ಕಲಬುರಗಿ: ರಂಗನಯನ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಪ್ರಸಿದ್ಧ ಕಾದಂಬರಿ ಆಧಾರಿತ ‘ಕೃಷ್ಣೇ ಗೌಡನ ಆನೆ’ ನಾಟಕವನ್ನು ನಗರದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಯಶಸ್ವಿಯಾಗಿ ಪ್ರದರ್ಶಿಸಲಾಯಿತು.
ಕಾರ್ಯಕ್ರಮಕ್ಕೆ ಎನ್.ವಿ. ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ವಿಜಯಕುಮಾರ ಗೋತಗಿ ಅವರು ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ ಶ್ರೀಗುರು ಸ್ವಾತಂತ್ರ್ಯ ಪದವಿ ಪೂರ್ವ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಶಂಕರ ಬಾಳಿ, ಚಿಮ್ಮಲಗಿ ಪಿಯು ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಸಂಗೀತ ಕುಲಕರ್ಣಿ, ಶಿವ ಪಿಯು ಕಾಲೇಜಿನ ಪ್ರಾಂಶುಪಾಲ ಅರುಣಕುಮಾರ ಚವಾಣ್ ಹಾಗೂ ಡಿ.ಡಿ.ಯು. ಸ್ವಾತಂತ್ರ್ಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಲ್ಲೇಶ್ ಜಿ. ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಶಂಕರ ಬಾಳಿ ಅವರು, ಕನ್ನಡ ಭಾಷೆ, ಸಾಹಿತ್ಯ ಹಾಗೂ ನಾಟಕದ ಮಹತ್ವ ಮತ್ತು ರಂಗಭೂಮಿಯ ಪಾತ್ರದ ಕುರಿತು ಮಾತನಾಡಿ, ಇಂತಹ ಸಾಹಿತ್ಯಾಧಾರಿತ ನಾಟಕಗಳು ಯುವಜನರಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ರಂಗನಯನ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಅರವಿಂದ ಕುಲಕರ್ಣಿ ಅವರು ಪ್ರಾಸ್ತಾವಿಕ ನುಡಿಗಳೊಂದಿಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ ಮತ್ತು ರಂಗಭೂಮಿಯ ನಡುವಿನ ಅವಿನಾಭಾವ ಸಂಬಂಧವನ್ನು ಬಿಂಬಿಸುವ ನಿಟ್ಟಿನಲ್ಲಿ ನಾಟಕ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ತೇಜಸ್ವಿ ಅವರ ಕಾದಂಬರಿಯ ಆಶಯವನ್ನು ರಂಗರೂಪದಲ್ಲಿ ಕಟ್ಟಿಕೊಟ್ಟ ‘ಕೃಷ್ಣೇ ಗೌಡನ ಆನೆ’ ನಾಟಕವು ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಕಲಾವಿದರ ಅಭಿನಯ, ಕಥಾವಸ್ತುವಿನ ನಿರೂಪಣೆ ಹಾಗೂ ರಂಗಪ್ರಸ್ತುತಿಗೆ ಸಾಹಿತ್ಯಾಸಕ್ತರು ಮತ್ತು ರಂಗಭೂಮಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.