ಕಲಬುರಗಿ: ನಿರಂತರ ಪತಿಯ ಕಿರುಕುಳ ತಾಳಲಾರದೆ ಪತ್ನಿಯೇ ಕೊಡಲಿಯಿಂದ ಹೊಡೆದು ಪತಿಯನ್ನು ಕೊಲೆ ಮಾಡಿರುವ ಘಟನೆ ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದಲ್ಲಿ ರವಿವಾರ ತಡರಾತ್ರಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಸೇಡಂ ತಾಲೂಕಿನ ಹೆಡ್ಡಳ್ಳಿ ಗ್ರಾಮದ ನಾಗೇಂದ್ರ ಕಾಶಪ್ಪ ಮುಧೋಳ (32) ಎಂದು ಗುರುತಿಸಲಾಗಿದ್ದು, ಕೊಲೆ ಆರೋಪದಡಿ ಆತನ ಪತ್ನಿ ಸುಧಾರಾಣಿ ನಾಗೇಂದ್ರ ಮುಧೋಳ (27) ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುರಿ ಮೇಯಿಸುವ ಕೆಲಸದ ಹಿನ್ನೆಲೆಯಲ್ಲಿ ನಾಗೇಂದ್ರ ತನ್ನ ಪತ್ನಿಯ ತವರುಮನೆಯಾದ ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದಲ್ಲಿ ಕುಟುಂಬ ಸಮೇತ ವಾಸವಾಗಿದ್ದ. Aatavನಿತ್ಯ ಜಗಳ ಮಾಡುತ್ತಿದ್ದ ಎನ್ನಲಾಗಿದೆ.
ರವಿವಾರ ತಡರಾತ್ರಿ ಪತ್ನಿಯೊಂದಿಗೆ ಜಗಳ ತೆಗೆದಿದ್ದಾನೆ ಎನ್ನಲಾಗಿದೆ. ಈ ವೇಳೆ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಪತ್ನಿ ಸುಧಾರಾಣಿ ಕೊಡಲಿಯಿಂದ ನಾಗೇಂದ್ರನಿಗೆ ಹೊಡೆದು ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದ ಬಳಿಕ ರಾತ್ರಿ ಗಸ್ತು ತಿರುಗುತ್ತಿದ್ದ ರಟಕಲ್ ಠಾಣೆ ಪೊಲೀಸರ ಮುಂದೆ ಸುಧಾರಾಣಿ ಹಾಜರಾಗಿ, ತಾನು ಪತಿಯನ್ನು ಕೊಲೆ ಮಾಡಿರುವುದಾಗಿ ತಿಳಿಸಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೃತದೇಹದ ಮರಣೋತ್ತರ ಪರೀಕ್ಷೆ ಸೋಮವಾರ ಕಾಳಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆಸಲಾಯಿತು.
ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಚಿಂಚೋಳಿ ಡಿವೈಎಸ್‌ಪಿ ಸಂಗಮೇಶ ಹಿರೇಮಠ, ಸುಲೇಪೇಟ ಸಿಪಿಐ ಕೃಷ್ಣಕುಮಾರ ಪಾಟೀಲ ಹಾಗೂ ಪಿಎಸ್‌ಐ ಶೀಲಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಕುರಿತು ರಟಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.