ಕಲಬುರಗಿ: ನೇಪಾಳ ರಾಷ್ಟ್ರದ ರಾಸುವಾ ಜಿಲ್ಲೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೀಕರ ಹಠಾತ್ ಪ್ರವಾಹ (Flash Flood) ಸಂಭವಿಸಿ ಜೀವ ಹಾನಿ, ಆಸ್ತಿ-ಪಾಸ್ತಿ ಹಾಗೂ ಮೂಲಸೌಕರ್ಯಗಳಿಗೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಿಂದ ನೇಪಾಳ ಪ್ರವಾಸಕ್ಕೆ ತೆರಳಿದವರ ಮಾಹಿತಿ ನೀಡಲು ಸಹಾಯವಾಣಿ ಸ್ಥಾಪಿಸಿದೆ.
ಜಿಲ್ಲೆಯಿಂದ ನೇಪಾಳಕ್ಕೆ ಪ್ರವಾಸಕ್ಕೆ ತೆರಳಿ, ಮೇಲ್ಕಂಡ ಪ್ರವಾಹದ ಘಟನೆಯಲ್ಲಿ ಸಿಲುಕಿಕೊಂಡಿರುವವರು ಅಥವಾ ಅವರ ಕುಟುಂಬಸ್ಥರು ತಕ್ಷಣವೇ ಜಿಲ್ಲಾ ವಿಪತ್ತು ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ: 08472-278677 ಹಾಗೂ ಪೊಲೀಸ್ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆಗಳಾದ: 9480805500, 9480803500, 08472-263604 2 228112 ತಕಗಕೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಇಕ್ರಂ ಶರೀಫ್ ಮನವಿ ಮಾಡಿದ್ದಾರೆ.
ನೇಪಾಳದಲ್ಲಿ ಪ್ರವಾಹಕ್ಕೆ ಸಿಲುಕೊಂಡಿರುವ ಜಿಲ್ಲೆಯ ನಿವಾಸಿಗಳು ಸ್ಥಳೀಯ ಹವಾಮಾನ ಪರಿಸ್ಥಿತಿ ಹಾಗೂ ಪ್ರವಾಹ ಮುನ್ನೆಚ್ಚರಿಕೆಗಳನ್ನು ಗಮನದಲ್ಲಿಟ್ಟುಕೊಂಡು ಅಪಾಯದ ಪ್ರದೇಶಗಳಿಗೆ ತೆರಳುವುದನ್ನು ತಪ್ಪಿಸಬೇಕು. ಅಲ್ಲದೆ ಸ್ಥಳೀಯ ಆಡಳಿತ ಹಾಗೂ ರಕ್ಷಣಾ ಸಂಸ್ಥೆಗಳು ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ಇಬ್ಬರು ಸುರಕ್ಷಿತ:
ನೇಪಾಳಕ್ಕೆ ಪ್ರಯಾಣಿಸಿರುವ ಹಾಗೂ ಪ್ರಸ್ತುತ ನೇಪಾಳದಲ್ಲಿರುವ ಜಿಲ್ಲೆಯ ಕಾಳಗಿ ತಾಲೂಕಿನ ಕೂಡ್ಲಿ ಗ್ರಾಮದ ನಿವಾಸಿ ಮಲ್ಲಿನಾಥ ಕೋಲಕುಂದಿ (50) ಹಾಗೂ ಚಿಂಚೋಳಿ ತಾಲೂಕಿನ ಕನಕಾಪೂರ ಗ್ರಾಮದ ನಿವಾಸಿ ಸಂಗಮೇಶ ಪಾಟೀಲ (30) ಇವರು ಪ್ರವಾಹ ಪೀಡಿತ ಪ್ರದೇಶದಿಂದ ಸುರಕ್ಷಿತವಾಗಿ ಯಾವುದೇ ತೊಂದರೆಗೊಳಗಾಗದೆ ಪ್ರಸ್ತುತ ಕಠ್ಮಂಡು ತಲುಪಿರುತ್ತಾರೆ. ಇಬ್ಬರೊಂದಿಗೆ ಜಿಲ್ಲಾಡಳಿತವು ನಿರಂತರವಾಗಿ ಸಂಪರ್ಕದಲ್ಲಿದ್ದು, ಅವರ ಸುರಕ್ಷತೆಯ ಕುರಿತು ಮಾಹಿತಿ ಪಡೆಯಲಾಗುತ್ತಿದೆ ಎಂದು ಡಿ.ಸಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.