ಚಿಂಚೋಳಿ: ಠೇವಣಿ ಹಾಗೂ ನಿಶ್ಚಿತ ಠೇವಣಿ (ಎಫ್‌ಡಿ) ಪ್ರಮಾಣ ಹೆಚ್ಚಿಸುವ ಮೂಲಕ ಬ್ಯಾಂಕಿನ ಆರ್ಥಿಕ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಬೇಕು. ಶೇರುದಾರರು, ಖಾತೆದಾರರು ಹಾಗೂ ಗ್ರಾಹಕರ ಸಕ್ರಿಯ ಸಹಕಾರದಿಂದ ಮಾತ್ರ ಬ್ಯಾಂಕ್ ಸರ್ವತೋಮುಖ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ಶ್ರೀ ವೀರಭದ್ರೇಶ್ವರ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಬಸವರಾಜ ಮಾಲಿ ಹೇಳಿದರು.
ಪಟ್ಟಣದ ಹಾರ ಶ್ರೀ ವೀರಭದ್ರೇಶ್ವರ ಕೋ-ಆಪರೇಟಿವ್ ಬ್ಯಾಂಕ್‌ನ 2025-26ನೇ ಸಾಲಿನ 28ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬ್ಯಾಂಕ್ ಆರಂಭವಾಗಿ 28 ವರ್ಷಗಳು ಕಳೆದಿದ್ದರೂ ಇದುವರೆಗೆ ಮತ್ತೊಂದು ಶಾಖೆ ಆರಂಭಿಸಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಸಂಸ್ಥೆಯನ್ನು ಆರ್ಥಿಕವಾಗಿ ಸದೃಢಗೊಳಿಸಿ, ಹೊಸ ಶಾಖೆಗಳನ್ನು ಆರಂಭಿಸುವ ನಿಟ್ಟಿನಲ್ಲಿ ಠೇವಣಿ ಸಂಗ್ರಹಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಠೇವಣಿ ಹಾಗೂ ಎಫ್‌ಡಿ ಪ್ರಮಾಣ ಹೆಚ್ಚಿದಂತೆ ಬ್ಯಾಂಕಿನ ಆರ್ಥಿಕ ಸಾಮರ್ಥ್ಯ ವೃದ್ಧಿಯಾಗಲಿದ್ದು, ಗ್ರಾಹಕರಿಗೆ ಇನ್ನಷ್ಟು ಉತ್ತಮ ಹಾಗೂ ಆಧುನಿಕ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸಲು ಸಾಧ್ಯವಾಗಲಿದೆ ಎಂದರು.
ಶೇರುದಾರರು ಹಾಗೂ ಖಾತೆದಾರರು ತಮ್ಮ ಹೆಚ್ಚಿನ ಹಣಕಾಸು ವ್ಯವಹಾರಗಳನ್ನು ಬ್ಯಾಂಕ್‌ನಲ್ಲಿಯೇ ನಡೆಸುವ ಮೂಲಕ ಸಂಸ್ಥೆಯ ಪ್ರಗತಿಗೆ ಕೈಜೋಡಿಸಬೇಕು. ಬ್ಯಾಂಕ್‌ನೊಂದಿಗೆ ನಿರಂತರ ವ್ಯವಹಾರ ನಡೆಸುವುದರಿಂದ ಸಂಸ್ಥೆಯ ಆರ್ಥಿಕ ಸ್ಥಿರತೆ ಹೆಚ್ಚಲಿದೆ. ಗ್ರಾಹಕರ ವಿಶ್ವಾಸ ಮತ್ತು ಸಹಕಾರವೇ ಸಹಕಾರಿ ಬ್ಯಾಂಕ್‌ಗಳ ಬೆಳವಣಿಗೆಯ ಪ್ರಮುಖ ಆಧಾರವಾಗಿದೆ ಎಂದು ಬಸವರಾಜ ಮಾಲಿ ಹೇಳಿದರು.
ಸಭೆಯಲ್ಲಿ ಸುಭಾಷಚಂದ್ರ ವೀರಭದ್ರಪ್ಪ ಸೀಳಿನ, ನಾಗರಾಜ ವಿರೂಪಾಕ್ಷಪ್ಪ, ಶರಣಪ್ಪ ಶಿವಲಿಂಗಪ್ಪ ಮಣ್ಣಶೆಟ್ಟಿ, ಮಕ್ಸುದ್ ಯೂಸುಫ್ ಅಲಿ ಮಸ್ತಾನ್ ಅಲಿ, ಬಸವರಾಜ ಆರ್. ಯಲಾಲ, ಸುಭಾಷಚಂದ್ರ ಗಂಗಾಧರ ಎಂಪಳ್ಳಿ, ಚಾಂದಪಾಶಾ ಖಾದರಸಾಬ್ ಮೋಮಿನ್, ನಾಗೇಂದ್ರಪ್ಪ ಮಲ್ಲಪ್ಪ ತಿಮ್ಮನಾಯಕ, ಶರಣಪ್ಪ ಬಂಡೆಪ್ಪ ಪೂಜಾರಿ, ಜಗದೇವಿ ಸೀಳಿನ, ಮಲ್ಲೇಶ್ವರಿ ಭೀಮಶೆಟ್ಟಿ ಬಾಸಶೆಟ್ಟಿ, ಶಿವಪುತ್ರ ವೀರಭದ್ರಪ್ಪ ಸೀಳಿನ, ನಾಗಶೆಟ್ಟಿ ಸಿ. ಪೂಸಾಳೆ, ಗೋವಿಂದ್, ಜಯರಾಮ್, ಚೆನ್ನವೀರ ಸೇರಿದಂತೆ ಬ್ಯಾಂಕ್‌ನ ಪದಾಧಿಕಾರಿಗಳು ಹಾಗೂ ಶೇರುದಾರರು ಉಪಸ್ಥಿತರಿದ್ದರು.