ಸೇಡಂ: ರೈತರನ್ನು ನೆಲದ ಮೇಲೆ ಕೂರಿಸಿ ಸಭೆ ನಡೆಸಿದ ಅಧಿಕಾರಿಗಳು: ಹೋರಾಟಗಾರರ ಆಕ್ರೋಶ
ಸಹಾಯಕ ಆಯುಕ್ತ ಪ್ರಭುರೆಡ್ಡಿ, ತಹಸೀಲ್ದಾರ್ ಶ್ರೀಯಾಂಕ ಧನಶ್ರೀ ವಿರುದ್ಧ ಸ್ಥಳೀಯರ ಅಸಮಾಧಾನ
ಕಲಬುರಗಿ: ಸಿಮೆಂಟ್ ಕಂಪನಿಗಳ ವಿರುದ್ಧ ರೈತರು ನಡೆಸಲು ಉದ್ದೇಶಿಸಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸೇಡಂ ಸಹಾಯಕ ಆಯುಕ್ತರ ಕಚೇರಿಯಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಸಭೆಯಲ್ಲಿ ರೈತರನ್ನು ನೆಲದ ಮೇಲೆ ಕೂರಿಸಿ ಸಭೆ ನಡೆಸಿರುವುದಕ್ಕೆ ಹೋರಾಟಗಾರರು ಹಾಗೂ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೇಡಂ ಸಹಾಯಕ ಆಯುಕ್ತ ಪ್ರಭುರೆಡ್ಡಿ, ಸೇಡಂ ತಹಸೀಲ್ದಾರ್ ಶ್ರೀಯಾಂಕ ಎ. ಧನಶ್ರೀ, ಚಿತ್ತಾಪುರ, ಶಹಾಬಾದ್ ಹಾಗೂ ಚಿಂಚೋಳಿ ತಾಲೂಕುಗಳ ತಹಸೀಲ್ದಾರರು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಕೈಗಾರಿಕಾ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಕಲಬುರಗಿ ಜಿಲ್ಲೆಯಲ್ಲಿರುವ ಸಿಮೆಂಟ್ ಕಂಪನಿಗಳು ಸರ್ಕಾರದ ಸುತ್ತೋಲೆಗಳು, ಆದೇಶಗಳು, ನಡಾವಳಿಗಳು ಹಾಗೂ ಕಾಯ್ದೆ-ಕಾನೂನುಗಳನ್ನು ಉಲ್ಲಂಘಿಸಿವೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಕಂಪನಿಗಳಿಗೆ ನೀಡಿರುವ ವಿನಾಯಿತಿಗಳು, ಪರವಾನಗಿಗಳು, ರಿಯಾಯಿತಿಗಳು ಹಾಗೂ ಮಂಜೂರಾತಿಗಳನ್ನು ರದ್ದುಪಡಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರೈತರು ಹಾಗೂ ಹೋರಾಟಗಾರರು ಒತ್ತಾಯಿಸುತ್ತಿದ್ದಾರೆ.
ಈ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಲಬುರಗಿ ಜಿಲ್ಲಾಧಿಕಾರಿ ಕಚೇರಿಗೆ ಬೀಗ ಹಾಕಿ, ಮೂರು ವಿಧದ ಮುಳ್ಳು ಬಡಿದು ಪ್ರತಿಭಟನೆ ನಡೆಸಲು ರೈತರು ಮುಂದಾಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಸಭೆ ಕರೆದಿದ್ದರು ಎನ್ನಲಾಗಿದೆ.
ಆದರೆ, ರೈತರ ಸಮಸ್ಯೆಗಳನ್ನು ಆಲಿಸಲು ಕರೆದ ಸಭೆಯಲ್ಲಿ ಅವರಿಗೆ ಸೂಕ್ತ ಆಸನ ವ್ಯವಸ್ಥೆ ಕಲ್ಪಿಸದೆ ನೆಲದ ಮೇಲೆ ಕೂರಿಸಿ ಸಭೆ ನಡೆಸಿರುವುದು ಅಧಿಕಾರಿಗಳ ರೈತಪರ ಕಾಳಜಿಯನ್ನೇ ಪ್ರಶ್ನಿಸುವಂತಾಗಿದೆ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರೊಂದಿಗೆ ಗೌರವಯುತವಾಗಿ ನಡೆದುಕೊಳ್ಳಬೇಕಾದ ಅಧಿಕಾರಿಗಳೇ ಅವರನ್ನು ನೆಲದ ಮೇಲೆ ಕೂರಿಸಿರುವುದು ಖಂಡನೀಯ. ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಅವರ ಬೇಡಿಕೆಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳುವ ಬದಲು ಈ ರೀತಿಯ ವರ್ತನೆ ತೋರಿರುವುದು ಸರಿಯಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಹಾಯಕ ಆಯುಕ್ತ ಪ್ರಭುರೆಡ್ಡಿ ಹಾಗೂ ಸೇಡಂ ತಹಸೀಲ್ದಾರ್ ಶ್ರೀಯಾಂಕ ಧನಶ್ರೀ ಅವರ ನಡೆಗೆ ಸ್ಥಳೀಯರು ಹಾಗೂ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದು, ರೈತರೊಂದಿಗೆ ಸಭೆ ನಡೆಸುವಾಗ ಕನಿಷ್ಠ ಶಿಷ್ಟಾಚಾರ ಹಾಗೂ ಗೌರವ ಕಾಪಾಡಬೇಕು ಎಂದು ಆಗ್ರಹಿಸಿದ್ದಾರೆ.