Shubhashaya News

ಬಿಲ್ ಪಾವತಿಗೆ ಆಗ್ರಹಿಸಿ ಗುತ್ತಿಗೆದಾರರ ಧರಣಿ: ವಾರದೊಳಗೆ ಹಣ ಪಾವತಿಸದಿದ್ದರೆ ಪಾಲಿಕೆ ಮುತ್ತಿಗೆ ಎಚ್ಚರಿಕೆ

ಕಲಬುರಗಿ: 15ನೇ ಹಣಕಾಸು ಯೋಜನೆಯಡಿ ಪೂರ್ಣಗೊಳಿಸಿರುವ ಕಾಮಗಾರಿಗಳ ಬಾಕಿ ಬಿಲ್ಲುಗಳನ್ನು ಕೂಡಲೇ ಪಾವತಿಸಬೇಕು ಎಂದು ಆಗ್ರಹಿಸಿ ಕಲಬುರಗಿ ಮಹಾನಗರ ಪಾಲಿಕೆ ಗುತ್ತಿಗೆದಾರರ ಅಭಿವೃದ್ಧಿ ಪರ ಕಲ್ಯಾಣ ಸಂಘದ ವತಿಯಿಂದ ಸೋಮವಾರ ಮಹಾನಗರ ಪಾಲಿಕೆ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಯಿತು.

2024-25ನೇ ಸಾಲಿನ 15ನೇ ಹಣಕಾಸು ಯೋಜನೆಯ ಎರಡನೇ ಕಂತು ಹಾಗೂ 2025-26ನೇ ಸಾಲಿನ ಮೊದಲನೇ ಕಂತಿನಡಿ ಕೈಗೊಂಡು ಪೂರ್ಣಗೊಳಿಸಿರುವ ವಿವಿಧ ಕಾಮಗಾರಿಗಳ ಬಿಲ್ಲುಗಳನ್ನು ಸಲ್ಲಿಸಿ ಹಲವು ತಿಂಗಳು ಕಳೆದರೂ ಹಣ ಪಾವತಿಯಾಗಿಲ್ಲ ಎಂದು ಗುತ್ತಿಗೆದಾರರು ಆರೋಪಿಸಿದರು.

ಸಂಘದ ಅಧ್ಯಕ್ಷ ಎಂ.ಕೆ. ಪಾಟೀಲ ಮಾತನಾಡಿ, ನಾವು ಸಣ್ಣಪುಟ್ಟ ಗುತ್ತಿಗೆದಾರರಾಗಿದ್ದು, ಕಾಮಗಾರಿಗಳಿಗೆ ಅಗತ್ಯವಿರುವ ಜೆಲ್ಲಿ, ಉಸುಕು, ಸಿಮೆಂಟ್ ಹಾಗೂ ಕಾರ್ಮಿಕರ ಕೂಲಿ ಸೇರಿದಂತೆ ವಿವಿಧ ವೆಚ್ಚಗಳನ್ನು ಸಾಲ ಪಡೆದು ಭರಿಸಿ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದೇವೆ. ಕಾಮಗಾರಿ ಪೂರ್ಣಗೊಂಡ ಬಳಿಕ ಸಾಮಾನ್ಯವಾಗಿ ಒಂದು ತಿಂಗಳೊಳಗೆ ಬಿಲ್ ಪಾವತಿಯಾಗಬೇಕಿತ್ತು. ಆದರೆ ಹಲವು ತಿಂಗಳುಗಳಿಂದ ಹಣ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಸಾಲದಾತರಿಂದ ತೀವ್ರ ಒತ್ತಡ ಹಾಗೂ ಕಿರುಕುಳ ಎದುರಿಸುವಂತಾಗಿದೆ ಎಂದು ಅಳಲು ತೋಡಿಕೊಂಡರು.

ಈ ಕುರಿತು ಏಪ್ರಿಲ್ 1ರಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಹಾಗೂ ಮೇ 25ರಂದು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಅವರು ತಿಳಿಸಿದರು.

ವಾರದೊಳಗೆ ಬಿಲ್ ಪಾವತಿಗೆ ಆಗ್ರಹ

15ನೇ ಹಣಕಾಸು ಯೋಜನೆಯಡಿ ಅನುದಾನ ಲಭ್ಯವಿಲ್ಲದಿದ್ದರೆ, ಮಹಾನಗರ ಪಾಲಿಕೆಯಲ್ಲಿ ಲಭ್ಯವಿರುವ ಇತರೆ ಅನುದಾನಗಳಿಂದ ಹಣ ಹೊಂದಿಸಿ ಗುತ್ತಿಗೆದಾರರ ಬಾಕಿ ಬಿಲ್ಲುಗಳನ್ನು ಪಾವತಿಸಬೇಕು ಎಂದು ಸಂಘ ಒತ್ತಾಯಿಸಿತು.

ಒಂದು ವಾರದೊಳಗೆ ಬಾಕಿ ಬಿಲ್ಲುಗಳನ್ನು ಪಾವತಿಸದಿದ್ದರೆ ಮತ್ತೆ ಪಾಲಿಕೆ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು. ಅಲ್ಲದೆ, ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಿ ಬೀಗ ಹಾಕುವ ಹೋರಾಟ ನಡೆಸಬೇಕಾಗುತ್ತದೆ ಎಂದು ಗುತ್ತಿಗೆದಾರರು ಎಚ್ಚರಿಕೆ ನೀಡಿದರು.

ಧರಣಿಯಲ್ಲಿ ಜಗನ್ನಾಥ ಶೇಗಜಿ, ಸಂಜಯ್ ಆರ್.ಕೆ., ಸಂಘದ ಉಪಾಧ್ಯಕ್ಷರಾದ ದಶರಥ ಬಿ. ಚೌಗಲೆ, ಚಂದ್ರಶೇಖರ ಆರ್. ಬೆಣ್ಣೂರ, ಬಸವರಾಜ ಜಿ. ಪಾಟೀಲ, ಸಿದ್ರಾಮ ಎಸ್. ಬೆಳಕೋಟಿ, ಪ್ರಧಾನ ಕಾರ್ಯದರ್ಶಿ ಮನೋಜ ಎಸ್. ಜಾಧವ, ಸಹ ಕಾರ್ಯದರ್ಶಿ ಸರಮುದ್ದೀನ್ ಕೆ.ಎಸ್., ಸಂಘಟನಾ ಕಾರ್ಯದರ್ಶಿಗಳಾದ ಹಣಮಂತಪ್ಪ ಎಲ್. ಬಿರಾಳ, ನಾಗರಾಜ ಆಲೂರ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.

Leave A Reply

Your email address will not be published.