Shubhashaya News

ಭಾರತದಲ್ಲಿ ಬೇಳೆ ಬೇಯದ ಮಸ್ಕ್‌ನ ಹತಾಶೆಯ ಹುಚ್ಚಾಟ!

ಜಗತ್ತಿನ ಅತಿ ದೊಡ್ಡ ಮಾರುಕಟ್ಟೆಯಾಗಿರುವ ಭಾರತದ ಮೇಲೆ ಈಗ ಜಾಗತಿಕ ಕುಳಗಳ ಕಣ್ಣು ಬಿದ್ದಿದೆ. ತಂತ್ರಜ್ಞಾನದ ಹೆಸರಿನಲ್ಲಿ ಬಂದು ದೇಶದ ಸಂಪತ್ತನ್ನು, ದತ್ತಾಂಶವನ್ನು (Data) ಕೊಳ್ಳೆಹೊಡೆಯುವ ಹೊಸ ವಸಾಹತುಶಾಹಿ ಆಟಗಳು ಶುರುವಾಗಿವೆ. ಇಂತಹ ಬಿಲಿಯನೇರ್‌ಗಳ ಪೈಕಿ ಮುಂಚೂಣಿಯಲ್ಲಿರುವ ಹೆಸರು ಎಲಾನ್ ಮಸ್ಕ್. ಅವರ ‘ಸ್ಟಾರ್‌ಲಿಂಕ್’ ಎಂಬ ಉಪಗ್ರಹ ಆಧಾರಿತ ಇಂಟರ್ನೆಟ್ ಸೇವೆಯನ್ನು ಭಾರತದೊಳಗೆ ನುಗ್ಗಿಸಲು ಅವರು ಈಗ ಹರಸಾಹಸ ಪಡುತ್ತಿದ್ದಾರೆ. ಭಾರತದ ನಿಯಮಗಳಿಗೆ ತಲೆಬಾಗಲು ಸಿದ್ಧವಿಲ್ಲದ ಈ ಕುಬೇರ, ನಮ್ಮ ದೇಶದ ಆಂತರಿಕ ವಿಚಾರಗಳನ್ನು ಜಾಗತಿಕ ಮಟ್ಟದಲ್ಲಿ ಪ್ರಶ್ನಿಸುವ ದುಸ್ಸಾಹಸಕ್ಕೆ ಕೈಹಾಕಿದ್ದಾರೆ.

​ಬಾನಂಗಳದಲ್ಲಿ ಉಪಗ್ರಹಗಳನ್ನು ಹರಿಬಿಟ್ಟು, ಜಗತ್ತಿನ ಮೂಲೆ ಮೂಲೆಗೂ ಇಂಟರ್ನೆಟ್ ಕೊಡುವ ಮಸ್ಕ್ ಯೋಜನೆ ಮೇಲ್ನೋಟಕ್ಕೆ ಅದ್ಭುತವಾಗಿ ಕಾಣುತ್ತದೆ. ಕುಗ್ರಾಮಗಳಿಗೂ ವೇಗದ ಇಂಟರ್ನೆಟ್ ಸಿಗುತ್ತದೆ ಎಂಬುದು ನಮಗೂ ಲಾಭದಾಯಕ ವಿಷಯವೇ. ಆದರೆ, ಈ ಲಾಭದ ಹಿಂದಿರುವ ಭೌಗೋಳಿಕ ರಾಜಕೀಯ ಅಪಾಯಗಳನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕು. ಸ್ಟಾರ್‌ಲಿಂಕ್ ಎಂಬುದು ಒಂದು ಮನರಂಜನಾ ಆಪ್ ಅಲ್ಲ. ಅದೊಂದು ಬೃಹತ್ ಉಪಗ್ರಹ ಸಂವಹನ ಜಾಲವಾಗಿದೆ. ದೇಶದ ಕೋಟ್ಯಂತರ ಜನರ ಭದ್ರತೆ, ಖಾಸಗಿತನ ಮತ್ತು ರಾಷ್ಟ್ರೀಯ ಹಿತಾಸಕ್ತಿಗಳು ಈ ಜಾಲದ ಜೊತೆಗೆ ತಳುಕುಹಾಕಿಕೊಂಡಿವೆ.

​ಅಮೆರಿಕದ ದ್ವಂದ್ವ ನೀತಿ ಮತ್ತು ಮೋಸದ ಆಟಗಳನ್ನು ನಾವು ಅರ್ಥಮಾಡಿಕೊಳ್ಳಲೇಬೇಕು. ಜಗತ್ತಿಗೆಲ್ಲಾ ಮುಕ್ತ ಮಾರುಕಟ್ಟೆಯ ವೇದಾಂತವನ್ನು ಅಮೆರಿಕ ಬೋಧಿಸುತ್ತದೆ. ತನ್ನ ದೇಶದ ಕಂಪನಿಗಳಿಗೆ ಇಡೀ ಜಗತ್ತು ಕೆಂಪು ಕಂಬಳಿ ಹಾಸಿ ಸ್ವಾಗತಿಸಬೇಕು ಎಂದು ಅದು ಬಯಸುತ್ತದೆ. ಅದೇ ಅಮೆರಿಕ ತನ್ನ ನೆಲದಲ್ಲಿ ಬೇರೆ ದೇಶದ ಕಂಪನಿಗಳು ಬೆಳೆಯಲು ಬಿಡುವುದಿಲ್ಲ. ಚೀನಾದ ‘ಬಿವೈಡಿ’ ಎಲೆಕ್ಟ್ರಿಕ್ ಕಾರುಗಳು ಅಮೆರಿಕದ ಮಾರುಕಟ್ಟೆ ಪ್ರವೇಶಿಸದಂತೆ ಅಲ್ಲಿನ ಸರ್ಕಾರ ನಿರ್ಬಂಧ ಹೇರಿದೆ. ಎಲಾನ್ ಮಸ್ಕ್ ಅವರ ‘ಟೆಸ್ಲಾ’ ಕಾರುಗಳಿಗೆ ಪೈಪೋಟಿ ಎದುರಾಗಬಾರದು ಎಂಬ ಏಕೈಕ ಕಾರಣಕ್ಕೆ ಅಮೆರಿಕ ಈ ರಕ್ಷಣಾತ್ಮಕ ಹೆಜ್ಜೆ ಇಟ್ಟಿದೆ. ತನ್ನ ಸ್ವದೇಶಿ ಕಂಪನಿಯನ್ನು ರಕ್ಷಿಸಿಕೊಳ್ಳಲು ಅಮೆರಿಕ ಎಂತಹ ಕಠಿಣ ನಿರ್ಧಾರವನ್ನಾದರೂ ತೆಗೆದುಕೊಳ್ಳುತ್ತದೆ.

​ಭಾರತದ ಐಟಿ ಕಂಪನಿಗಳ ಮೇಲೂ ಅಮೆರಿಕ ಇಂತಹದ್ದೇ ಪ್ರಹಾರ ನಡೆಸಿದೆ. ನಮ್ಮ ಹೆಮ್ಮೆಯ ಟಿಸಿಎಸ್, ವಿಪ್ರೋ, ಇನ್ಫೋಸಿಸ್‌ನಂತಹ ದಿಗ್ಗಜ ಕಂಪನಿಗಳು ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿವೆ. ಅಲ್ಲಿನ ಗ್ರೀನ್ ಕಾರ್ಡ್ ಪ್ರಕ್ರಿಯೆಗಳಲ್ಲಿ (PERM) ಈ ಭಾರತೀಯ ಕಂಪನಿಗಳಿಗೆ ಅಮೆರಿಕ ಸರ್ಕಾರ ಉದ್ದೇಶಪೂರ್ವಕವಾಗಿ ತಡೆ ಒಡ್ಡಿದೆ. ತನ್ನ ದೇಶದ ಉದ್ಯೋಗಗಳನ್ನು ರಕ್ಷಿಸಿಕೊಳ್ಳಲು ಅಮೆರಿಕ ತನ್ನದೇ ಆದ ಗೋಡೆಗಳನ್ನು ಕಟ್ಟಿಕೊಳ್ಳುತ್ತದೆ. ತನ್ನ ಆರ್ಥಿಕ ಮತ್ತು ಆಯಕಟ್ಟಿನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವ ಹಕ್ಕು ತನಗೆ ಮಾತ್ರ ಇದೆ ಎಂಬುದು ಅಮೆರಿಕದ ಅಹಂಕಾರ.

​ಇದೇ ನ್ಯಾಯ ಭಾರತಕ್ಕೂ ಅನ್ವಯಿಸುತ್ತದೆ. ನಮ್ಮ ದೇಶದ ಭದ್ರತೆ, ನಮ್ಮ ದೇಶದ ಕಾನೂನು ನಮಗೆ ಅಂತಿಮ. ಎಲಾನ್ ಮಸ್ಕ್ ಅವರ ಸ್ಟಾರ್‌ಲಿಂಕ್ ಕಂಪನಿಗೆ ಭಾರತದಲ್ಲಿ ಈಗಾಗಲೇ ಟೆಲಿಕಾಂ ಪರವಾನಗಿ ಸಿಕ್ಕಿದೆ. ಅವರು ಭಾರತದಲ್ಲಿ ತಮ್ಮ ಸೇವೆ ಆರಂಭಿಸಲು ಬಾಕಿ ಇರುವುದು ಕೇವಲ ‘ಭದ್ರತಾ ಅನುಸರಣೆ’ (Security Compliances) ಮತ್ತು ‘ನಿಯಂತ್ರಣಾ ಮಂಡಳಿಯ ಅನುಮೋದನೆ’ ಮಾತ್ರ. ಯಾವುದೇ ಸಾರ್ವಭೌಮ ರಾಷ್ಟ್ರ ತನ್ನ ದೇಶದ ಸಂವಹನ ಜಾಲವನ್ನು ಒದಗಿಸುವಾಗ ಇಂತಹ ಭದ್ರತಾ ಷರತ್ತುಗಳನ್ನು ವಿಧಿಸುವುದು ಕಡ್ಡಾಯ. ಜಿಯೋ, ಏರ್‌ಟೆಲ್‌ನಂತಹ ನಮ್ಮ ದೇಶದ ಕಂಪನಿಗಳು ಇದೇ ನಿಯಮಗಳನ್ನು ಪಾಲಿಸುತ್ತಿವೆ. ಮಸ್ಕ್ ಅವರಿಗಾಗಿಯೇ ನಿಯಮಗಳನ್ನು ಸಡಿಲಿಸುವ ದರ್ದು ಭಾರತಕ್ಕಿಲ್ಲ.

​ಭಾರತದ ಮಾರುಕಟ್ಟೆಯನ್ನು ಆಕ್ರಮಿಸಲು ಮಸ್ಕ್ ಅಡ್ಡದಾರಿಗಳನ್ನು ತುಳಿಯುತ್ತಿದ್ದಾರೆ. ಭಾರತೀಯ ಉದ್ದಿಮೆದಾರರು ತಮ್ಮ ಪ್ರವೇಶವನ್ನು ತಡೆಯುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬೊಬ್ಬೆ ಹೊಡೆಯುತ್ತಿದ್ದಾರೆ. ಭಾರತದ ಆಂತರಿಕ ರಾಜಕೀಯವನ್ನು ಬಳಸಿಕೊಂಡು, ಇಲ್ಲಿನ ವ್ಯವಸ್ಥೆಯ ಮೇಲೆ ಒತ್ತಡ ಹೇರುವ ತಂತ್ರಗಾರಿಕೆ ಇದಾಗಿದೆ. ಅಮೆರಿಕದ ಆಡಳಿತವೂ ಭಾರತದ ಮೇಲೆ ತೆರಿಗೆ ಕಡಿತದಂತಹ ವಿಚಾರಗಳಲ್ಲಿ ನಿರಂತರ ಒತ್ತಡ ಹೇರುತ್ತಲೇ ಬಂದಿದೆ.

​ನಾವು ಸ್ಟಾರ್‌ಲಿಂಕ್‌ಗೆ ಕುರುಡಾಗಿ ಮಣೆಹಾಕಿದರೆ ಭಾರತ ದೊಡ್ಡ ಬೆಲೆಯನ್ನು ತೆರಬೇಕಾಗುತ್ತದೆ. ನಮ್ಮ ದೇಶದ ಇಂಟರ್ನೆಟ್ ಸಂಪರ್ಕದ ನಿಯಂತ್ರಣ ವಿದೇಶಿ ಕಂಪನಿಯ ಕೈಗೆ ಹೋದರೆ, ಯುದ್ಧ ಅಥವಾ ತುರ್ತು ಪರಿಸ್ಥಿತಿಗಳಲ್ಲಿ ಅವರು ಆ ಸಂಪರ್ಕವನ್ನು ಕಡಿತಗೊಳಿಸುವ ಅಪಾಯವಿರುತ್ತದೆ. ನಮ್ಮ ಸೇನಾ ಭದ್ರತೆ ಮತ್ತು ಆಂತರಿಕ ಸಂವಹನದ ಮೇಲೆ ವಿದೇಶಿ ಕುಳಗಳು ಕಣ್ಣಿಡಲು ನಾವೇ ಅವಕಾಶ ಮಾಡಿಕೊಟ್ಟಂತಾಗುತ್ತದೆ. ದತ್ತಾಂಶವೇ ಇಂದಿನ ಜಗತ್ತಿನ ಅತಿ ದೊಡ್ಡ ಅಸ್ತ್ರ. ಭಾರತೀಯರ ದತ್ತಾಂಶ ಭಾರತದಲ್ಲಿಯೇ ಸುರಕ್ಷಿತವಾಗಿರಬೇಕು.

​ಭಾರತ ಇಂದು ದಶಕಗಳ ಹಿಂದಿನ ದುರ್ಬಲ ರಾಷ್ಟ್ರವಾಗಿ ಉಳಿದಿಲ್ಲ. ಜಾಗತಿಕ ವೇದಿಕೆಯಲ್ಲಿ ಕಣ್ಣಿಗೆ ಕಣ್ಣಿಟ್ಟು ಮಾತನಾಡುವ ತಾಕತ್ತು ಇಂದಿನ ನವಭಾರತಕ್ಕಿದೆ. ರಾಷ್ಟ್ರೀಯ ಹಿತಾಸಕ್ತಿಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಭಾರತದ ೧೪೦ ಕೋಟಿ ಜನರ ಮಾರುಕಟ್ಟೆ ಬೇಕು ಎನ್ನುವವರು ಭಾರತದ ಸಂವಿಧಾನ, ಸಾರ್ವಭೌಮತೆ ಮತ್ತು ಭದ್ರತಾ ನಿಯಮಗಳಿಗೆ ತಲೆಬಾಗಿಯೇ ಒಳಬರಬೇಕು. ಮಸ್ಕ್ ಆಗಲಿ, ಇನ್ನಾವುದೇ ಜಾಗತಿಕ ಕುಬೇರನಾಗಲಿ, ಭಾರತದ ಗಡಿಯಲ್ಲಿ ನಿಂತು ನಮ್ಮದೇ ನಿಯಮಗಳನ್ನು ಪಾಲಿಸಬೇಕು. ಹೊಸ ಭಾರತದ ಉಕ್ಕಿನ ಹೆಜ್ಜೆಗಳನ್ನು ಜಗತ್ತು ಈಗ ಮೌನವಾಗಿ ನೋಡಲೇಬೇಕಿದೆ.

ಶಿವರಾಜ ಸೂ. ಸಣಮನಿ, ಮದಗುಣಕಿ

Leave A Reply

Your email address will not be published.