ಆಳಂದ: ಸೂಫಿ-ಸಂತ ಹಜರತ್ ಲಾಡ್ಲೆ ಮಶಾಕ್ ದರ್ಗಾ ಉರುಸ್‌ಗೆ ಸಿದ್ಧಗೊಂಡಿದೆ.
ಆಳಂದ: ಪಟ್ಟಣದ ಭಾವೈಕತ್ಯೆಯ ಸೂಫಿ ಸಂತ ಹಜರತ್ ಲಾಡ್ಲೆ ಮಶಾಕ ಅನ್ಸಾರಿ ಅವರ ೬೭೧ನೇ ಉರುಸ್ ಅಂಗವಾಗಿ ಈಗಾಗಲೇ ಸಿದ್ಧತೆ ಭರದಿಂದ ಸಾಗಿದ್ದು, ಸೆ. ೨೨ರಂದು ಗಂಧೋತ್ಸವ ರಾತ್ರಿ. ೯:೦೦ಗಂಟೆಗೆ ಪ್ರಸಿದ್ಧ ಕಲಾವಿದರಿಂದ ಖವಾಲಿ ಕಾರ್ಯಕ್ರಮ ಹಾಗೂ ೨೩ ದೀಪೋತ್ಸವ ಸೇರಿ ವಿವಿಧ ಕಾರ್ಯಕ್ರಮಗಳು ಜರುಗಲಿವೆ.
ಈ ಕುರಿತು ಪಟ್ಟಣದ ಹೊರವಲಯದ ತಾಲೂಕು ಆಡಳಿತ ಸೌಧನಲ್ಲಿ ತಹಸೀಲ್ದಾರ ಅಣ್ಣಾರಾವ್ ಪಾಟೀಲ ಅಧ್ಯಕ್ಷತೆಯಲ್ಲಿ ಕರೆದ ಉರುಸ್ ಸಿದ್ಧತಾ ಸಭೆಯಲ್ಲಿ ಸರ್ವಾನುಮತದಿಂದ ಉರುಸ್ ಯಶಸ್ವಿಗೆ ನಿರ್ಧರಿಸಲಾಯಿತು.
೨೨ರಂದು ಗಂಧೋತ್ಸವ ತಹಸೀಲ್ದಾರ ಕಚೇರಿಯಲ್ಲಿ ಸಾಂಪ್ರದಾಯಿಕ ಪೂಜೆ ಬಳಿಕ ಹಳೆಯ ತಹಸೀಲ್ದಾರ ಕಚೇರಿಯಿಂದ ಮುಖ್ಯ ರಸ್ತೆ ಹಾಗೂದರ್ಗಾದವರೆಗೆ ನೆಡೆಯುವ ಮೆರವಣಿಗೆಗೆ ಪೊಲೀಸ್ ಬಂದೋಬಸ್ತ್ ಒದಗಿಸುವಂತೆ ಹಾಜರಿದ್ದ ಪಿಐ ಶರಣಬಸಪ್ಪ ಕೊಡ್ಲಾ ಅವರಿಗೆ ಸೂಚನೆ ನೀಡಿದರು.
ಸ್ವಚ್ಛತೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಬೀದಿ ದೀಪಗಳ ನಿರ್ವಹಣೆ ಕುರಿತು ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ ಅವರಿಗೆ ತಹಸೀಲ್ದಾರರು ಹೇಳಿದರು.
ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ ಉರುಸ್‌ಗೆ ಸಹಕಾರಿಸುವ ಕುರಿತು ಮಾತನಾಡಿದರು.
ನಗರ ಸಿಪಿಐ ಶರಣಬಸಪ್ಪ ಕೊಡ್ಲಾ ಅವರು ಉರುಸ್‌ನಲ್ಲಿ ಶಾಂತಿ ಸುವ್ಯವಸ್ಥೆ ಹಾಗೂ ಬಂದೋಬಸ್ತ್ಗೆಪೊಲೀಸ್ ಬಂದೋಬಸ್ತ್ ನಿಯೋಜನೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ದರ್ಗಾ ಕಮೀಟಿ ಅಧ್ಯಕ್ಷ ಆಫಿಜ್ ಇದ್ರೀಸ್ ಅನ್ಸಾರಿ, ಉಪಾಧ್ಯಕ್ಷ ನೋಹಿದ್ ಅನ್ಸಾರಿ, ಯುನೂಸ್ ಅನ್ಸಾರಿ, ಖಮುರೋದ್ದೀನ್ ಅನ್ಸಾರಿ, ಕಾರ್ಯದರ್ಶಿ ರಬ್ಬಾನಿ ಅನ್ಸಾರಿ, ಖಜಾಂಚಿ ಮಜರ್ ಅನ್ಸಾರಿ, ಸೇರಿದಂತೆ ಪದಾಧಿಕಾರಿಗಳು ಮಾತನಾಡಿ ಉರುಸ್ ಅಂಗವಾಗಿ ಕೈಗೊಂಡ ಸಿದ್ಧತೆ ಹಾಗೂ ಅಗತ್ಯ ನೆರವು ನೀಡುವಂತೆ ತಾಲೂಕು ಆಡಳಿತಕ್ಕೆ ಮನವಿ ಮಾಡಿದರು.