ಕಲಬುರಗಿ: ಸಂಕ್ರಾಮಿಕವಲ್ಲದ ರೋಗಗಳು ಬಹುತೇಕ ಜೀವನಶೈಲಿಗೆ ಸಂಬಂಧಿಸಿದವಾಗಿದ್ದು, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಇವುಗಳನ್ನು ಬಹುಮಟ್ಟಿಗೆ ನಿಯಂತ್ರಿಸಬಹುದು ಎಂದು ಕೆಬಿಎನ್ ವಿಶ್ವವಿದ್ಯಾಲಯದ ಸಮ ಉಪಕುಲಪತಿ ಪ್ರೊ.ಅಶ್ಫಾಕ್ ಅಹ್ಮದ ಹೇಳಿದರು.
ಖಾಜಾ ಬಂದಾನವಾಜ ವಿಶ್ವವಿದ್ಯಾಲಯದ ವೈದ್ಯಕೀಯ ನಿಕಾಯದ ಬಯೋಕೆಮಿಸ್ಟ್ರಿ ಹಾಗೂ ಕಮ್ಯುನಿಟಿ ಮೆಡಿಸಿನ್ ವಿಭಾಗಗಳು ಜಂಟಿಯಾಗಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸಿಎಂಇ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಪ್ರತಿ ವರ್ಷ ಸಂಕ್ರಾಮಿಕವಲ್ಲದ ರೋಗಗಳಿಂದ 4.5ರಿಂದ 5 ಕೋಟಿ ಜನರು ಸಾವನ್ನಪ್ಪುತ್ತಿದ್ದಾರೆ. ವಾಯುಮಾಲಿನ್ಯವೂ ವರ್ಷಕ್ಕೆ 70ರಿಂದ 80 ಲಕ್ಷ ಜನರ ಸಾವಿಗೆ ಕಾರಣವಾಗುತ್ತಿದೆ. ಹೀಗಾಗಿ ಆರೋಗ್ಯಕರ ಆಹಾರ ಪದ್ಧತಿ, ನಿಯಮಿತ ವ್ಯಾಯಾಮ ಸೇರಿದಂತೆ ಉತ್ತಮ ಜೀವನಶೈಲಿಯನ್ನು ರೂಢಿಸಿಕೊಳ್ಳುವುದು ಅಗತ್ಯ ಎಂದರು.
ವಿಶ್ವವಿದ್ಯಾಲಯಗಳು ಜ್ಞಾನದ ಕೇಂದ್ರಗಳಾಗಿದ್ದು, ಸಮಾಜದ ಆರೋಗ್ಯದ ಹಿತದೃಷ್ಟಿಯಿಂದ ಸಂಶೋಧನೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ವಿಶ್ವವಿದ್ಯಾಲಯದ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ಇಂತಹ ಸಿಎಂಇ ಹಾಗೂ ವಿಚಾರ ಸಂಕಿರಣಗಳನ್ನು ಆಯೋಜಿಸುವ ಮೂಲಕ ವೈದ್ಯರು ಮತ್ತು ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ನವೀಕರಿಸಿಕೊಳ್ಳಬೇಕು ಎಂದು ಹೇಳಿದರು.
ಅಕಾಡೆಮಿಕ್ಸ್ ಡೀನ್ ಡಾ. ಜಮಾ ಮೂಸ್ವಿ ಮಾತನಾಡಿ, ಸಂಕ್ರಾಮಿಕವಲ್ಲದ ರೋಗಗಳ ಬಹುಪಾಲು ಪ್ರಕರಣಗಳು ಕಡಿಮೆ ಆದಾಯದ ದೇಶಗಳಲ್ಲಿ ಕಂಡುಬರುತ್ತಿವೆ. ದೈಹಿಕ ವ್ಯಾಯಾಮ, ಆರೋಗ್ಯಕರ ಆಹಾರ ಪದ್ಧತಿ ಹಾಗೂ ಮದ್ಯಪಾನದಿಂದ ದೂರವಿರುವುದು ಇಂತಹ ರೋಗಗಳ ನಿಯಂತ್ರಣಕ್ಕೆ ಪ್ರಮುಖವಾಗಿದೆ ಎಂದರು. ವಿವಿಧ ವಿಭಾಗಗಳು ಒಗ್ಗೂಡಿ ಆಹಾರ, ಪೋಷಣೆ, ಸಮಾಜಶಾಸ್ತ್ರ ಮತ್ತು ಕಮ್ಯುನಿಟಿ ಮೆಡಿಸಿನ್ ಕ್ಷೇತ್ರಗಳಲ್ಲಿ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸುವ ಅಗತ್ಯವಿದೆ ಎಂದು ತಿಳಿಸಿದರು.
ವೈದ್ಯಕೀಯ ಡೀನ್ ಡಾ. ಗುರುಪ್ರಸಾದ್ ಮಾತನಾಡಿ, ಉತ್ತಮ ಆಹಾರ, ಸಮರ್ಪಕ ನಿದ್ರೆ ಹಾಗೂ ಒತ್ತಡರಹಿತ ಜೀವನಶೈಲಿ ಆರೋಗ್ಯಕರ ಬದುಕಿಗೆ ನಾಂದಿ ಎಂದು ಹೇಳಿದರು.
ಕುಲಸಚಿವ ಮಿರ್ ವಿಲಾಯತ್ ಅಲಿ ಮಾತನಾಡಿ, ಸಕ್ಕರೆ ಕಾಯಿಲೆ, ರಕ್ತದೊತ್ತಡ ಹಾಗೂ ಬೊಜ್ಜು ಇಂದಿನ ದಿನಗಳಲ್ಲಿ ಸಾಮಾನ್ಯವಾಗಿದ್ದು, ಇವು ದೇಶದ ಆರೋಗ್ಯ ಕ್ಷೇತ್ರಕ್ಕೆ ಸವಾಲಾಗಿವೆ. ಜಾಗೃತಿ ಮತ್ತು ಪ್ರಾಯೋಗಿಕ ಜ್ಞಾನದಿಂದ ಇವುಗಳನ್ನು ನಿಯಂತ್ರಿಸಲು ಸಾಧ್ಯ. ವಿವಿಧ ವೈದ್ಯಕೀಯ ವಿಭಾಗಗಳು ಪರಸ್ಪರ ಅನುಭವ ಹಂಚಿಕೊಂಡು ಹೊಸ ಚಿಕಿತ್ಸಾ ಹಾಗೂ ತಡೆಗಟ್ಟುವ ವಿಧಾನಗಳನ್ನು ರೂಪಿಸಬೇಕು ಎಂದರು.
ಐಕ್ಯೂಎಸಿ ನಿರ್ದೇಶಕ ಡಾ. ಅಬ್ದುಲ್ ಬಷೀರ್ ಅವರು ಆಯೋಜಕ ವಿಭಾಗಗಳನ್ನು ಅಭಿನಂದಿಸಿ, ಆಡಳಿತ ಮಂಡಳಿಗೆ ಧನ್ಯವಾದ ಸಲ್ಲಿಸಿದರು.
ಸಿಎಂಇ ಅಂಗವಾಗಿ ವೈದ್ಯಕೀಯ ನಿಕಾಯದ ಮೊದಲ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಸುಮಾರು 500 ಮಂದಿ ನೋಂದಣಿ ಮಾಡಿಕೊಂಡಿದ್ದು, ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ಗೋಷ್ಠಿಗಳು ನಡೆದವು.
ಬಯೋಕೆಮಿಸ್ಟ್ರಿ ವಿಭಾಗದ ಮುಖ್ಯಸ್ಥೆ ಡಾ. ಸಬಾ ನಾಝನೀನ್ ಸ್ವಾಗತಿಸಿದರು. ಕಮ್ಯುನಿಟಿ ಮೆಡಿಸಿನ್ ವಿಭಾಗದ ಮುಖ್ಯಸ್ಥೆ ಡಾ. ಶಹನಾಜ ವಂದಿಸಿದರು. ಡಾ. ಮೆಹಜಬೀನ್ ಕಾರ್ಯಕ್ರಮ ನಿರೂಪಿಸಿದರು.
ಕೆಬಿಎನ್ ಆಸ್ಪತ್ರೆಯ ಅಧೀಕ್ಷಕ ಡಾ. ಸಿದ್ಧಲಿಂಗ ಚೆಂಗಟಿ, ವಿದ್ಯಾರ್ಥಿ ಕಲ್ಯಾಣ ಡೀನ್ ಡಾ. ಅನೂಪ್ ದೇಸಾಯಿ, ಡಾ. ಸನಾ ನಿಜಾಮಿ, ಡಾ. ಸಿದ್ದೇಶ ಶೀರ್ವಾರ, ಡಾ. ಸುನಿಲ್ ದೇಶಮುಖ್, ಡಾ. ಬಿಲಾಲ್, ಡಾ. ಫಯೀಮ್, ಡಾ. ತಾಜಾಮುಲ್ಲಾ, ಡಾ. ಖುಸ್ರೋ ಅನ್ಸಾರಿ, ಡಾ. ಅತೀಫ್, ಡಾ. ಆಶಾ, ಡಾ. ಶಿಫಾ, ಡಾ. ಅಸ್ರಾ, ಡಾ. ಪೂರ್ಣಿಮಾ, ಡಾ. ಹಫ್ಸಾ, ಡಾ. ಮಿರ್ಜಾ ಶರೀಫ್ ಬೇಗ್, ಡಾ. ಸಾದಿಯಾ, ಡಾ. ಮಾಜ್, ಡಾ. ಆಯೇಷಾ, ಡಾ. ಆಫ್ಶನ್, ಡಾ. ಸ್ವಾತಿ ಸೇರಿದಂತೆ ವಿಜ್ಞಾನ ನಿಕಾಯದ ಉಪನ್ಯಾಸಕರು ಉಪಸ್ಥಿತರಿದ್ದರು.