ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ: ಧರ್ಮಗುರು ಫಾ. ಸಿಪ್ರಿಯನ್ ಪಿಂಟೊ ಮತ್ತೆ ಬಂಧನ, ನ್ಯಾಯಾಂಗ ಬಂಧನಕ್ಕೆ ————————————— ಮತ್ತಷ್ಟು ಓದಲು ಭೇಟಿ ನೀಡಿ / Read more at: https://kannadanewsnow.com/news.php?title=mangaluru-allegation-of-sexual-harassment-of-a-boy-reverend-fr-ciprian-pinto-re-arrested-judicial-custody © KhushiHost News Portal – All Rights Reserved.
13 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪದಡಿ ಕ್ರೈಸ್ತ ಧರ್ಮಗುರು ಫಾ. ಸಿಪ್ರಿಯನ್ ಪಿಂಟೊ (65) ಅವರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. 2026ರ ಮೇ 13ರಂದು ಉಳ್ಳಾಲ ತಾಲ್ಲೂಕಿನ ಪೆರ್ಮನ್ನೂರು ಗ್ರಾಮದ ಸೇಂಟ್ ಸೆಬಾಸ್ಟಿಯನ್ ಚರ್ಚ್ಗೆ ಪ್ರಾರ್ಥನೆಗೆಂದು ತೆರಳಿದ್ದ ವೇಳೆ ಧರ್ಮಗುರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸಂತ್ರಸ್ತ ಬಾಲಕ ದೂರು ನೀಡಿದ್ದ. ಈ ದೂರಿನ ಆಧಾರದ ಮೇಲೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಸೆಕ್ಷನ್ 75(2) ಹಾಗೂ ಪೋಕ್ಸೊ ಕಾಯ್ದೆಯ ಸೆಕ್ಷನ್ 8 ಮತ್ತು 12ರ ಅಡಿಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಪ್ರಕರಣ ದಾಖಲಾದ ಬಳಿಕ ಆರೋಪಿ ಸಿಪ್ರಿಯನ್ ಪಿಂಟೊ ಅನಾರೋಗ್ಯದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಕಾರಣ ಪೊಲೀಸರು ತಕ್ಷಣವೇ ಬಂಧಿಸಿರಲಿಲ್ಲ. ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ಈ ಪ್ರಕರಣದ ತನಿಖೆಯನ್ನು ಕೇಂದ್ರ ಉಪವಿಭಾಗದ ಎಸಿಪಿ ರವೀಶ್ ನಾಯ್ಕ್ ಅವರಿಗೆ ವಹಿಸಿದ್ದರು. ಇದೀಗ ಆಸ್ಪತ್ರೆಯಿಂದ ಬಿಡುಗಡೆಯಾದ ಬೆನ್ನಲ್ಲೇ ಆರೋಪಿಯನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.
ಇದಕ್ಕೂ ಮುನ್ನ, ನಗರದ ವಲೆನ್ಸಿಯಾದ ಸೇಂಟ್ ವಿನ್ಸೆಂಟ್ ಫೆರಾರ್ ಚರ್ಚ್ನ ಧರ್ಮಗುರುವಾಗಿದ್ದ ಅವಧಿಯಲ್ಲಿ 14 ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಅಕ್ಟೋಬರ್ 15ರಂದು ಮಂಗಳೂರು ದಕ್ಷಿಣ ಠಾಣೆಯಲ್ಲಿ ಇವರ ವಿರುದ್ಧ ಮೊದಲ ಪೋಕ್ಸೊ ಪ್ರಕರಣ ದಾಖಲಾಗಿತ್ತು. ಆ ಪ್ರಕರಣದಲ್ಲಿ ಅ. 18ರಂದು ಬಂಧಿತರಾಗಿ ಅ. 30ರವರೆಗೆ ನ್ಯಾಯಾಂಗ ಬಂಧನದಲ್ಲಿದ್ದ ಫಾ. ಸಿಪ್ರಿಯನ್ ಪಿಂಟೊ, ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇದೀಗ ಪೆರ್ಮನ್ನೂರು ಚರ್ಚ್ ಪ್ರಕರಣದಲ್ಲಿ ಮತ್ತೆ ಜೈಲು ಪಾಲಾಗಿದ್ದಾರೆ.