ಆಳಂದ: ಧೋತ್ತರಗಾಂವ ವೀರೇಶ್ವರ ಶರಣರ ಖಾಂಡ ಸಮಾಪ್ತಿ ಧಾರ್ಮಿಕ ಸಮಾರಂಭದಲ್ಲಿ ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯರ ಭಗವತ್ಪಾದರು ಆಶಿರ್ವಚನ ನೀಡಿದರು. ಮಾಜಿ ಶಾಸಕ ಸುಭಾಷ ಗುತ್ತೇದಾರ, ಆರ್.ಕೆ.ಪಾಟೀಲ ಇತರರು ಇದ್ದರು.
“ಧರ್ಮ–ಅಧರ್ಮ, ಸತ್ಯ–ಸುಳ್ಳು ವಿವೇಚಿಸುವ ಜ್ಞಾನವೇ ಮನುಷ್ಯನ ವಿಶೇಷ ಗುಣ”
ಆಳಂದ: ತಾಲೂಕಿನ ಧೋತ್ತರಗಾಂವ ಗ್ರಾಮದ ಆರಾಧ್ಯದೈವ ಶ್ರೀ ವೀರೇಶ್ವರ ಶರಣರ ದೇವಸ್ಥಾನದಲ್ಲಿ ಸುಮಾರು ೭೦೦ ವರ್ಷಗಳಿಂದ ಸಾಗಿಬಂದ ಪುರಾಣ ಪ್ರವಚನ ಪರಂಪರೆಯ ಅಂಗವಾಗಿ ಭಾನುವಾರ ಅದ್ದೂರಿ ಧಾರ್ಮಿಕ ಸಮಾರಂಭ ನಡೆಯಿತು.
ದೇವಸ್ಥಾನದ ಶಿಲಾ ಮಂಟಪ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸುವುದರೊಂದಿಗೆ ನಡೆದ ಶಿವಾನುಭವಗೋಷ್ಠಿಯಲ್ಲಿ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ ೧೦೦೮ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮನುಷ್ಯ ಮತ್ತು ಇತರ ಜೀವಿಗಳ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಯಾವುದು ಧರ್ಮ, ಯಾವುದು ಅಧರ್ಮ, ಯಾವುದು ಸತ್ಯ, ಯಾವುದು ಸುಳ್ಳು ಎಂಬುದನ್ನು ವಿವೇಚಿಸಿ ಚಿಂತಿಸುವ ಶಕ್ತಿ ಎಂದರು.
ಮನುಷ್ಯನಿಗೆ ಭಗವಂತ ನೀಡಿರುವ ದೇಹವನ್ನು ಕೇವಲ ಅಲಂಕಾರಕ್ಕಾಗಿ ಬಳಸದೆ, ಸತ್ಕಾರ್ಯ ಹಾಗೂ ಧಾರ್ಮಿಕ ಚಿಂತನೆಗಳಿಗೆ ಬಳಸಬೇಕು. ಮನುಷ್ಯನ ಜೀವನಕ್ಕೆ ಧರ್ಮದ ಮಾರ್ಗದರ್ಶನ ಅತ್ಯಗತ್ಯ. ಧರ್ಮವು ಮನುಷ್ಯನನ್ನು ಸತ್ಕಾರ್ಯದತ್ತ ಕೊಂಡೊಯ್ಯುವುದರ ಜತೆಗೆ ಸಮಾಜದಲ್ಲಿ ಸೌಹಾರ್ದ, ಸಮೃದ್ಧಿ ಹಾಗೂ ನೆಮ್ಮದಿಗೆ ದಾರಿ ಮಾಡಿಕೊಡುತ್ತದೆ ಎಂದು ಹೇಳಿದರು.
ದೇವಸ್ಥಾನ, ಮಠ-ಮಂದಿರಗಳು ಸಮಾಜವನ್ನು ಒಗ್ಗೂಡಿಸುವ ಕೇಂದ್ರಗಳಾಗಿವೆ. ಜಾತಿ, ಮತ, ಭೇದಭಾವಗಳನ್ನು ಮೀರಿ ಎಲ್ಲರೂ ಒಂದಾಗಿ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು. ವೀರೇಶ್ವರ ಶರಣರ ಪವಾಡಗಳು ಹಾಗೂ ಅವರ ೭೦೦ ವರ್ಷಗಳ ಜೀವನ ಚರಿತ್ರೆಯ ಪರಂಪರೆಯನ್ನು ಇಂದಿನ ಪೀಳಿಗೆ ಅರಿತುಕೊಂಡು ಅದರ ಸಾತ್ವಿಕ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ಜನತೆ ಉತ್ತಮ ಮಳೆ, ಬೆಳೆ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸುತ್ತಿದ್ದು, ನಾಡಿನಲ್ಲಿ ಉತ್ತಮ ಪರಿಸ್ಥಿತಿ ನಿರ್ಮಾಣವಾಗಲಿ ಎಂದು ಜಗದ್ಗುರುಗಳು ಆಶಿಸಿದರು.
ಮಾಜಿ ಶಾಸಕ ಸುಭಾಷ ಗುತ್ತೇದಾರ ಮಾತನಾಡಿ, ಧಾರ್ಮಿಕತೆ ಮರೆಯಾಗುತ್ತಿರುವ ಕಾಲಘಟದಲ್ಲಿ ಇಂಥ ಇಂಥ ಉತ್ತಮ ಕಾರ್ಯಗಳು ಯುವ ಸಮುದಾಯವನ್ನು ಸರಿದಾರಿಗೆ ತರುವುದಷ್ಟೇ ಅಲ್ಲದೆ ಸಂಸ್ಕಾರ ತಂದುಕೊಡುತ್ತದೆ ಎಂದರು.
ಕೆಎಂಎಫ್ ಅಧ್ಯಕ್ಷ ಆರ್.ಕೆ. ಪಾಟೀಲ ಮಾತನಾಡಿ, ದೇವಸ್ಥಾನದ ಶಿಲಾಮಂಟಪ ನಿರ್ಮಾಣಕ್ಕೆ ಶಾಸಕರ ಗಮನಕ್ಕೆ ತಂದು ೨೫ ಲಕ್ಷ ರೂಪಾಯಿ ಅನುದಾನ ಒದಗಿಸಲಾಗುವುದು ಎಂದು ಅವರು ಹೇಳಿದರು.
ಕಡಗಂಚಿ ಕಟ್ಟಿಮಠದ ಶ್ರೀ ವೀರಭದ್ರ ಶಿವಾಚಾರ್ಯರು ಹಾಗೂ ಪಾಳಾ ಮಠದ ಡಾ. ಗುರುಲಿಂಗ ಶಿವಾಚಾರ್ಯರು ಮಾತನಾಡಿದರು. ನಿಂಬರಗಾದ ಶ್ರೀ ಶಿವಲಿಂಗ ಶ್ರೀಗಳು, ಧೋತ್ತರಗಾಂವದ ಶಿವಶರಣಿ ಸಿದ್ಧಮ್ಮ ತಾಯಿ ಕೃಷಿ ಸಮಾಜದ ಅಧ್ಯಕ್ಷ ಗುರುಶರಣ ಪಾಟೀಲ, ಶರಣು ಭೂಸನೂರ, ಚಂದ್ರಕಾAತ ಭೂಸನೂರ್, ರಾಜಶೇಖರ ಮಲಶೆಟ್ಟಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಶ್ರಮಜೀವಿಗಳ ವೇದಿಕೆ ಅಧ್ಯಕ್ಷ ಚಂದ್ರಶೇಖರ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ಧರಾಮ ಕಾರಿ ಕಾರ್ಯಕ್ರಮ ನಿರ್ವಹಿಸಿದರು. ದೇವಸ್ಥಾನ ಟ್ರಸ್ಟ್ ಕಮಿಟಿಯ ಹಿರಿಯ ಮುಖಂಡ ವೀರಣ್ಣ ಮಂಗಾಣೆ ಸ್ವಾಗತಿಸಿದರು. ವೀರಣ್ಣ ಹೊನ್ನಶೆಟ್ಟಿ ವಂದಿಸಿದರು.
ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಧಾರ್ಮಿಕ ಸಮಾರಂಭದಲ್ಲಿ ಪಾಲ್ಗೊಂಡು ವೀರೇಶ್ವರ ಶರಣರ ದರ್ಶನ ಹಾಗೂ ಜಗದ್ಗುರುಗಳ ಆಶೀರ್ವಾದ ಪಡೆದರು. ಎರಡು ದಿನಗಳ ಕಾರ್ಯಕ್ರಮದ ಅಂಗವಾಗಿ ಸಿದ್ಧಮ್ಮ ಹೊನ್ನಶೆಟ್ಟಿ ಹಾಗೂ ಶ್ರೀಶೈಲ ಹೊನ್ನಶೆಟ್ಟಿ ಅವರ ವತಿಯಿಂದ ಭಕ್ತರಿಗೆ ಕರಗಡಬು-ತುಪ್ಪದ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಇಂದು ಪುರಾಣ ಮಹಾಮಂಗಲ:
ಅ.೫ರAದು ಬೆಳಗ್ಗೆ ೯ ಗಂಟೆಗೆ ವೀರೇಶ್ವರ ಶರಣರ ಪುರಾಣ ಮಹಾಮಂಗಲ ಮಹೋತ್ಸವ ನಡೆಯಲಿದೆ. ಬಳಿಕ ವಾದ್ಯ ವೈಭವದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಜರುಗಲಿದೆ. ಜಾನವಾಡದ ಶ್ರೀ ಜೈ ಹನುಮಾನ ಭಜನಾ ಮಂಡಳಿ, ಕೊಹಿನೂರ ಗ್ರಾಮದ ಶ್ರೀ ಮಲ್ಲಿಕಾರ್ಜುನ ಭಜನಾ ಮಂಡಳಿ ಹಾಗೂ ಬಸವಕಲ್ಯಾಣದ ಸಂಗೀತ ಕಲಾ ಬಳಗದಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.