Shubhashaya News

ಸಂವಿಧಾನ ರಕ್ಷಣೆಗೆ ಸಂಘಟಿತರಾಗಿ ಹೋರಾಡಬೇಕು: ಹೆಣ್ಣೂರ್ ಶ್ರೀನಿವಾಸ್

ಕಲಬುರಗಿ: ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಅಪಾಯದ ಅಂಚಿನಲ್ಲಿದ್ದು, ಅದರ ರಕ್ಷಣೆಗೆ ದಲಿತ ಸಮುದಾಯದವರು ಜಾಗೃತರಾಗಿ, ಸಂಘಟಿತರಾಗಿ ಹೋರಾಟ ನಡೆಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ರಾಜ್ಯ ಸಂಚಾಲಕ ಹೆಣ್ಣೂರ್ ಶ್ರೀನಿವಾಸ್ ಕರೆ ನೀಡಿದರು.

ನಗರದ ಕನ್ನಡ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ಆಯೋಜಿಸಿದ್ದ ವಿಭಾಗೀಯ ಮಟ್ಟದ ಪದಾಧಿಕಾರಿಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ ಐದು ದಶಕಗಳಿಂದ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ರಾಜ್ಯದ 101 ಜಾತಿ ಸಮುದಾಯಗಳ ಹಕ್ಕುಗಳು ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ನಿರಂತರವಾಗಿ ಹೋರಾಟ ನಡೆಸಿಕೊಂಡು ಬಂದಿದೆ. ಮಲಹೊರುವ ಪದ್ಧತಿ, ದೇವದಾಸಿ ಪದ್ಧತಿ ಸೇರಿದಂತೆ ಹಲವು ಅನಿಷ್ಟ ಆಚರಣೆಗಳ ನಿರ್ಮೂಲನೆಗೆ ಸಂಘಟನೆ ಮಹತ್ವದ ಹೋರಾಟ ನಡೆಸಿದೆ ಎಂದು ಹೇಳಿದರು.

ಸಂವಿಧಾನ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು. ಕೋಮುವಾದಿ ಶಕ್ತಿಗಳ ವಿರುದ್ಧ ಸಂಘಟಿತವಾಗಿ ಸೆಡ್ಡು ಹೊಡೆಯುವ ಅಗತ್ಯವಿದೆ ಎಂದು ಹೆಣ್ಣೂರ್ ಶ್ರೀನಿವಾಸ್ ಹೇಳಿದರು.

ಒಳಮೀಸಲಾತಿ ಜಾರಿಗೆ ತರುವ ನಿಟ್ಟಿನಲ್ಲಿ ಪ್ರೊ. ಬಿ. ಕೃಷ್ಣಪ್ಪ ಅವರ ಕೊಡುಗೆ ಅಪಾರವಾಗಿದೆ. ಪರಿಶಿಷ್ಟರ ಅಭಿವೃದ್ಧಿಗಾಗಿ ಮೀಸಲಿಡುವ ಅನುದಾನವನ್ನು ಅವರ ಕಲ್ಯಾಣಕ್ಕೆ ಮಾತ್ರ ಬಳಸಬೇಕು. ಈ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಿದರೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ನಿರಂತರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.

ಕಾರ್ಯಾಗಾರದಲ್ಲಿ ರಾಜ್ಯ ಸಂಘಟನಾ ಸಂಚಾಲಕ ಸುರೇಶ ಮೆಂಗನ್, ವಿಭಾಗೀಯ ಸಂಚಾಲಕ ಧರ್ಮಣ ಕೋಣೆಕರ್, ಜಿಲ್ಲಾ ಸಂಚಾಲಕ ಭೀಮಶಾ ಖನ್ನಾ, ಶಿವಕುಮಾರ ಆಜಾದಪೂರ, ದವಲಪ್ಪ ಮದನ್, ರಾಣು ಮುದ್ದನಕರ್, ಶ್ಯಾಮರಾಯ ಶಿಂಧೆ, ವಿಜಯಕುಮಾರ ಜೋಗುರ್, ವಿಜಯಕುಮಾರ ಟೈಗರ್, ಜಿಲ್ಲಾ ಮಹಿಳಾ ಘಟಕದ ಸಂಚಾಲಕಿ ಸವೀತಾ ತೀರ್ಥ, ಉಪ ವಿಭಾಗೀಯ ಸಂಚಾಲಕರಾದ ವಿಜಯಕುಮಾರ ಶಿಂಧೆ, ವಿಠಲ ತೇಗನೂರ್, ಗುಂಡಪ್ಪ ಮಂದೇವಾಲ್, ಜಗದೀಶ್ ಸಾಗರ್, ಗೌತಮ್ ಉಪಾಧ್ಯಾಯ ಹಾಗೂ ಭಾಗಣ್ಣ ಕಟ್ಟಿ ಸೇರಿದಂತೆ ವಿಭಾಗೀಯ ಮಟ್ಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave A Reply

Your email address will not be published.