Shubhashaya News

ಉದ್ಯೋಗ ಖಾತ್ರಿ ಯೋಜನೆಯ ಐದು ತಿಂಗಳ ಬಾಕಿ ವೇತನ ಬಿಡುಗಡೆಗೆ ಆಗ್ರಹ

ಕಲಬುರಗಿ: ಬರಗಾಲದಿಂದ ಸಂಕಷ್ಟಕ್ಕೆ ಸಿಲುಕಿರುವ ಭೀಮಳ್ಳಿ ಗ್ರಾಮದ ಕೃಷಿ ಕಾರ್ಮಿಕರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕಳೆದ ಐದು ತಿಂಗಳಿಂದ ಬಾಕಿ ಉಳಿದಿರುವ ವೇತನವನ್ನು ತಕ್ಷಣ ಬಿಡುಗಡೆ ಮಾಡಬೇಕು ಹಾಗೂ ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ ನೇತೃತ್ವದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಕೃಷಿ ಕಾರ್ಮಿಕರು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನಿರ್ವಹಿಸಿದ್ದರೂ ಕಳೆದ ಐದು ತಿಂಗಳಿಂದ ವೇತನ ಪಾವತಿಯಾಗಿಲ್ಲ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ವಿಳಂಬ ಮಾಡುತ್ತಿರುವುದರಿಂದ ಕಾರ್ಮಿಕ ಕುಟುಂಬಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಇತ್ತೀಚೆಗೆ ಮುಗಿದ ವಿಜಯದಶಮಿ ಹಬ್ಬವನ್ನೂ ಕೈಯಲ್ಲಿ ಹಣವಿಲ್ಲದೆ ಆಚರಿಸಬೇಕಾದ ಪರಿಸ್ಥಿತಿ ಕಾರ್ಮಿಕ ಕುಟುಂಬಗಳಿಗೆ ಎದುರಾಗಿದೆ. ದುಡಿದ ಹಣ ಸಕಾಲದಲ್ಲಿ ದೊರೆಯದ ಕಾರಣ ದೈನಂದಿನ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಆದ್ದರಿಂದ ಜಿಲ್ಲಾಡಳಿತ ಕೂಡಲೇ ಮಧ್ಯಪ್ರವೇಶಿಸಿ, ಬಾಕಿ ಉಳಿದಿರುವ ಸಂಪೂರ್ಣ ವೇತನವನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರಸಕ್ತ ಸಾಲಿನಲ್ಲಿ ಮಳೆಯ ಕೊರತೆಯಿಂದ ಭೀಮಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ತೀವ್ರ ಅಭಾವ ಉಂಟಾಗಿದೆ. ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದ್ದು, ಜಾನುವಾರುಗಳಿಗೂ ಮೇವಿನ ಕೊರತೆ ಎದುರಾಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಜಿಲ್ಲಾಡಳಿತವು ತುರ್ತಾಗಿ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಪೂರೈಸಲು ಸೂಕ್ತ ವ್ಯವಸ್ಥೆ ಮಾಡಬೇಕು. ಬರ ಪರಿಸ್ಥಿತಿಯಿಂದ ಸಂಕಷ್ಟದಲ್ಲಿರುವ ಜಾನುವಾರುಗಳಿಗೆ ಮೇವು ಒದಗಿಸಲು ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯ ಸಂದರ್ಭದಲ್ಲಿ ಮೊದಲು ಉದ್ಯೋಗ ಖಾತ್ರಿ ಯೋಜನೆಯ ಜಿಲ್ಲಾ ನೋಡಲ್ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಬಳಿಕ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಭೇಟಿಯಾಗಿ ಕಾರ್ಮಿಕರ ಸಮಸ್ಯೆಗಳನ್ನು ವಿವರಿಸಿ, ಬಾಕಿ ವೇತನ ಬಿಡುಗಡೆ ಹಾಗೂ ಭೀಮಳ್ಳಿ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಒದಗಿಸುವಂತೆ ಮನವಿ ಮಾಡಲಾಯಿತು.

ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಮಹೇಶ್ ಎಸ್.ಬಿ., ತಾಲೂಕು ಅಧ್ಯಕ್ಷ ವಿಶ್ವನಾಥ್ ಭೀಮಳ್ಳಿ, ಅನೀಲ್, ರಮೇಶ್, ದಸ್ತಗಿರ್, ಮಲ್ಲಮ್ಮ, ಪುತಳಾಬಾಯಿ, ಜೈತುನ್ ಬೀ, ಬಸವರಾಜ್, ಅಶೋಕ್ ಗುತ್ತೇದಾರ್, ನದೀಮ್ ಶಾ ದರ್ವೇಜ್, ಶಿವಕುಮಾರ್, ಭೀಮು ಆಂದೋಲಾ, ದೇವೇಂದ್ರ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Leave A Reply

Your email address will not be published.