Shubhashaya News

ಗ್ರಾಮೀಣ ಪ್ರದೇಶದ ನಿವೇಶನ ರಹಿತರಿಗೆ ಉಚಿತ ನಿವೇಶನ ಸೌಲಭ್ಯ: ರಾಹುಲ್ ಶರಣಪ್ಪ ಸಂಕನೂರ

ಕಲಬುರಗಿ: 2018ರ ವಸತಿ ಮತ್ತು ನಿವೇಶನ ರಹಿತರ ಸಮೀಕ್ಷೆಯ ಪಟ್ಟಿಯಲ್ಲಿ ಬಿಟ್ಟು ಹೋಗಿರುವ ಅರ್ಹ ಫಲಾನುಭವಿಗಳನ್ನು ಸೇರ್ಪಡೆಗೊಳಿಸಲು 2026ರ ಸೆಪ್ಟೆಂಬರ್ 30 ರವರೆಗೆ ಅಂತಿಮ ಕಾಲಾವಕಾಶ ನೀಡಲಾಗಿದ್ದು, ಗ್ರಾಮೀಣ ಆಶ್ರಯ ನಿವೇಶನ ಯೋಜನೆಯಡಿ ಗ್ರಾಮೀಣ ಪ್ರದೇಶದ ನಿವೇಶನ ರಹಿತ ಅರ್ಹ ಫಲಾನುಭವಿಗಳಿಂದ ಉಚಿತ ನಿವೇಶನ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಜಿದಾರರು ಕಡ್ಡಾಯವಾಗಿ ಮಹಿಳೆಯಾಗಿರಬೇಕು (ವಿವಾಹಿತ ಅಥವಾ ಏಕ ಮಹಿಳಾ ಒಡೆತನದ ಗೃಹಿಣಿ), ಮಾಜಿ ಸೈನಿಕರು, ವಿಧುರರು, ಅಂಗವಿಕಲರು, ಹಿರಿಯ ನಾಗರೀಕರಾಗಿದ್ದಲ್ಲಿ ಪುರುಷರು ಸಹ ಅರ್ಹರಾಗಿರುತ್ತಾರೆ.

ಅರ್ಜಿದಾರರು ಸಂಬಂಧಪಟ್ಟ ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿರಬೇಕು. ಕುಟುಂಬವು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿದ್ದು, ವಾರ್ಷಿಕ ಆದಾಯ 1,20,000/- ರೂ. ಕ್ಕಿಂತ ಕಡಿಮೆ ಇರಬೇಕು.

ಅರ್ಜಿದಾರರ ಕುಟುಂಬವು ವಸತಿ ಮತ್ತು ನಿವೇಶನ ರಹಿತರಾಗಿದ್ದು, ಅರ್ಜಿದಾರರು ಅಥವಾ ಕುಟುಂಬದ ಯಾವುದೇ ಸದಸ್ಯರ ಹೆಸರಿನಲ್ಲಿ ಕರ್ನಾಟಕದ ಯಾವುದೇ ಭಾಗದಲ್ಲಿ ಸ್ವಂತ ಮನೆ ಅಥವಾ ನಿವೇಶನವನ್ನು ಹೊಂದಿರಬಾರದು. ಬೇರೆ ಯಾವುದೇ ಯೋಜನೆ/ಇಲಾಖೆಯಿಂದ ಈಗಾಗಲೇ ವಸತಿ/ನಿವೇಶನ ಸೌಲಭ್ಯ ಪಡೆದಿರಬಾರದು.

ಅರ್ಹ ಫಲಾನುಭವಿಗಳು ತಮ್ಮ ಪಡಿತರ ಚೀಟಿ, ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರಗಳ ದಾಖಲೆಗಳನ್ನು ಲಗತ್ತಿಸಿ 2026ರ ಸೆಪ್ಟೆಂಬರ್ 30 ರೊಳಗಾಗಿ ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕೆಂದು ಅವರು ತಿಳಿಸಿದ್ದಾರೆ.

Leave A Reply

Your email address will not be published.