Shubhashaya News

ಬಸವೇಶ್ವರ ವೃತ್ತದ ಸಮೀಪ ಶೌಚಾಲಯ ನಿರ್ಮಿಸಿ: ಶ್ರೀಕಾಂತ ದಿವಾಣಜಿ ಆಗ್ರಹ

ಅಫಜಲಪುರ: ಪಟ್ಟಣದ ಬಸವೇಶ್ವರ ವೃತ್ತದ ಸಮೀಪ ಸಾರ್ವಜನಿಕ ಶೌಚಾಲಯದ ಕೊರತೆಯಿಂದ ಸಾರ್ವಜನಿಕರು ಹಾಗೂ ಪ್ರಯಾಣಿಕರು ನಿತ್ಯ ತೊಂದರೆ ಅನುಭವಿಸುತ್ತಿದ್ದು, ತಕ್ಷಣವೇ ಶೌಚಾಲಯ ನಿರ್ಮಿಸಿ ಜನರ ಪರದಾಟ ತಪ್ಪಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ತಾಲೂಕು ಅಧ್ಯಕ್ಷ ಶ್ರೀಕಾಂತ ದಿವಾಣಜಿ ಅವರು ಪುರಸಭೆ ಅಧಿಕಾರಿಗಳನ್ನು ಆಗ್ರಹಿಸಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವೇಶ್ವರ ವೃತ್ತದಲ್ಲಿ ಕಳೆದ ಹಲವು ತಿಂಗಳಿಂದ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಇದೀಗ ಅಂತಿಮ ಹಂತಕ್ಕೆ ತಲುಪಿದೆ. ರಸ್ತೆ ಕಾಮಗಾರಿ ಪೂರ್ಣಗೊಂಡ ಕೂಡಲೇ ಸಾರ್ವಜನಿಕರ ಅನುಕೂಲಕ್ಕಾಗಿ ಸುಸಜ್ಜಿತ ಶೌಚಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬಸವೇಶ್ವರ ವೃತ್ತವು ತಾಲೂಕಿನ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಕೇಂದ್ರವಾಗಿದ್ದು, ಪ್ರತಿದಿನ ನೂರಾರು ಜನರು ಈ ಮಾರ್ಗದಲ್ಲಿ ಸಂಚರಿಸುತ್ತಾರೆ. ಅಲ್ಲದೆ, ಸುಕ್ಷೇತ್ರ ದೇವಲಗಾಣಗಾಪೂರ ಹಾಗೂ ಘತ್ತರಗಾ ಭಾಗ್ಯವಂತಿ ದೇವಸ್ಥಾನಗಳಿಗೆ ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಸಾವಿರಾರು ಭಕ್ತರು ಇದೇ ಮಾರ್ಗವಾಗಿ ಆಗಮಿಸುತ್ತಾರೆ. ಆದರೆ, ಸಮೀಪದಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲದ ಕಾರಣ ಮಹಿಳೆಯರು, ಹಿರಿಯ ನಾಗರಿಕರು ಹಾಗೂ ಪ್ರಯಾಣಿಕರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಸಾರ್ವಜನಿಕರ ಆರೋಗ್ಯ, ಸ್ವಚ್ಛತೆ ಮತ್ತು ಮೂಲಭೂತ ಸೌಕರ್ಯಗಳನ್ನು ಗಮನದಲ್ಲಿಟ್ಟುಕೊಂಡು ಪುರಸಭೆ ಅಧಿಕಾರಿಗಳು ಶೀಘ್ರವೇ ಶೌಚಾಲಯ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶ್ರೀಕಾಂತ ದಿವಾಣಜಿ ಆಗ್ರಹಿಸಿದರು.

Leave A Reply

Your email address will not be published.