ಆಳಂದ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಸ್ವಪಕ್ಷೀಯರಿಂದಲೇ ನಡೆಯುತ್ತಿರುವಂತೆ ರಾಜಕೀಯ ಬೆಳವಣಿಗೆಗಳು ಗೋಚರಿಸುತ್ತಿದ್ದು, ಕಾಂಗ್ರೆಸ್‌ನಲ್ಲಿನ ಆಂತರಿಕ ಬಣ ರಾಜಕಾರಣ ಸರ್ಕಾರದ ಸ್ಥಿರತೆ ಹಾಗೂ ಜನರ ವಿಶ್ವಾಸದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಹೇಶ್ವರಿ ಎಸ್. ವಾಲಿ ಆರೋಪಿಸಿದರು.
ಬೆಂಗಳೂರಿನ ನಿವಾಸದಿಂದ ಗುರುವಾರ ದೂರವಾಣಿ ಮೂಲಕ ‘ನಮ್ಮ ಪ್ರತಿನಿಧಿ’ಯೊಂದಿಗೆ ಮಾತನಾಡಿದ ಅವರು, ರಾಜ್ಯದ ರಾಜಕೀಯ ಬೆಳವಣಿಗೆಗಳ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್‌ನಲ್ಲಿ ಆಂತರಿಕವಾಗಿ ಎರಡು ಬಣಗಳಾಗಿ ರಾಜಕೀಯ ಚಟುವಟಿಕೆಗಳು ನಡೆಯುತ್ತಿರುವುದು ಸಾರ್ವಜನಿಕವಾಗಿ ಚರ್ಚೆಯಾಗುತ್ತಿದೆ. ಒಂದು ಬಣದಿಂದಲೇ ಸರ್ಕಾರಕ್ಕೆ ಕಂಟಕ ಉಂಟು ಮಾಡುವಂತಹ ಬೆಳವಣಿಗೆಗಳು ನಡೆಯುತ್ತಿರುವುದು ಕಂಡುಬರುತ್ತಿದೆ. ಇದರಿಂದ ಆಡಳಿತದ ಮೇಲೆ ಜನರು ಇಟ್ಟಿರುವ ವಿಶ್ವಾಸಕ್ಕೆ ಧಕ್ಕೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಾಲಿ ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣದಿಂದ ಸರ್ಕಾರವನ್ನು ಅಸ್ಥಿರಗೊಳಿಸುವ ರೀತಿಯಲ್ಲಿ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಬೆಳವಣಿಗೆಗಳಲ್ಲಿ ಆಳಂದ ಕ್ಷೇತ್ರದ ಕೆಲ ಕಾಂಗ್ರೆಸ್ ಮುಖಂಡರೊಬ್ಬರು ಮುಂಚೂಣಿಯಲ್ಲಿದ್ದಾರೆ ಎಂಬುದು ತಮ್ಮ ಗಮನಕ್ಕೆ ಬಂದಿದೆ ಎಂದು ಅವರು ಆರೋಪಿಸಿದರು.
ಆಳಂದ ಕ್ಷೇತ್ರದ ಕೆಲ ಮುಖಂಡರು ಈ ಹಿಂದೆಯೂ ಕಾಂಗ್ರೆಸ್ ಪಕ್ಷದ ವಿರುದ್ಧ ವಿವಿಧ ಹಂತಗಳಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಪಕ್ಷದಲ್ಲಿ ತಮಗೆ ನಿರೀಕ್ಷಿತ ಸ್ಥಾನಮಾನ ಅಥವಾ ಹುದ್ದೆ ದೊರೆಯದಿರುವ ಅಸಮಾಧಾನವೂ ಇಂತಹ ಬೆಳವಣಿಗೆಗಳಿಗೆ ಕಾರಣವಾಗಿರಬಹುದು. ಆದರೆ ವೈಯಕ್ತಿಕ ಅಧಿಕಾರದ ವಿಚಾರಕ್ಕಿಂತ ರಾಜ್ಯದ ಆಡಳಿತ ಮತ್ತು ಜನರ ಹಿತವೇ ಮುಖ್ಯವಾಗಬೇಕು ಎಂದು ಮಹೇಶ್ವರಿ ವಾಲಿ ಹೇಳಿದರು.
ರಾಜ್ಯದಲ್ಲಿ ರೈತರು, ಕೃಷಿ ಕಾರ್ಮಿಕರು ಹಾಗೂ ಬಡಜನರು ಹಲವು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ತಮ್ಮ ಸಮಸ್ಯೆಗಳಿಗೆ ಸ್ಪಂದಿಸಲಿದೆ, ಸಂಕಷ್ಟದ ಸಂದರ್ಭದಲ್ಲಿ ನೆರವಿಗೆ ಬರಲಿದೆ ಎಂಬ ನಿರೀಕ್ಷೆ ಜನರಲ್ಲಿ ಇತ್ತು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಜನಪರ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಿದೆ ಎಂಬ ವಿಶ್ವಾಸವೂ ಆರಂಭದಲ್ಲಿ ಮೂಡಿತ್ತು ಎಂದು ಅವರು ಹೇಳಿದರು.
ಆದರೆ ಸರ್ಕಾರದೊಳಗಿನ ಆಂತರಿಕ ತಿಕ್ಕಾಟ, ನಾಯಕತ್ವದ ವಿಚಾರದಲ್ಲಿ ನಡೆಯುತ್ತಿರುವ ರಾಜಕೀಯ ಚರ್ಚೆಗಳು ಹಾಗೂ ಪರಸ್ಪರ ಆರೋಪ–ಪ್ರತ್ಯಾರೋಪಗಳು ಮುಂದುವರಿದರೆ ಅದರ ನೇರ ಪರಿಣಾಮ ಜನರ ಮೇಲೆ ಬೀಳಲಿದೆ. ಆಡಳಿತ ಯಂತ್ರದ ಮೇಲೆ ಒತ್ತಡ ಹೆಚ್ಚುವುದರ ಜತೆಗೆ ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ಸರ್ಕಾರದ ಸಾಮರ್ಥ್ಯದ ಬಗ್ಗೆಯೂ ಅನುಮಾನ ಮೂಡುವ ಸಾಧ್ಯತೆ ಇದೆ ಎಂದು ವಾಲಿ ಹೇಳಿದರು.
ಸರ್ಕಾರದ ಸಾಧನೆಗಳ ಕುರಿತು ಆಡಳಿತ ಪಕ್ಷದವರೇ ಅಸಮಾಧಾನ ವ್ಯಕ್ತಪಡಿಸುವಂತಹ ವಾತಾವರಣ ನಿರ್ಮಾಣವಾಗಿರುವುದು ಗಮನಾರ್ಹ. ರಾಜ್ಯದ ಆರ್ಥಿಕ ಪರಿಸ್ಥಿತಿ, ರೈತರ ಸಮಸ್ಯೆಗಳು, ಉದ್ಯೋಗದ ಕೊರತೆ, ಬೆಲೆ ಏರಿಕೆ ಸೇರಿದಂತೆ ಜನಸಾಮಾನ್ಯರ ಹಲವು ಸಮಸ್ಯೆಗಳು ಇನ್ನೂ ಬಗೆಹರಿಯಬೇಕಿವೆ. ಇಂತಹ ಸಂದರ್ಭದಲ್ಲಿ ಅಧಿಕಾರಕ್ಕಾಗಿ ನಡೆಯುವ ಆಂತರಿಕ ಸಂಘರ್ಷಕ್ಕೆ ಆದ್ಯತೆ ನೀಡಿದರೆ ಜನರ ವಿಶ್ವಾಸ ಮತ್ತಷ್ಟು ಕುಸಿಯಲಿದೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಶಿವಕುಮಾರ್ ಅವರು ಪಕ್ಷದೊಳಗಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಸರ್ಕಾರವನ್ನು ಸ್ಥಿರವಾಗಿ ಮುನ್ನಡೆಸಬೇಕು. ರೈತರು, ಕಾರ್ಮಿಕರು, ಮಹಿಳೆಯರು, ಯುವಕರು ಹಾಗೂ ಬಡವರ ಸಮಸ್ಯೆಗಳಿಗೆ ಆದ್ಯತೆ ನೀಡಿ ಆಡಳಿತಕ್ಕೆ ವೇಗ ನೀಡಬೇಕು. ಇಲ್ಲವಾದರೆ ಕಾಂಗ್ರೆಸ್‌ನ ಆಂತರಿಕ ಸಂಘರ್ಷದ ಹೊರೆ ಜನರ ಮೇಲೆ ಬೀಳಲಿದೆ ಎಂದು ವಾಲಿ ಎಚ್ಚರಿಸಿದರು.