ಸಭೆಗಷ್ಟೇ ಸೀಮಿತವಾಗದೆ ಕ್ಷೇತ್ರಕ್ಕಿಳಿಯಿರಿ: ಅಧಿಕಾರಿಗಳಿಗೆ ಡಿಸಿ ಸೂಚನೆ
ಮುನ್ನೊಳ್ಳಿಯಲ್ಲಿ ಪ್ರಜಾಸೇವೆ ಕದನ; ೫೨ ಅರ್ಜಿಗಳ ಸ್ವೀಕಾರ
ಆಳಂದ: ತಾಲೂಕಿನ ಮುನ್ನಹಳ್ಳಿ ಗ್ರಾಮ ಪಂಚಾಯತ್ ಕಚೇರಿ ಆವರಣದಲ್ಲಿ ಜಿಲ್ಲಾ ಹಾಗೂ ತಾಲೂಕು ಆಡಳಿತ ಆಶ್ರಯದಲ್ಲಿ ಹಮ್ಮಿಕೊಂಡ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಸಾರ್ವಜನಿಕ ಆಹ್ವಾಲು ಸ್ವೀಕರಿಸಿದರು.
ಆಳಂದ: ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ, ಆಡಳಿತವೇ ಜನರ ಬಾಗಿಲಿಗೆ ತೆರಳಿ ಕುಂದುಕೊರತೆಗಳನ್ನು ಆಲಿಸಿ ಪರಿಹಾರ ಒದಗಿಸುವ ಉದ್ದೇಶದಿಂದ ಪ್ರಜಾಸೇವೆ ಅಭಿಯಾನವನ್ನು ಜಾರಿಗೊಳಿಸಲಾಗಿದೆ. ಜನರಿಗೆ ಜನಸ್ನೇಹಿ, ಪಾರದರ್ಶಕ ಹಾಗೂ ಹೊಣೆಗಾರಿಕೆಯ ಆಡಳಿತ ನೀಡುವುದು ಸರ್ಕಾರದ ಆಶಯವಾಗಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಹೇಳಿದರು.
ಆಳಂದ ತಾಲೂಕಿನ ಮುನ್ನೊಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಶನಿವಾರ ನಡೆದ ಹೋಬಳಿ ಮಟ್ಟದ ಪ್ರಜಾಸೇವೆ ಅಭಿಯಾನಕ್ಕೆ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಸಾರ್ವಜನಿಕರ ಸಮಸ್ಯೆಗಳನ್ನು ಅಧಿಕಾರಿಗಳು ನೇರವಾಗಿ ಆಲಿಸಿ, ಸಾಧ್ಯವಾದಷ್ಟು ಸ್ಥಳದಲ್ಲೇ ಪರಿಹಾರ ಒದಗಿಸಬೇಕು. ಜನರು ತಮ್ಮ ಅರ್ಜಿಗಳಿಗಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿವಾರಣೆಯಾಗಬೇಕು ಎಂದು ತಿಳಿಸಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ೧೦೦ ದಿನಗಳ ಕಾರ್ಯಕ್ರಮದ ಅಂಗವಾಗಿ ಪ್ರಜಾಸೇವೆಗಾಗಿ ಹೊಸ ಇಲಾಖೆಯನ್ನು ಪ್ರಾರಂಭಿಸಿ, ಜನಸ್ನೇಹಿ ಆಡಳಿತಕ್ಕೆ ಅನುಕೂಲವಾಗುವ ನೂತನ ತಂತ್ರಾAಶವನ್ನು ಸಿದ್ಧಪಡಿಸಲಾಗಿದೆ. ಈ ಅಭಿಯಾನವು ಈ ಹಿಂದೆ ಜಾರಿಯಲ್ಲಿದ್ದ ‘ಜನಸ್ಪಂದನ’ ಹಾಗೂ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮಗಳ ಮುಂದುವರಿದ ಭಾಗವಾಗಿದೆ. ಆದರೆ, ತಂತ್ರಜ್ಞಾನದ ಬಳಕೆಯ ಮೂಲಕ ಅರ್ಜಿಗಳ ನಿರ್ವಹಣೆ ಹಾಗೂ ಮೇಲ್ವಿಚಾರಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಪ್ರತಿಯೊಂದು ಅರ್ಜಿಗೂ ವಿಶಿಷ್ಟ ಗುರುತಿನ ಸಂಖ್ಯೆ (ಯುನಿಕ್ ಐಡೆಂಟಿಟಿ ಕೋಡ್) ನೀಡಲಾಗುತ್ತದೆ. ಬಳಿಕ ಅರ್ಜಿಯನ್ನು IPಉಖS ತಂತ್ರಾAಶದಲ್ಲಿ ದಾಖಲಿಸಿ, ಅದರ ವಿಲೇವಾರಿ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ. ಅರ್ಜಿಗೆ ಪರಿಹಾರ ದೊರೆತಿದೆಯೇ ಅಥವಾ ಇಲ್ಲವೇ ಎಂಬುದನ್ನು ಜಿಲ್ಲಾ ಮಟ್ಟದಲ್ಲಿ ಮಾತ್ರವಲ್ಲದೆ, ರಾಜ್ಯ ಮಟ್ಟದಲ್ಲಿ ಮುಖ್ಯಮಂತ್ರಿಗಳ ಕಚೇರಿಯಿಂದಲೂ ಪರಿಶೀಲಿಸುವ ವ್ಯವಸ್ಥೆ ರೂಪಿಸಲಾಗಿದೆ. ಇದರಿಂದ ಅಧಿಕಾರಿಗಳು ಅರ್ಜಿಗಳ ವಿಲೇವಾರಿಯಲ್ಲಿ ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದರು.
ಸಭೆಗಷ್ಟೇ ಸೀಮಿತ ಬೇಡ:
ಅಧಿಕಾರಿಗಳು ಸಭೆಗಳಿಗೆ ಮಾತ್ರ ಸೀಮಿತವಾಗದೆ, ಕ್ಷೇತ್ರಗಳಿಗೆ ಭೇಟಿ ನೀಡಿ ಸಾರ್ವಜನಿಕರ ನೈಜ ಸಮಸ್ಯೆಗಳನ್ನು ಅರಿತುಕೊಳ್ಳಬೇಕು ಎಂದು ಇಕ್ರಮ್ ಶರೀಫ್ ಸೂಚಿಸಿದರು.
ಸ್ಥಳೀಯ ಶಾಲೆಗಳು, ಆಸ್ಪತ್ರೆಗಳು, ಕೃಷಿ ಭೂಮಿಗಳು ಹಾಗೂ ಕುಡಿಯುವ ನೀರಿನ ಯೋಜನೆಗಳಿಗೆ ಅಧಿಕಾರಿಗಳು ನೇರವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ರೈತರು ಎದುರಿಸುತ್ತಿರುವ ಮೇವಿನ ಕೊರತೆ, ಜಮೀನು ಸರ್ವೇಗೆ ಸಂಬAಧಿಸಿದ ಸಮಸ್ಯೆಗಳು ಹಾಗೂ ಆರೋಗ್ಯ ಸೇವೆಗಳಲ್ಲಿನ ದೂರುಗಳಿಗೆ ಕಾಲಮಿತಿಯೊಳಗೆ ಸ್ಪಂದಿಸಬೇಕು. ಸಾರ್ವಜನಿಕರೊಂದಿಗೆ ಅಧಿಕಾರಿಗಳು ಸೌಜನ್ಯದಿಂದ ನಡೆದುಕೊಂಡು, ಅವರ ಸಮಸ್ಯೆಗಳನ್ನು ಸಹಾನುಭೂತಿಯಿಂದ ಆಲಿಸಿ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ನಿರ್ದೇಶನ ನೀಡಿದರು.
ಅಭಿಯಾನದ ಸಂದರ್ಭದಲ್ಲಿ ಗ್ರಾಮಸ್ಥರು ಸಲ್ಲಿಸಿದ ವಿವಿಧ ಮನವಿಗಳನ್ನು ಸ್ವೀಕರಿಸಿ, ಸಂಬAಧಪಟ್ಟ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.
೧೧ ಸ್ಟಾಲ್‌ಗಳಲ್ಲಿ ೫೨ ಅರ್ಜಿಗಳ ಸ್ವೀಕಾರ:
ಪ್ರಜಾಸೇವೆ ಆಂದೋಲನದ ಅಂಗವಾಗಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಒಟ್ಟು ೧೧ ಸ್ಟಾಲ್‌ಗಳನ್ನು ತೆರೆಯಲಾಗಿತ್ತು. ಸಾರ್ವಜನಿಕರಿಂದ ಆನ್‌ಲೈನ್ ಮೂಲಕ ೫೨ ಅರ್ಜಿಗಳನ್ನು ಸ್ವೀಕರಿಸಲಾಯಿತು. ವಿವಿಧ ಸರ್ಕಾರಿ ಯೋಜನೆಗಳು, ಸೌಲಭ್ಯಗಳು ಹಾಗೂ ಇಲಾಖೆಗಳ ಸೇವೆಗಳ ಕುರಿತು ಗ್ರಾಮಸ್ಥರಿಗೆ ಮಾಹಿತಿ ನೀಡಲಾಯಿತು.
ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಕಂದಾಯ, ಗ್ರಾಮೀಣಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಲೀಡ್ ಬ್ಯಾಂಕ್, ಎಸ್‌ಐಆರ್, ವಿಬಿ-ಜಿ-ರಾಮ್ ಜಿ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಆಹಾರ, ಜೆಸ್ಕಾಂ, ಯುವ ನಿಧಿ ಹಾಗೂ ಸಹಕಾರ ಸೇರಿದಂತೆ ಪ್ರಮುಖ ಇಲಾಖೆಗಳ ಸ್ಟಾಲ್‌ಗಳನ್ನು ಸ್ಥಾಪಿಸಿ ಸಾರ್ವಜನಿಕರಿಗೆ ಇಲಾಖಾವಾರು ಯೋಜನೆಗಳ ಮಾಹಿತಿ ಒದಗಿಸುವುದರ ಜತೆಗೆ, ಅರ್ಜಿಗಳನ್ನು ಸ್ವೀಕರಿಸಿ ಸಂಬAಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಯಿತು.
ನೈಜ ಪರಿಹಾರ ತಲುಪಿಸುವುದು ಮುಖ್ಯ: ಸಿಇಒ ರಾಹುಲ್:
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಎಸ್. ಸಂಕನೂರ ಮಾತನಾಡಿ, ಸಾರ್ವಜನಿಕರು ತಮ್ಮ ಕುಂದುಕೊರತೆಗಳನ್ನು ಸಲ್ಲಿಸಲು ತಾಲೂಕು ಅಥವಾ ಜಿಲ್ಲಾ ಕೇಂದ್ರಗಳಿಗೆ ಪದೇಪದೇ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ಜಿಲ್ಲಾ ಮಟ್ಟದ ಅಧಿಕಾರಿಗಳೇ ಗ್ರಾಮಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ಹೇಳಿದರು.
ಪ್ರಜಾಸೇವೆ ಅಭಿಯಾನವು ಕೇವಲ ಕಾಟಾಚಾರದ ಕಾರ್ಯಕ್ರಮವಾಗಿ ಉಳಿಯದೆ, ಜನರಿಗೆ ನೈಜ ಪರಿಹಾರ ತಲುಪಿಸುವ ಕಾರ್ಯವಿಧಾನವಾಗಬೇಕು. ಅಧಿಕಾರಿಗಳು ಸಾರ್ವಜನಿಕರ ಅಹವಾಲುಗಳನ್ನು ಗಂಭೀರವಾಗಿ ಪರಿಗಣಿಸಿ, ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.
ಸಾರ್ವಜನಿಕರು ಸಲ್ಲಿಸಿದ ಅರ್ಜಿಗಳಲ್ಲಿ ತಕ್ಷಣವೇ ಬಗೆಹರಿಸಬಹುದಾದ ಸರಳ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ. ಹೆಚ್ಚಿನ ಸಮಯ, ಪರಿಶೀಲನೆ ಅಥವಾ ವಿವಿಧ ಇಲಾಖೆಗಳ ಸಮನ್ವಯ ಅಗತ್ಯವಿರುವ ಸಂಕೀರ್ಣ ಸಮಸ್ಯೆಗಳಿಗೆ ಶೀಘ್ರವಾಗಿ ಸೂಕ್ತ ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಎಸ್‌ಪಿ ಅಡ್ಡೂರು ಶ್ರೀನಿವಾಸುಲು, ಸಹಾಯಕ ಆಯುಕ್ತೆ ರೀತಿಕಾ ವರ್ಮಾ, ಪಂಚ ಗ್ಯಾರಂಟಿ ಯೋಜನೆಗಳ ಆಳಂದ ತಾಲೂಕು ಅಧ್ಯಕ್ಷ ಶಿವಪುತ್ರಪ್ಪ ಪಾಟೀಲ್, ಕಲಬುರಗಿ ಪಶು ಸಂಗೋಪನಾ ಜಂಟಿ ನಿರ್ದೇಶಕ ಡಾ. ಸಂಜಯ ರೆಡ್ಡಿ, ಸಾಮಾಜಿಕ ಉಪ ಸಂರಕ್ಷಣಾಧಿಕಾರಿ ಸಾಗರ ತಾವಡೆ, ಡಿಡಿಪಿಐ ಶಂಕ್ರಮ್ಮ ಢವಳಗಿ, ಸಹಾಯಕ ಕೃಷಿ ನಿರ್ದೇಶಕ ತಿಪ್ಪೇಸ್ವಾಮಿ, ಜೆಸ್ಕಾಂ ಎಇಇ ಪ್ರಭು ಮಡ್ಡಿತೋಟ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಸಂತೋಷ್ ಇನಾಂದಾರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ, ತಾಲೂಕು ಅಧಿಕಾರಿ ವಿಜಯಲಕ್ಷಿö್ಮÃ ಹೋಳ್ಕರ್, ಜಿಲ್ಲಾ ಆರೋಗ್ಯಾಧಿಕಾರಿ ಶರಣಬಸಪ್ಪ ಕ್ಯಾತನಾಳ ವಿವಿಧ ಇಲಾಖೆಗಳ ಅಧಿಕಾರಿಗಳು, ಕಂದಾಯ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ, ಸಾರ್ವಜನಿಕರು ಪಾಲ್ಗೊಂಡಿದ್ದರು.
ತಹಸೀಲ್ದಾರ್ ಅಣ್ಣಾರಾವ್ ಪಾಟೀಲ್ ಸ್ವಾಗತಿಸಿದರು. ಕಲ್ಯಾಣರಾವ್ ಬಿಜ್ಜರಗಿ ನಿರೂಪಿಸಿದರು.