ಕಲಬುರಗಿ: ಸರ್ಕಾರದ ವಿವಿಧ ಯೋಜನೆಗಳು ಹಾಗೂ ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಿಸಲು ಉದ್ದೇಶಿಸಿರುವ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದಡಿ ಆಳಂದ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ (ಇಸಿ ಆಕ್ಟ್) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಸೆ.27ರಂದು ಬೆಳಿಗ್ಗೆ ಸುಮಾರು 6 ಗಂಟೆಗೆ ಕಲಬುರಗಿ–ಆಳಂದ ರಸ್ತೆಯ ಆಳಂದ ಪಟ್ಟಣದ ಚೆಕ್‌ಪೋಸ್ಟ್ ಬಳಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಹಾರ ನಿರೀಕ್ಷಕಿ ಶ್ರೀದೇವಿ ಸಂಗಯ್ಯ ಮಠಪತಿ ಅವರು ನೀಡಿದ ದೂರಿನ ಮೇರೆಗೆ ಆಳಂದ ಪೊಲೀಸ್ ಠಾಣೆಯಲ್ಲಿ ಕಲಂ 3 ಮತ್ತು 7, ಅಗತ್ಯ ವಸ್ತುಗಳ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪೊಲೀಸರ ಪ್ರಕಾರ, ಕೆಎ-32 ಎಎ-4831 ನೋಂದಣಿ ಸಂಖ್ಯೆಯ ಐಚರ್ ವಾಹನದಲ್ಲಿ ಸರ್ಕಾರದ ವಿವಿಧ ಯೋಜನೆಗಳು ಹಾಗೂ ನ್ಯಾಯಬೆಲೆ ಅಂಗಡಿಗಳಿಗೆ ಸರಬರಾಜು ಮಾಡುವ 6,520 ಕೆ.ಜಿ. ಅಕ್ಕಿಯನ್ನು ಅಂದಾಜು ₹2,28,200 ಮೌಲ್ಯದ ಅಕ್ಕಿಯನ್ನು ಸಂಗ್ರಹಿಸಿ ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.
ಈ ಸಂಬಂಧ ವಾಹನ ಚಾಲಕ ಸಮೀರ್ (23) ಹಾಗೂ ವಾಹನದ ಮಾಲೀಕ ಶರಣು ಅವರಾದಿ, ಕಲಬುರಗಿ ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.