ಕಲಬುರಗಿ: ಸಿಡಿಲು ಬಡಿದು ಇಬ್ಬರು ಮಹಿಳೆಯರು ಮೃತಪಟ್ಟಿರುವ ಘಟನೆ ಕಮಲಾಪುರ ತಾಲೂಕಿನ ನಾಗೂರು ಗ್ರಾಮದಲ್ಲಿ ಸೋಮವಾರ ನಡೆದಿದೆ.
ಜಮೀನಿನಲ್ಲಿ ಮರದ ಕೆಳಗೆ ಕುಳಿತು ಊಟ ಮಾಡುತ್ತಿದ್ದ ವೇಳೆ ಏಕಾಏಕಿ ಸಿಡಿಲು ಬಡಿದ ಪರಿಣಾಮ ಲಕ್ಷ್ಮೀ ಗುತ್ತೇದಾರ್ (45) ಹಾಗೂ ಕೂಲಿ ಕಾರ್ಮಿಕೆಯಾಗಿದ್ದ ಸೈಜಾದ್ ಬಿ. (60) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಕಮಲಾಪುರ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಹಾಗಾಂವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮೃತರ ಕುಟುಂಬಕ್ಕೆ ಕೂಡಲೇ ಪರಿಹಾರ ಘೋಷಿಸಬೇಕೆಂದು ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಒತ್ತಾಯಿಸಿದ್ದಾರೆ.