ಕಬ್ಬು ಬೆಳೆ ಉಳಿಸಲು ನೀರಾವರಿ ವೇಳಾಪಟ್ಟಿ ಪ್ರಕಟಿಸಿ: ಆನಂದ್ ಪಾಟೀಲ್
ಅಮರ್ಜಾ ಕೆಳಭಾಗದ ರೈತರಿಗೆ ಡಿಸೆಂಬರ್‌ವರೆಗೆ ನೀರು ಹರಿಸಿ ನಿರ್ಲಕ್ಷಿಸಿದರೆ ಉಗ್ರ ಪ್ರತಿಭಟನೆ ಎಚ್ಚರಿಕೆ
ಆಳಂದ: ಅಮರ್ಜಾ ನೀರಾವರಿ ಯೋಜನೆಯ ಕೆಳಭಾಗದ ರೈತರಿಗೆ ಸಮರ್ಪಕವಾಗಿ ನೀರು ಹರಿಸುವ ಮೂಲಕ ಕಬ್ಬು ಸೇರಿದಂತೆ ವಿವಿಧ ಬೆಳೆಗಳನ್ನು ಉಳಿಸಬೇಕು. ಜಲಾಶಯದಲ್ಲಿ ಲಭ್ಯವಿರುವ ನೀರನ್ನು ಪರಿಗಣಿಸಿ, ಕುಡಿಯುವ ನೀರಿಗೆ ಅಗತ್ಯ ಪ್ರಮಾಣ ಕಾಯ್ದಿರಿಸಿದ ಬಳಿಕ ಉಳಿದ ನೀರನ್ನು ಕನಿಷ್ಠ ನವೆಂಬರ್–ಡಿಸೆAಬರ್‌ವರೆಗೆ ಕೃಷಿ ಉದ್ದೇಶಕ್ಕೆ ಹಂತ ಹಂತವಾಗಿ ಹರಿಸಬೇಕು ಎಂದು ರೈತ ಮುಖಂಡ ಆನಂದ ಪಾಟೀಲ ಕೊರಳ್ಳಿ ಅವರು ಜಿಲ್ಲಾಡಳಿತಕ್ಕೆ ಆಗ್ರಹಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗ್ರಾಮಸ್ಥರೊಂದಿಗೆ ಸೋಮವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಪಾಟೀಲ ಅವರು, ಅಮರ್ಜಾ ಯೋಜನೆಯ ನೀರಿನ ಮೇಲೆ ಅವಲಂಬಿತರಾಗಿ ನೂರಾರು ರೈತರು ಕಬ್ಬು ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದಿದ್ದಾರೆ. ಕಬ್ಬು ದೀರ್ಘಾವಧಿಯ ಬೆಳೆಯಾಗಿದ್ದು, ನಿರ್ಣಾಯಕ ಹಂತದಲ್ಲಿ ನೀರು ದೊರೆಯದಿದ್ದರೆ ರೈತರು ಭಾರಿ ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ. ಈಗಾಗಲೇ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಹಣ ವ್ಯಯಿಸಿರುವ ರೈತರಿಗೆ ನೀರಿನ ಕೊರತೆ ಮತ್ತಷ್ಟು ಸಂಕಷ್ಟ ತಂದೊಡ್ಡಲಿದೆ ಎಂದು ಹೇಳಿದರು.
ಜಲಾಶಯದಲ್ಲಿ ನೀರು ಲಭ್ಯವಿರುವ ಸಂದರ್ಭದಲ್ಲಿ ಕೃಷಿ ಉದ್ದೇಶಕ್ಕೆ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳದೆ ಮುಂಚಿತವಾಗಿ ನೀರು ಹರಿಸುವುದನ್ನು ಸ್ಥಗಿತಗೊಳಿಸುವುದು ಕೆಳಭಾಗದ ರೈತರಿಗೆ ಅನ್ಯಾಯವಾಗಲಿದೆ. ಆದ್ದರಿಂದ ಜಲಾಶಯದ ನೀರಿನ ಪ್ರಮಾಣ, ಬೆಳೆಗಳ ಸ್ಥಿತಿ ಹಾಗೂ ರೈತರ ಅಗತ್ಯವನ್ನು ವೈಜ್ಞಾನಿಕವಾಗಿ ಪರಿಶೀಲಿಸಿ ನೀರು ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.
“ಜಲಾಶಯದಲ್ಲಿ ನೀರು ಲಭ್ಯವಿರುವಾಗ ರೈತರ ಜಮೀನುಗಳಿಗೆ ನೀರು ಏಕೆ ಹರಿಸಬಾರದು?” ಎಂದು ಪ್ರಶ್ನಿಸಿದ ಅವರು, ಕುಡಿಯುವ ನೀರಿಗೆ ಅಗತ್ಯವಿರುವ ಪ್ರಮಾಣವನ್ನು ಕಾಯ್ದಿರಿಸಿಕೊಂಡು, ಉಳಿದ ನೀರನ್ನು ಕೃಷಿ ಬಳಕೆಗೆ ಬಿಡುಗಡೆ ಮಾಡಬೇಕು. ವಿಶೇಷವಾಗಿ ಕಬ್ಬು ಬೆಳೆಗಾರರಿಗೆ ನವೆಂಬರ್–ಡಿಸೆAಬರ್‌ವರೆಗೆ ನೀರು ದೊರೆಯುವಂತೆ ಸ್ಪಷ್ಟ ನೀರಾವರಿ ವೇಳಾಪಟ್ಟಿ ರೂಪಿಸಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ನೀರಾವರಿ ನಿಗಮ ಹಾಗೂ ಸಂಬAಧಿಸಿದ ಅಧಿಕಾರಿಗಳು ರೈತರ ಮನವಿಗೆ ತಕ್ಷಣ ಸ್ಪಂದಿಸಬೇಕು. ಅಮರ್ಜಾ ಜಲಾಶಯದಲ್ಲಿರುವ ನೀರಿನ ಲಭ್ಯತೆ ಮತ್ತು ಕೆಳಭಾಗದ ರೈತರ ಅಗತ್ಯವನ್ನು ಪರಿಶೀಲಿಸಿ, ನೀರು ಹರಿಸುವ ದಿನಾಂಕ ಹಾಗೂ ಪ್ರಮಾಣದ ಕುರಿತು ಸ್ಪಷ್ಟ ವೇಳಾಪಟ್ಟಿ ಪ್ರಕಟಿಸಬೇಕು. ಇದರಿಂದ ರೈತರಲ್ಲಿರುವ ಗೊಂದಲ ನಿವಾರಣೆಯಾಗಲಿದೆ ಎಂದು ಹೇಳಿದರು.
ರೈತರ ಬೇಡಿಕೆಗೆ ಅಧಿಕಾರಿಗಳು ಸ್ಪಂದಿಸದೆ ನೀರು ಹರಿಸುವುದನ್ನು ಸ್ಥಗಿತಗೊಳಿಸಿದರೆ, ಮುಂದಿನ ದಿನಗಳಲ್ಲಿ ರೈತರು ಒಗ್ಗೂಡಿ ಕರ್ನಾಟಕ ನೀರಾವರಿ ನಿಗಮದ ಕಚೇರಿ ಮುಂದೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಆನಂದ್ ಪಾಟೀಲ್ ಎಚ್ಚರಿಸಿದರು.
“ಕೃಷಿಗೆ ಅಗತ್ಯವಿರುವ ನೀರು ಲಭ್ಯವಿದ್ದರೂ ರೈತರ ಜಮೀನುಗಳಿಗೆ ನೀರು ಹರಿಸದೆ ಇದ್ದರೆ ರೈತರ ಸಮಸ್ಯೆಗೆ ಯಾರು ಹೊಣೆ?” ಎಂದು ಪ್ರಶ್ನಿಸಿದ ಅವರು, ಈಗಾಗಲೇ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಅದನ್ನು ಪರಿಹರಿಸುವ ಜವಾಬ್ದಾರಿ ಯಾರದ್ದು ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು. ರೈತರ ಸಮಸ್ಯೆ ಬಗೆಹರಿಯದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದರು.
ಕುಡಿಯುವ ನೀರಿಗೆ ತೊಂದರೆಯಾಗದAತೆ ಅಗತ್ಯ ಪ್ರಮಾಣದ ನೀರನ್ನು ಕಾಯ್ದಿರಿಸುವುದಕ್ಕೆ ರೈತರ ವಿರೋಧವಿಲ್ಲ. ಆದರೆ ಕೃಷಿಗೆ ಲಭ್ಯವಿರುವ ನೀರನ್ನು ಸಮರ್ಪಕವಾಗಿ ಬಳಕೆ ಮಾಡದೆ ಕೇವಲ ನೀರು ಸಂಗ್ರಹಿಸುವುದು ಅಥವಾ ಮುಂಚಿತವಾಗಿ ನೀರು ಹರಿಸುವುದನ್ನು ನಿಲ್ಲಿಸುವುದು ರೈತರ ಹಿತಕ್ಕೆ ವಿರುದ್ಧವಾಗಿದೆ ಎಂದು ಹೇಳಿದರು.
ಅಧಿಕಾರಿಗಳು ರೈತರ ಪ್ರತಿನಿಧಿಗಳೊಂದಿಗೆ ಕೂಡಲೇ ಸಭೆ ನಡೆಸಬೇಕು. ಜಲಾಶಯದಲ್ಲಿರುವ ನೀರಿನ ಪ್ರಮಾಣ, ಕುಡಿಯುವ ನೀರಿನ ಅಗತ್ಯ, ನೀರಾವರಿ ವ್ಯಾಪ್ತಿಯ ಬೆಳೆ ಪ್ರದೇಶ ಹಾಗೂ ಮುಂದಿನ ತಿಂಗಳ ನೀರಿನ ಲಭ್ಯತೆಯನ್ನು ಪರಿಶೀಲಿಸಿ ಪಾರದರ್ಶಕ ನೀರಾವರಿ ಯೋಜನೆ ರೂಪಿಸಬೇಕು. ಕಬ್ಬು ಸೇರಿದಂತೆ ವಿವಿಧ ಬೆಳೆಗಳನ್ನು ಉಳಿಸಲು ನವೆಂಬರ್–ಡಿಸೆAಬರ್‌ವರೆಗೆ ನೀರು ಹರಿಸುವ ಕುರಿತು ತುರ್ತು ನಿರ್ಧಾರ ಕೈಗೊಳ್ಳಬೇಕು. ರೈತರ ಬೇಡಿಕೆಗೆ ಸ್ಪಂದಿಸದೆ ಹೋರಾಟಕ್ಕೆ ಕಾರಣವಾದರೆ ಸಂಬAಧಿಸಿದ ಇಲಾಖೆಯ ಅಧಿಕಾರಿಗಳೇ ಹೊಣೆಗಾರರಾಗಲಿದ್ದಾರೆ ಎಂದು ಆನಂದ್ ಪಾಟೀಲ್ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ನಿಜಲಿಂಗಪ್ಪ ಕೊರಳಿ, ಶಿವರಾಜ್ ಪಾಟೀಲ್, ಭೀಮಾಶಂಕರ್ ಮಂಟಾಳೆ, ಶ್ರೀಮಂತ ಸಾರ್ವಾಡ್, ಹಿರಿಯ ಮಡಿವಾಳಯ್ಯ ಸ್ವಾಮಿ, ದೇವಾನಂದ ಪಾಟೀಲ್ ಮತ್ತು ಸುಭಾಷ್ ಉಪಸ್ಥಿತರಿದ್ದರು.