Shubhashaya News

ಶಿಕ್ಷಕ ವೃತ್ತಿಯ ಘನತೆ ಹೆಚ್ಚಿಸಿದ ಮಾರುತಿ ಸುತಾರ್: ಅರುಣಕುಮಾರ ಪಾಟೀಲ್

ಅಫಜಲಪುರ: ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾದದ್ದು. ಅದರ ಘನತೆ ಮತ್ತು ಗೌರವವನ್ನು ವರ್ಣಿಸಲು ಸಾಧ್ಯವಿಲ್ಲ. ಶಿಕ್ಷಕರಾದ ಮಾರುತಿ ಸುತಾರ್ ಅವರು 32 ವರ್ಷಗಳ ಕಾಲ ಸಹಶಿಕ್ಷಕ ಹಾಗೂ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸುವ ಮೂಲಕ ಶಿಕ್ಷಕ ವೃತ್ತಿಯ ಘನತೆ ಮತ್ತು ಗೌರವವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ಎಂದು ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ ಎಂ.ವೈ. ಪಾಟೀಲ್ ಹೇಳಿದರು.

ತಾಲೂಕಿನ ಮಾಶಾಳ ಗ್ರಾಮದ ಶ್ರೀ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಮುಖ್ಯಶಿಕ್ಷಕ ಮಾರುತಿ ಸುತಾರ್ ಅವರ ವಯೋನಿವೃತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಮಹತ್ವದ ಜವಾಬ್ದಾರಿಯನ್ನು ಶಿಕ್ಷಕರು ಹೊಂದಿದ್ದಾರೆ. ಈ ಜವಾಬ್ದಾರಿಯನ್ನು ಅರಿತು ಮಾರುತಿ ಸುತಾರ್ ಅವರು ಪ್ರಾಮಾಣಿಕತೆ ಹಾಗೂ ಬದ್ಧತೆಯಿಂದ ಸೇವೆ ಸಲ್ಲಿಸಿದ್ದು, ಅವರ ಸೇವೆ ಇತರ ಶಿಕ್ಷಕರಿಗೂ ಮಾದರಿಯಾಗಿದೆ ಎಂದರು.

ಜಿಪಂ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್ ಮಾತನಾಡಿ, ಯಾವ ಶಿಕ್ಷಕರು ವಿದ್ಯಾರ್ಥಿಗಳ ಮನಸ್ಸನ್ನು ಗೆದ್ದು ಬೋಧನೆ ಮಾಡುತ್ತಾರೋ, ಅಂತಹ ಶಿಕ್ಷಕರು ತಮ್ಮ ವೃತ್ತಿಯ ಘನತೆ ಮತ್ತು ಗೌರವವನ್ನು ಹೆಚ್ಚಿಸುತ್ತಾರೆ. ಮಾರುತಿ ಸುತಾರ್ ಅವರು ತಮ್ಮ ಸುದೀರ್ಘ ಸೇವಾವಧಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು, ಶಿಕ್ಷಣ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಶ್ರೀ ನಿರಂಜನ ಪ್ರಣವ ಮಹಾಸ್ವಾಮಿಗಳು, ಜೇವರ್ಗಿ ತಾಲೂಕಿನ ಶಿಕ್ಷಣ ಸಂಯೋಜಕ ಲಕ್ಷ್ಮಣ ಝಳಕಿ, ವಿಶ್ವನಾಥ ರೇವೂರ, ಚಂದ್ರಶೇಖರ ಬರಗಾಲೆ ಹಾಗೂ ಬಾಬಾಸಾಹೇಬ ಆಲೂರ ಮಾತನಾಡಿ, ಮಾರುತಿ ಸುತಾರ್ ಅವರ ಸೇವೆ ಹಾಗೂ ವ್ಯಕ್ತಿತ್ವವನ್ನು ಸ್ಮರಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ವೈಜುನಾಥ ಲಿಂಗದಳ್ಳಿ, ಚಂದ್ರಾಮಪ್ಪ ಪೂಜಾರಿ, ದುಂಡಪ್ಪ ಪೂಜಾರಿ, ಶಿವಪುತ್ರಪ್ಪ ಜಿಡ್ಡಗಿ, ರಾಮಲಿಂಗಯ್ಯ ಮಠ, ಅಶೋಕ ದೇಸಾಯಿ, ಗುರುಸಿದ್ದಯ್ಯ ನಂದಿಮಠ, ಯಲ್ಲಪ್ಪ ಪ್ಯಾಟಿ, ದೇಸು ಚಹ್ವಾಣ, ನಾರಾಯಣ ಅಂಬೂರೆ, ಶಂಕರ ನಾವಿ, ಸಂಗಪ್ಪ ಮ್ಯಾಳೇಸಿ, ಹುಸೇನಿ ಮುಜಾವರ, ಭೀಮಣ್ಣ ವಾಯಿ, ಜಗನ್ನಾಥ ಮೋರೆ, ಕಾಳಪ್ಪ ಸುತಾರ, ಗುರಪ್ಪ ಕಾಳಿ, ಶಿವಾನಂದ ರೇವೂರ ಸೇರಿದಂತೆ ಗ್ರಾಮಸ್ಥರು ಹಾಗೂ ಬಂಧುಬಳಗದವರು ಉಪಸ್ಥಿತರಿದ್ದರು.

ನಾಗಬಸುದೇಗಾಂವ ಕಾರ್ಯಕ್ರಮ ನಿರೂಪಿಸಿದರು. ಸೋಮಯ್ಯ ಹಿರೇಮಠ ಪ್ರಾರ್ಥನೆ ಸಲ್ಲಿಸಿ, ಸ್ವಾಗತಿಸಿದರು.

Leave A Reply

Your email address will not be published.