ಅಫಜಲಪುರ: ಸರ್ಕಾರಿ ವಸತಿ ನಿಲಯಗಳನ್ನು ಬಲಪಡಿಸುವುದು, ಹಾಸ್ಟೆಲ್‌ಗಳಿಗೆ ಅರ್ಜಿ ಸಲ್ಲಿಸಿರುವ ಎಲ್ಲ ಅರ್ಹ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಕಲ್ಪಿಸುವುದು, ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆ ಹಾಗೂ ಭೀಮಾ ನದಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಅಫಜಲಪುರ ತಾಲೂಕು ಸಮ್ಮೇಳನವನ್ನು ಸೆ.21ರಂದು ಪಟ್ಟಣದ ಶಾರದಾ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಎಸ್‌ಎಫ್‌ಐ ರಾಜ್ಯ ಸಮಿತಿ ಸದಸ್ಯ ಇಮಾಮ್ ಸಾಬ್ ನದಾಫ್ ತಿಳಿಸಿದ್ದಾರೆ.
ಸಮ್ಮೇಳನದ ಕುರಿತು ಮಾತನಾಡಿದ ಅವರು, ‘ಸರ್ವರಿಗೂ ಶಿಕ್ಷಣ, ಸರ್ವರಿಗೂ ಉದ್ಯೋಗ’ ಎಂಬ ಆಶಯದೊಂದಿಗೆ ಎಸ್‌ಎಫ್‌ಐ ಕಾರ್ಯನಿರ್ವಹಿಸುತ್ತಿದೆ. ಶಿಕ್ಷಣದ ವ್ಯಾಪಾರೀಕರಣ ಹಾಗೂ ಖಾಸಗೀಕರಣದ ವಿರುದ್ಧ ಸಂಘಟನೆ ನಿರಂತರವಾಗಿ ಹೋರಾಟ ನಡೆಸುತ್ತಿದೆ. ಬಡವರು, ರೈತರು, ಕಾರ್ಮಿಕರು, ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಮಕ್ಕಳಿಗೂ ಸಮಾನ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂಬುದು ಸಂಘಟನೆಯ ಪ್ರಮುಖ ಆಶಯವಾಗಿದೆ ಎಂದರು.
ತಾಲೂಕಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹೊಸ ಸರ್ಕಾರಿ ವಸತಿ ನಿಲಯಗಳನ್ನು ಆರಂಭಿಸಬೇಕು. ಹಾಸ್ಟೆಲ್‌ಗಳಿಗೆ ಅರ್ಜಿ ಸಲ್ಲಿಸಿರುವ ಎಲ್ಲ ಅರ್ಹ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಒದಗಿಸಬೇಕು. ಈಗಿರುವ ವಸತಿ ನಿಲಯಗಳಲ್ಲಿ ಅಗತ್ಯ ಮೂಲಸೌಕರ್ಯ, ಗುಣಮಟ್ಟದ ಆಹಾರ ಸೇರಿದಂತೆ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದರು.
ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅವಕಾಶಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಸರ್ಕಾರಿ ನರ್ಸಿಂಗ್, ವೈದ್ಯಕೀಯ, ಎಂಜಿನಿಯರಿಂಗ್ ಹಾಗೂ ಸ್ನಾತಕೋತ್ತರ ಶಿಕ್ಷಣ ಕೇಂದ್ರಗಳನ್ನು ಆರಂಭಿಸಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸುಲಭವಾಗಿ ದೊರೆಯುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಭೀಮಾ ನದಿ ನೀರಿನ ಸಮಸ್ಯೆ ಹಲವು ವರ್ಷಗಳಿಂದ ರೈತರು ಹಾಗೂ ಸಾರ್ವಜನಿಕರನ್ನು ಕಾಡುತ್ತಿದೆ. ಕುಡಿಯುವ ನೀರು ಮತ್ತು ನೀರಾವರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಸರ್ಕಾರ ಸಮಗ್ರ ಕ್ರಮ ಕೈಗೊಳ್ಳಬೇಕು. ರೈತರ ನ್ಯಾಯಯುತ ಬೇಡಿಕೆಗಳಿಗೆ ವಿದ್ಯಾರ್ಥಿ ಸಮುದಾಯ ಬೆಂಬಲವಾಗಿ ನಿಲ್ಲಲಿದೆ ಎಂದು ಇಮಾಮ್ ಸಾಬ್ ನದಾಫ್ ಹೇಳಿದರು.