Shubhashaya News

ಸೇಡಂ: ರಕ್ತದಾನ ಶಿಬಿರ ಆಯೋಜಿಸಿ 80ಕ್ಕೂ ಅಧಿಕ ದಾನಿಗಳಿಗೆ ಹೆಲ್ಮೆಟ್ ವಿತರಣೆ

ಸೇಡಂ: ಈದ್‌-ಮಿಲಾದ್‌-ಉನ್‌-ನಬಿ ಹಬ್ಬದ ಅಂಗವಾಗಿ, ಪ್ರವಾದಿ ಮೊಹಮ್ಮದ್ ಅವರ 1501ನೇ ಜನ್ಮದಿನಾಚರಣೆಯ ಪ್ರಯುಕ್ತ ಹಮ್ಜಾ ಚಾರಿಟೇಬಲ್ ಟ್ರಸ್ಟ್ ಸೇಡಂ ವತಿಯಿಂದ ಹಾಗೂ ಜವಾದರ ರಕ್ತದಾನಿ ಗುಲ್ಬರ್ಗ ಸಹಯೋಗದಲ್ಲಿ ಪಟ್ಟಣದ ಕೆಎನ್‌ಜೆಡ್ ಪಕ್ಷದ ಹಾಲ್‌ನಲ್ಲಿ ಒಂದು ದಿನದ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು.

ಶಿಬಿರದಲ್ಲಿ 80ಕ್ಕೂ ಅಧಿಕ ಮಂದಿ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು. ರಕ್ತದಾನ ಮಾಡಿದ ಪ್ರತಿಯೊಬ್ಬರಿಗೂ ಪ್ರೋತ್ಸಾಹದ ಸಂಕೇತವಾಗಿ ಹೆಲ್ಮೆಟ್ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಹಮ್ಜಾ ಚಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಸೈಯದ್ ಸಂಶೋದ್ದೀನ್ ಶಾಹ್ ಖಾದ್ರಿ ಚಿಸ್ತಿ ಜಮೆ ಸಲಾಸಿಲ್, ಕಳೆದ ವರ್ಷದಂತೆ ಈ ವರ್ಷವೂ ಟ್ರಸ್ಟ್ ವತಿಯಿಂದ ವಿವಿಧ ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ದಾನಗಳಲ್ಲಿ ರಕ್ತದಾನ ಶ್ರೇಷ್ಠ ದಾನವಾಗಿದ್ದು, ಮತ್ತೊಬ್ಬರ ಜೀವ ಉಳಿಸುವಂತಹ ಸಮಾಜಮುಖಿ ಕಾರ್ಯಗಳಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಅನಗತ್ಯವಾಗಿ ಹಣವನ್ನು ವಿವಿಧ ಕಾರ್ಯಗಳಿಗೆ ಖರ್ಚು ಮಾಡುವ ಬದಲು, ಒಬ್ಬ ವ್ಯಕ್ತಿಯ ಜೀವ ಉಳಿಸುವ ಸತ್ಕಾರ್ಯಕ್ಕೆ ಬಳಸಬೇಕು. ಆಸ್ಪತ್ರೆಗಳಲ್ಲಿ ರಕ್ತದ ಕೊರತೆಯಿಂದಾಗಿ ಅನೇಕ ರೋಗಿಗಳು ಹಾಗೂ ಅವರ ಕುಟುಂಬಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಕ್ತದಾನ ಮಾಡುವ ಮೂಲಕ ಸಂಕಷ್ಟದಲ್ಲಿರುವವರಿಗೆ ಆಸರೆಯಾಗಬೇಕು ಎಂದು ಅವರು ಕರೆ ನೀಡಿದರು.

ಬೆಳಿಗ್ಗೆ 10 ಗಂಟೆಗೆ ಆರಂಭವಾದ ರಕ್ತದಾನ ಶಿಬಿರದಲ್ಲಿ 80ಕ್ಕೂ ಅಧಿಕ ಮಂದಿ ರಕ್ತದಾನ ಮಾಡಿದರು. ಬಳಿಕ ರಕ್ತದಾನಿಗಳಿಗೆ ಹೆಲ್ಮೆಟ್ ವಿತರಿಸಲಾಯಿತು.

ಸಾಮಾಜಿಕ ಸೇವೆ ಮತ್ತಷ್ಟು ವಿಸ್ತರಿಸಲು ಕರೆ

ಕಾರ್ಯಕ್ರಮದಲ್ಲಿ ಮಾತನಾಡಿದ ಸೇಡಂ ಠಾಣೆಯ ಪಿಎಸ್‌ಐ ಉಪೇಂದ್ರ ಕುಮಾರ್, ಹಮ್ಜಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತಿವರ್ಷ ರಕ್ತದಾನ ಶಿಬಿರ ಹಾಗೂ ಹೆಲ್ಮೆಟ್ ವಿತರಿಸುವಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ಜನರ ಜೀವ ರಕ್ಷಣೆಗೆ ಟ್ರಸ್ಟ್ ಮುಂದಾಗಲಿ ಎಂದು ಆಶಿಸಿದರು. ಪ್ರವಾದಿ ಮೊಹಮ್ಮದ್ ಅವರ ಜೀವನ ಚರಿತ್ರೆಯನ್ನು ಅಧ್ಯಯನ ಮಾಡಿ, ಅವರು ತೋರಿಸಿಕೊಟ್ಟ ಮಾನವೀಯತೆ, ಶಾಂತಿ ಹಾಗೂ ಸೇವೆಯ ಮಾರ್ಗದಲ್ಲಿ ಎಲ್ಲರೂ ನಡೆಯಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮಾಜಿ ಪುರಸಭೆ ಅಧ್ಯಕ್ಷ ಅಬ್ದುಲ್ ಗಫೂರ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮೊಹಮ್ಮದ್ ಗೌಸ್, ಎಂ.ಕೆ. ನೋಬಲ್ ಸಂಸ್ಥೆಯ ಸಂಸ್ಥಾಪಕ ಡಾ. ಎಂ.ಡಿ. ಸಮೀವುಲ್ಲಾ, ಡಾ. ಸೈಯದ್ ಅಜರೋದ್ದೀನ್, ಟಿಪ್ಪು ಟ್ರಸ್ಟ್ ಅಧ್ಯಕ್ಷ ಶೇಕ್ ಆದಂ, ಡಿಎಂಎಸ್ ಅಧ್ಯಕ್ಷ ಶೇಕ್ ಸಲೀಂ, ಹಮ್ಜಾ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಸೈಯದ್ ಸಂಶೋದ್ದೀನ್ ಶಾಹ್ ಖಾದ್ರಿ, ಚಿಸ್ತಿ ಜಮೆ ಸಲಾಸಿಲ್ ಅಧ್ಯಕ್ಷ ಅಮೀರ್ ಜಾನ್, ಉಪಾಧ್ಯಕ್ಷ ಅಬ್ದುಲ್ ಖದೀರ್, ಪ್ರಧಾನ ಕಾರ್ಯದರ್ಶಿ ಡಾ. ಅಲ್ಲಾಭಕ್ಷ್, ಖಜಾಂಚಿ ಮೆಹಬೂಬ್ ಸಾಬ್, ಸದಸ್ಯ ಹುಸೇನ್ ಪಟೇಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave A Reply

Your email address will not be published.