Shubhashaya News

ಬರಗಾಲದ ಸಮಗ್ರ ಪರಿಹಾರದ ಪ್ಯಾಕೇಜ್ ಘೋಷಣೆಗೆ ಯಳಸಂಗಿ ಒತ್ತಾಯ

ಆಳಂದ: ತಾಲ್ಲೂಕಿನಲ್ಲಿ ಬರ ಪರಿಸ್ಥಿತಿ ತೀವ್ರಗೊಂಡಿದ್ದು, ಬೆಳೆ ನಷ್ಟ, ನೀರಿನ ಕೊರತೆ, ಜಾನುವಾರುಗಳ ಮೇವಿನ ಸಮಸ್ಯೆ, ಕೃಷಿ ವೆಚ್ಚದ ಹೆಚ್ಚಳ ಹಾಗೂ ಸಾಲದ ಹೊರೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ರೈತರಿಗೆ ಕೇವಲ ೨,೫೦೦ ಬರ ಪರಿಹಾರ ಘೋಷಿಸಿರುವುದನ್ನು ನಿಂಬರ್ಗಾ ಕರ್ನಾಟಕ ರಕ್ಷಣಾ ವೇದಿಕೆ ವಲಯ ಅಧ್ಯಕ್ಷರಾದ ಬಸವರಾಜ ಯಳಸಂಗಿ ತೀವ್ರವಾಗಿ ಖಂಡಿಸಿದ್ದಾರೆ.
ರೈತರು ಸಾವಿರಾರು ರೂಪಾಯಿ ವೆಚ್ಚ ಮಾಡಿ ಬೀಜ, ರಸಗೊಬ್ಬರ, ಕೀಟನಾಶಕ, ಕೂಲಿ, ವಿದ್ಯುತ್ ಹಾಗೂ ನೀರಿನ ವ್ಯವಸ್ಥೆ ಮಾಡಿಕೊಂಡು ಬೆಳೆ ಬೆಳೆಯುತ್ತಾರೆ. ಆದರೆ ಮಳೆ ಕೈಕೊಟ್ಟು ಬೆಳೆ ಹಾನಿಯಾದ ಸಂದರ್ಭದಲ್ಲಿ ನೀಡಲಾಗುತ್ತಿರುವ ೨,೫೦೦ ಪರಿಹಾರವು ರೈತರ ನೈಜ ನಷ್ಟಕ್ಕೆ ಹೋಲಿಸಿದರೆ ಅತ್ಯಂತ ಅಲ್ಪವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರ ಸಂಕಷ್ಟವನ್ನು ಅರ್ಥಮಾಡಿಕೊಂಡು ಸಮಗ್ರ ಪರಿಹಾರ ಪ್ಯಾಕೇಜ್ ಘೋಷಿಸಬೇಕು. ಕೇವಲ ಅಲ್ಪ ಮೊತ್ತದ ಪರಿಹಾರ ನೀಡಿ ರೈತರ ಸಮಸ್ಯೆ ಬಗೆಹರಿದಂತೆ ಮಾಡಬಾರದು ಎಂದು ಅವರು ಆಗ್ರಹಿಸಿದ್ದಾರೆ.
ಪ್ರತಿ ಎಕರೆಗೆ ೫೦,೦೦೦ ಬರ ಪರಿಹಾರ ನೀಡಬೇಕು.ಬೆಳೆ ನಷ್ಟ ಹಾಗೂ ಕೃಷಿ ವೆಚ್ಚವನ್ನು ವೈಜ್ಞಾನಿಕವಾಗಿ ಪರಿಗಣಿಸಿ ಪರಿಹಾರ ನಿಗದಿ ಮಾಡಬೇಕು.ರೈತರ ಸಂಪೂರ್ಣ ಕೃಷಿ ಸಾಲವನ್ನು ಮನ್ನಾ ಮಾಡಬೇಕು.ಬರದಿಂದ ಆದಾಯ ಕಳೆದುಕೊಂಡ ರೈತರ ಮೇಲೆ ಸಾಲ ಮರುಪಾವತಿಗೆ ಒತ್ತಡ ಹೇರಬಾರದು.ಜಾನುವಾರುಗಳಿಗೆ ಸಮರ್ಪಕ ಮೇವು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಬರಪೀಡಿತ ಪ್ರದೇಶಗಳಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು.ಬೆಳೆ ನಷ್ಟದ ಸಮಗ್ರ ಸಮೀಕ್ಷೆ ನಡೆಸಿ ಅರ್ಹ ಪ್ರತಿಯೊಬ್ಬ ರೈತನಿಗೂ ನ್ಯಾಯಯುತ ಪರಿಹಾರ ನೀಡಬೇಕು.ಮುಂದಿನ ಹಂಗಾಮಿನ ಕೃಷಿಗೆ ಬೀಜ, ರಸಗೊಬ್ಬರ ಹಾಗೂ ಅಗತ್ಯ ಕೃಷಿ ಸಾಮಗ್ರಿಗಳ ಖರೀದಿಗೆ ವಿಶೇಷ ನೆರವು ನೀಡಬೇಕು.ರೈತರು ಸರ್ಕಾರದಿಂದ ಭಿಕ್ಷೆ ಕೇಳುತ್ತಿಲ್ಲ. ತಮ್ಮ ಬೆವರಿನಿಂದ ದೇಶಕ್ಕೆ ಅನ್ನ ನೀಡುವ ರೈತರು ಸಂಕಷ್ಟದ ಸಂದರ್ಭದಲ್ಲಿ ಗೌರವಯುತ ಬದುಕು ನಡೆಸಲು ಅಗತ್ಯವಾದ ನ್ಯಾಯಯುತ ಪರಿಹಾರವನ್ನು ಕೇಳುತ್ತಿದ್ದಾರೆ. ೨,೫೦೦ ಪರಿಹಾರವು ರೈತರ ನೈಜ ನಷ್ಟಕ್ಕೆ ಸಮರ್ಪಕವಾಗಿಲ್ಲ.
ಸರ್ಕಾರ ೨,೫೦೦ ಪರಿಹಾರವನ್ನು ಮರುಪರಿಶೀಲಿಸಿ, ಪ್ರತಿ ಎಕರೆಗೆ ೫೦,೦೦೦ ಬರ ಪರಿಹಾರ ಹಾಗೂ ರೈತರ ಸಂಪೂರ್ಣ ಸಾಲಮನ್ನಾ ಮಾಡುವ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ರೈತರ ಸಮಸ್ಯೆಗಳನ್ನು ಸರ್ಕಾರ ನಿರ್ಲಕ್ಷಿಸಿದರೆ, ಸಂಘಟನೆ ವತಿಯಿಂದ ರೈತರನ್ನು ಒಗ್ಗೂಡಿಸಿ ಪ್ರಜಾಸತ್ತಾತ್ಮಕ ರೀತಿಯಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

Leave A Reply

Your email address will not be published.