪಾಟೀಲ ಮಹಾಗಾಂವ, ಸಂಗಣ್ಣ ಚೋರಗಸ್ತಿ, ಮಲ್ಲಿನಾಥ ಸಂಗಶೆಟ್ಟಿ, ಜಯಶ್ರೀ ಜಮಾದಾರ, ಪ್ರಭುಶೆಟ್ಟಿ ಮುದ್ದಾ, ನಾಗರಾಜ ಪೂಜಾರಿ, ಮಲ್ಲಿಕಾರ್ಜುನ ಯಂಕoಚಿ, ಚಂದ್ರಕಾoತ ಸೂರನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಲೋಕೋಪಯೋಗಿ ಇಲಾಖೆಯ ನಿವೃತ್ತ ಮುಖ್ಯ ಇಂಜಿನಿಯರ್ ಡಾ. ಸುರೇಶ ಶರ್ಮಾ ಹಾಗೂ ವಾಣಿಜ್ಯ ತೆರಿಗೆ ಇಲಾಖೆಯ ಕಾಶಿನಾಥ ಪಲ್ಲೇರಿ ಅವರನ್ನು ಗೌರವಾಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.