ಕಲಬುರಗಿ: ಯುವಜನರಲ್ಲಿ ಎಚ್‌ಐವಿ/ಏಡ್ಸ್ ಕುರಿತು ವೈಜ್ಞಾನಿಕ ಅರಿವು ಮೂಡಿಸುವುದು ಹಾಗೂ ರೋಗದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ನಿವಾರಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ ಹೇಳಿದರು.
ನಗರದ ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ ಹಾಗೂ ರೆಡ್ ರಿಬ್ಬನ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಏಡ್ಸ್ ಜಾಗೃತಿ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಎಚ್‌ಐವಿ/ಏಡ್ಸ್ ಕುರಿತು ಜಾಗೃತಿ ಮೂಡಿಸುವ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಯುವಜನರಲ್ಲಿ ಆರೋಗ್ಯದ ಕುರಿತು ಜಾಗೃತಿ ಮೂಡಿಸುವುದು ಹಾಗೂ ಎಚ್‌ಐವಿ ಸೋಂಕಿನ ಬಗ್ಗೆ ವೈಜ್ಞಾನಿಕ ಮಾಹಿತಿ ನೀಡುವ ಉದ್ದೇಶದಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಲಾಯಿತು.
ರೀಲ್ಸ್ ಮೇಕಿಂಗ್ ಸ್ಪರ್ಧೆ: ವಿಜೇತರಿಗೆ ಬಹುಮಾನ
ಏಡ್ಸ್ ಜಾಗೃತಿ ಕುರಿತು ಆಯೋಜಿಸಿದ್ದ ರೀಲ್ಸ್ ಮೇಕಿಂಗ್ ಸ್ಪರ್ಧೆಯಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಬಿ.ಡಿ.ಎ. ಎಂಜಿನಿಯರಿಂಗ್ ಕಾಲೇಜಿನ ಸಾಕ್ಷಿ ಲಾತೂರ್‌ಕರ್ ಪ್ರಥಮ ಬಹುಮಾನ ಪಡೆದು ₹3,000 ನಗದು, ಪ್ರಶಸ್ತಿ ಪತ್ರ ಹಾಗೂ ಪದಕ ಸ್ವೀಕರಿಸಿದರು.
ಸಿದ್ಧಾರ್ಥ ಕಾನೂನು ಕಾಲೇಜಿನ ವಿದ್ಯಾರ್ಥಿ ದ್ವಿತೀಯ ಬಹುಮಾನ ಪಡೆದು ₹2,000 ನಗದು, ಪ್ರಶಸ್ತಿ ಪತ್ರ ಹಾಗೂ ಪದಕ ಪಡೆದರು. ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ದೀಪಿಕಾ ತೃತೀಯ ಬಹುಮಾನ ಪಡೆದು ₹1,000 ನಗದು, ಪ್ರಶಸ್ತಿ ಪತ್ರ ಹಾಗೂ ಪದಕ ಸ್ವೀಕರಿಸಿದರು.
ತಪ್ಪು ಕಲ್ಪನೆಗಳನ್ನು ದೂರ ಮಾಡಬೇಕು
ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕದ ಅಧಿಕಾರಿ ಡಾ. ಮಹಮ್ಮದ್ ಗಫರ್ ಮಾತನಾಡಿ, ಎಚ್‌ಐವಿ/ಏಡ್ಸ್ ಹರಡುವಿಕೆ, ಅದರ ಕುರಿತು ಸಮಾಜದಲ್ಲಿರುವ ತಪ್ಪು ಕಲ್ಪನೆಗಳು ಹಾಗೂ ಜಾಗೃತಿ ಮೂಡಿಸುವ ಅಗತ್ಯದ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಏಡ್ಸ್ ಕುರಿತು ಅರಿವು ಮೂಡಿಸುವುದು ಪ್ರಮುಖ ಉದ್ದೇಶವಾಗಿದ್ದು, ಯುವ ಸಮೂಹಕ್ಕೆ ಸರಿಯಾದ ಮಾಹಿತಿ ತಲುಪಿಸುವಲ್ಲಿ ಐಸಿಟಿಸಿ ಕೇಂದ್ರಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕದ ಜಿಲ್ಲಾ ಮೇಲ್ವಿಚಾರಕ ಮಲ್ಲಿಕಾರ್ಜುನ ಬಿರಾದಾರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಎಚ್‌ಐವಿ/ಏಡ್ಸ್ ಹರಡುವ ಪ್ರಮುಖ ಮಾರ್ಗಗಳು ಹಾಗೂ ಸಂಬಂಧಿಸಿದ ಅಂಕಿ-ಅಂಶಗಳ ಕುರಿತು ಮಾಹಿತಿ ನೀಡಿದರು.
ಏಡ್ಸ್ ಕುರಿತು ಇರುವ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ರೋಗದ ಬಗ್ಗೆ ವೈಜ್ಞಾನಿಕ ಅರಿವು ಮೂಡಿಸುವ ಮೂಲಕ ಎಚ್‌ಐವಿ ಸೋಂಕಿನ ಪ್ರಮಾಣವನ್ನು ಕಡಿಮೆ ಮಾಡಲು ಎಲ್ಲರೂ ಶ್ರಮಿಸಬೇಕು. ಎಚ್‌ಐವಿ ಪೀಡಿತರು ಹಾಗೂ ಅವರ ಕುಟುಂಬಗಳಿಗೆ ಸರ್ಕಾರದಿಂದ ದೊರೆಯುವ ವಿವಿಧ ಸೌಲಭ್ಯಗಳ ಬಗ್ಗೆಯೂ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಓಂಪ್ರಕಾಶ್ ಮಾತನಾಡಿ, ಯುವಜನರಲ್ಲಿ ಎಚ್‌ಐವಿ/ಏಡ್ಸ್ ಕುರಿತು ಅರಿವಿನ ಕೊರತೆಯೇ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಯುವಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ, ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಂಡು ದೇಶದ ಪ್ರಗತಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ರೆಡ್ ರಿಬ್ಬನ್ ಕ್ಲಬ್ ಸಂಯೋಜಕಿ ಡಾ. ಅಶ್ವಿನಿ, ಯೂತ್ ರೆಡ್ ಕ್ರಾಸ್ ಸಂಯೋಜಕ ಪವನ್ ಮೋಹನ್ ರಾವ್ ಸೇರಿದಂತೆ ಸಿಬ್ಬಂದಿ, ಎನ್‌ಎಸ್‌ಎಸ್, ರೆಡ್ ರಿಬ್ಬನ್ ಕ್ಲಬ್ ಹಾಗೂ ಯೂತ್ ರೆಡ್ ಕ್ರಾಸ್‌ನ ಸ್ವಯಂಸೇವಕರು ಭಾಗವಹಿಸಿದ್ದರು.
ವಿದ್ಯಾರ್ಥಿನಿ ಬೋಧಿ ಪ್ರಾಪ್ತಿ ಹುಗ್ಗಿ ನಿರೂಪಿಸಿದರು. ಚೈತ್ರಾ ಸುರೇಶ್ ವಂದಿಸಿದರು.