ಕಲಬುರಗಿ: ಎಐಸಿಸಿ ಅಧ್ಯಕ್ಷ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ಭಾಷಣ ಮಾಡಿದ್ದ ಉತ್ತರಾಖಂಡದ ರಾಮಲೀಲಾ ಮೈದಾನ ಶುದ್ಧೀಕರಿಸಿರುವುದನ್ನು ಗುಂಡಗುರ್ತಿ ಗ್ರಾಮದ ಕಾಂಗ್ರೆಸ್ ಮುಖಂಡ ಶ್ರೀನಿವಾಸ ಬಣ್ಣಕ್ಕಿ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಉತ್ತರಾಖಂಡದ ಹಲ್ದವಾನಿಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಅವರು ಈಚೆಗೆ ಭಾಷಣ ಮಾಡಿದ್ದರು. ಕಾರ್ಯಕ್ರಮ ಮುಗಿದ ಕೆಲ ಹೊತ್ತಿನ ಬಳಿಕ ಬಿಜೆಪಿಯ ಮುಖಂಡರು ಮೈದಾನವನ್ನು ಶುದ್ಧೀಕರಣ ಮಾಡಿದ್ದರು. ಇದು ಖರ್ಗೆ ಅವರಿಗೆ ಮಾತ್ರವಲ್ಲ ಶೋಷಿತ ಸಮುದಾಯಗಳಿಗೆ ಮಾಡಿದ ಅವಮಾನ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.‘ಬಿಜೆಪಿ ಮತ್ತು ಆರ್‌ಎಸ್‌ಎಸ್ ಗುಲಾಮಗಿರಿ ಸಂಸ್ಕೃತಿಯನ್ನು ಪೋಷಣೆ ಮಾಡುತ್ತಿವೆ. ತಳ ಸಮುದಾಯದ ವ್ಯಕ್ತಿ ನಾಯಕ ಆಗುವುದನ್ನು ಒಪ್ಪಿಕೊಳ್ಳುತ್ತಿಲ್ಲ ಎಂಬ ಸಂದೇಶ ಇದರಲ್ಲಿದೆ. ಇದು ಬಹುದಿನಗಳ ಕಾಲ ನಡೆಯುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.‘ಸಂವಿಧಾನದ ಬಗ್ಗೆ ಗೌರವ ಇರುವುದಾಗಿ ಬಿಂಬಿಸಿಕೊಳ್ಳುವ ಬಿಜೆಪಿ ತೆರೆಮರೆಯಲ್ಲಿ ಇಂತಹ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿದೆ. ಅಂಬೇಡ್ಕರ್ ಹಾಗೂ ಸಂವಿಧಾನದ ಮೇಲೆ ನಂಬಿಕೆ ಇದ್ದರೆ ಆರೋಪಿಗಳನ್ನು ಕೂಡಲೇ ಗಡಿಪಾರು ಮಾಡಬೇಕು. ಇಂತಹ ದೌರ್ಜನ್ಯಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ’ ಎಂದರು.‘ಮಲ್ಲಿಕಾರ್ಜುನ್ ಖರ್ಗೆ ದೇಶ ಕಂಡ ಅತ್ಯುತ್ತಮ ರಾಜಕಾರಣಿ. ಶುದ್ಧೀಕರಣ ಮಾಡುವುದರೊಂದಿಗೆ ಬಿಜೆಪಿ ಕಾರ್ಯಕರ್ತರ ಮನುವಾದಿ ಮನಸ್ಥಿತಿ ಬಹಿರಂಗವಾಗಿದೆ. ಬಿಜೆಪಿ ನಾಯಕರು ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳದೇ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ’ ಎಂದು ಕಾಂಗ್ರೆಸ್ ಅವರು ಆರೋಪಿಸಿದರು.