Shubhashaya News

ನ್ಯೂಟ್ರಿಷನ್ ಕ್ಲಬ್‌ನ ಕರಾಳ ಮುಖ

​ನಾವು ಎಂಥ ವಿಚಿತ್ರ ಜಗತ್ತಿನಲ್ಲಿ ಬದುಕುತ್ತಿದ್ದೇವೆ ಗೊತ್ತಾ? ಒಂದು ಕಡೆ ನಮ್ಮ ಆರೋಗ್ಯ ಹಾಳಾಗುತ್ತಿದೆ ಎಂಬ ವಿಪರೀತ ಆತಂಕ. ಇನ್ನೊಂದು ಕಡೆ ಇದೇ ಆತಂಕವನ್ನು ಬಂಡವಾಳ ಮಾಡಿಕೊಂಡು ನಮ್ಮ ಜೇಬಿಗೆ ಕನ್ನ ಹಾಕಲು ಕಾಯುತ್ತಿರುವ ಖದೀಮರ ದಂಡು! ಇತ್ತೀಚೆಗೆ ಈ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ಹೊಸ ಟ್ರೆಂಡ್ ಎಂದರೆ, ‘ನೈಸರ್ಗಿಕ’, ‘ನ್ಯೂಟ್ರಿಷನ್’ ಎಂಬ ಲೇಬಲ್ ಅಂಟಿಸಿಕೊಂಡು ಬರುವ ಕೃತಕ ಪುಡಿಗಳ ಡಬ್ಬಿಗಳು. ಇವು ನಮ್ಮ ಆಯಸ್ಸನ್ನು ನಿಧಾನವಾಗಿ ಕಬಳಿಸುವ ‘ಸ್ಲೋ ಪಾಯ್ಸನ್’ಗಳು ಎಂಬುದು ನಮಗೆ ಅರ್ಥವಾಗುವ ಹೊತ್ತಿಗೆ, ನಮ್ಮ ಜೇಬು ಮತ್ತು ದೇಹ ಎರಡೂ ಖಾಲಿಯಾಗಿರುತ್ತವೆ!

​ಸಮಾಜದಲ್ಲಿ ಈಗೊಂದು ಹೊಸ ತಳಿಯ ‘ತಜ್ಞ’ರು ಹುಟ್ಟಿಕೊಂಡಿದ್ದಾರೆ. ಇವರೇನು ಎಂಬಿಬಿಎಸ್ ಓದಿಲ್ಲ, ಆಯುರ್ವೇದ ಪಂಡಿತರೂ ಅಲ್ಲ. ಆದರೆ, ಸೂಟು-ಬೂಟು ಹಾಕಿಕೊಂಡು, ಐಶಾರಾಮಿ ಹೊಟೇಲ್ ಮೀಟಿಂಗ್‌ಗಳಲ್ಲಿ ಪ್ರತ್ಯಕ್ಷರಾಗುವ ಇವರು ತಮ್ಮನ್ನು ತಾವು ‘ಹೆಲ್ತ್ ಕೋಚ್’, ‘ವೆಲ್‌ನೆಸ್ ಗೈಡ್’ ಎಂದೆಲ್ಲ ಬಿಲ್ಡಪ್ ಕೊಡುತ್ತಾರೆ. ಇವರ ಬಾಯಲ್ಲಿ ಇಂಗ್ಲಿಷ್ ಪದಗಳು ನೀರಸವಾಗಿ ಹರಿಯುತ್ತವೆ. ಇವರ ಟೆಕ್ನಿಕ್ ಬಹಳ ಸಿಂಪಲ್; ಮೊದಲು ನಿಮಗೆ ಇರದ ಕಾಯಿಲೆಗಳ ಬಗ್ಗೆ ಭಯ ಹುಟ್ಟಿಸುವುದು. ಆಮೇಲೆ ಸಾವಿನ ಹೆದರಿಕೆ ತೋರಿಸಿ, ತಮ್ಮ ಕಂಪನಿಯ ಸಾವಿರಾರು ರೂಪಾಯಿ ಬೆಲೆಯ ಪೌಡರ್ ಡಬ್ಬಿಗಳನ್ನು ನಿಮ್ಮ ತಲೆಗೆ ಕಟ್ಟುವುದು! ಒಮ್ಮೆ ಇವರ ಬಲೆಗೆ ಬಿದ್ದಿರೋ, ನಿಮ್ಮ ಕಥೆ ಮುಗಿದಂತೆಯೇ ಲೆಕ್ಕ.

​ಇದರ ಅಸಲಿ ಆಟ ಇರುವುದೇ ಈ ‘ಚೈನ್ ಲಿಂಕ್’ ಅಥವಾ ಬಹುಹಂತದ ಮಾರ್ಕೆಟಿಂಗ್ (MLM) ಜಾಲದಲ್ಲಿ. ಇಲ್ಲಿ ಮೇಲಿರುವ ಕಿಲಾಡಿ, ತನ್ನ ಕೆಳಗಿರುವ ಹತ್ತಾರು ಮುಗ್ಧರನ್ನು ಬಲಿಪಶು ಮಾಡಿ ತಾನು ರಾಜನಂತೆ ಮೆರೆಯುತ್ತಾನೆ. ತನ್ನ ಟಾರ್ಗೆಟ್ ಮುಟ್ಟಲು, ತಾನು ಹಾಕಿದ ದುಡ್ಡು ವಾಪಸ್ ಪಡೆಯಲು, ಉಚಿತ ಪ್ರಾಡಕ್ಟ್‌ಗಳನ್ನು ಗಿಟ್ಟಿಸಲು ಇವರು ಯಾರಿಗಾದರೂ ಟೋಪಿ ಹಾಕಲು ಸೈ. ಈ ಜಾಲದ ಅತ್ಯಂತ ಅಪಾಯಕಾರಿ ಸಂಗತಿ ಎಂದರೆ, ನಿಮಗೆ ಈ ಡಬ್ಬಿ ತಂದುಕೊಡುವವನು ಅಪರಿಚಿತನಲ್ಲ; ಅವನು ನಿಮ್ಮದೇ ಆಪ್ತ ಸ್ನೇಹಿತ, ಪಕ್ಕದ ಮನೆಯವನು ಅಥವಾ ಸ್ವಂತ ಸಂಬಂಧಿಯೇ ಆಗಿರುತ್ತಾನೆ! ಕಾರ್ಪೊರೇಟ್ ಕುಳಗಳ ಬ್ರೈನ್ ವಾಶ್‌ಗೆ ಒಳಗಾದ ಇವರು, ತಮಗೆ ಅರಿವಿಲ್ಲದೆಯೇ ನಮ್ಮ ಮನೆಗೆ ವಿಷದ ಡಬ್ಬಿ ತಂದುಕೊಡುವ ಡೆಲಿವರಿ ಬಾಯ್‌ಗಳಾಗುತ್ತಾರೆ. ಅತ್ತ ಸಂಬಂಧವನ್ನೂ ಕಳೆದುಕೊಳ್ಳಲಾಗದೆ, ಇತ್ತ ಆ ಪುಡಿಯನ್ನು ನುಂಗಲೂ ಆಗದೆ ಸಾಮಾನ್ಯ ಜನ ವಿಲವಿಲ ಒದ್ದಾಡುತ್ತಾರೆ.

​ನಾವೇಕೆ ಪದೇ ಪದೇ ಇಂಥವರ ಬುಟ್ಟಿಗೆ ಬೀಳುತ್ತೇವೆ? ಏಕೆಂದರೆ ನಮಗೆ ಯಾವುದೇ ಶ್ರಮವಿಲ್ಲದೆ ತೆಳ್ಳಗಾಗಬೇಕು, ರಾತ್ರೋರಾತ್ರಿ ಸುಂದರವಾಗಬೇಕು. ಈ ಶಾರ್ಟ್-ಕಟ್ ಹುಚ್ಚೇ ಇಂಥ ವಂಚಕರಿಗೆ ರತ್ನಗಂಬಳಿ ಹಾಸುತ್ತಿದೆ. ದುಡ್ಡು ಕೊಟ್ಟು ಕಾಯಿಲೆ ಕೊಂಡುಕೊಳ್ಳುವ ಇಂಥ ದರಿದ್ರ ಪರಿಸ್ಥಿತಿಗೆ ನಾವಿಂದು ಬಂದು ನಿಂತಿದ್ದೇವೆ.

​ಸ್ವಲ್ಪ ಯೋಚಿಸಿ, ನಮ್ಮ ಮಣ್ಣಿನಲ್ಲಿ ಬೆಳೆಯುವ, ನಮ್ಮ ಹಿರಿಯರು ಉಂಡುಂಡು ಗಟ್ಟಿಮುಟ್ಟಾಗಿದ್ದ ಸಹಜ ಆಹಾರಕ್ಕಿಂತ ಈ ವಿದೇಶಿ ಲೇಬಲ್‌ನ ಕೃತಕ ಪುಡಿಗಳು ಶ್ರೇಷ್ಠವೇ? ಖಂಡಿತಾ ಅಲ್ಲ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ. ಯಾರದೋ ಟಾರ್ಗೆಟ್ ರೀಚ್ ಆಗಲಿ ಎಂದು, ಮತ್ಯಾರದೋ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿ ಎಂದು ನಿಮ್ಮ ದೇಹವನ್ನು ಕಸದ ತೊಟ್ಟಿ ಮಾಡಿಕೊಳ್ಳಬೇಡಿ. ಈ ‘ಕೋಚ್’ಗಳ ಬಣ್ಣದ ಮಾತುಗಳಿಗೆ ಮರುಳಾದರೆ ಭಗವಂತನೂ ನಿಮ್ಮನ್ನು ಕಾಪಾಡಲಾರ! ಎಚ್ಚರ!! ಕಟ್ಟೆಚ್ಚರ!!!

Leave A Reply

Your email address will not be published.