Shubhashaya News

ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ಸ್ಥಳ ಶುದ್ಧೀಕರಣ: ಅಸ್ಪೃಶ್ಯತೆ ಆಚರಣೆಗೆ ಡಿಜಿ ಸಾಗರ ಖಂಡನೆ

ಕಲಬುರಗಿ: ಸಂವಿಧಾನ ಜಾರಿಗೆ ಬಂದು 77 ವರ್ಷಗಳು ಕಳೆದರೂ ದೇಶದಲ್ಲಿ ಅಸ್ಪೃಶ್ಯತೆ ಜೀವಂತವಾಗಿರುವುದು ವಿಷಾದನೀಯ. ಜಾತಿಯ ಆಧಾರದಲ್ಲಿ ನಡೆಯುತ್ತಿರುವ ಇಂತಹ ಅಮಾನವೀಯ ಆಚರಣೆಗಳನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಿ.ಜಿ ಸಾಗರ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶತಮಾನಗಳ ಕಾಲ ಅಸ್ಪೃಶ್ಯತೆ ಹಾಗೂ ಜಾತಿ ವ್ಯವಸ್ಥೆಯ ಕಾರಣದಿಂದ ಶೋಷಿತ ಸಮುದಾಯವನ್ನು ಶಿಕ್ಷಣ ಮತ್ತು ಸಾಮಾಜಿಕ ಸಮಾನತೆಯಿಂದ ದೂರವಿಡಲಾಗಿತ್ತು. ಈ ಅನಿಷ್ಠ ಪದ್ಧತಿಗಳ ವಿರುದ್ಧ ಡಾ. ಬಿ.ಆರ್. ಅಂಬೇಡ್ಕರ್ ಅವರು ಹೋರಾಟ ನಡೆಸಿ, ಶೋಷಿತ ಸಮುದಾಯಗಳಿಗೆ ಸಮಾನತೆ, ಸ್ವಾಭಿಮಾನ ಮತ್ತು ಹಕ್ಕುಗಳನ್ನು ದೊರಕಿಸಿಕೊಟ್ಟರು ಎಂದರು.

1927ರಲ್ಲಿ ಮಹಾಡ್ ಚೌದರ್ ಕೆರೆಯ ನೀರನ್ನು ಅಂಬೇಡ್ಕರ್ ಅವರು ಕುಡಿದ ಸಂದರ್ಭದಲ್ಲಿ ಮೇಲ್ಜಾತಿಯವರು ಕೆರೆಯನ್ನು ಶುದ್ಧೀಕರಿಸಿದ ಘಟನೆ ಅಸ್ಪೃಶ್ಯತೆಯ ಅಮಾನವೀಯತೆಯನ್ನು ತೋರಿಸುತ್ತದೆ. ಇಂತಹ ಜಾತಿವಾದಿ ಮನಸ್ಥಿತಿಯನ್ನು ವಿರೋಧಿಸಿದ ಅಂಬೇಡ್ಕರ್ ಅವರು ಮನುಧರ್ಮಶಾಸ್ತ್ರದ ಪ್ರತೀಕಾತ್ಮಕ ದಹನದ ಮೂಲಕ ಸಾಮಾಜಿಕ ಸಮಾನತೆಯ ಹೋರಾಟಕ್ಕೆ ಹೊಸ ದಿಕ್ಕು ನೀಡಿದರು ಎಂದು ಹೇಳಿದರು.
ಇತ್ತೀಚೆಗೆ ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ್ದರು. ಬಳಿಕ ಕೆಲ ಹಿಂದೂಪರ ಸಂಘಟನೆಗಳು ಅವರು ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಿಸಿ ಹೋಮ-ಹವನ ನಡೆಸಿರುವುದು ಜಾತಿ ಆಧಾರಿತ ಅಸ್ಪೃಶ್ಯತೆ ಆಚರಣೆಗೆ ಸಾಕ್ಷಿಯಾಗಿದೆ ಎಂದು ಡಿ.ಜಿ ಸಾಗರ ಆರೋಪಿಸಿದರು.

ಜಾತಿ ವ್ಯವಸ್ಥೆಯಲ್ಲಿ ವಂಚಿತ ಸಮುದಾಯದಿಂದ ಬಂದ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ತ್ಯಾಗ, ಹೋರಾಟ ಮತ್ತು ಪ್ರಾಮಾಣಿಕತೆಯಿಂದ ರಾಷ್ಟ್ರದ ಪ್ರಮುಖ ನಾಯಕರಾಗಿ ಬೆಳೆದಿದ್ದಾರೆ. ಅಂತಹ ನಾಯಕನ ಮನೋಸ್ಥೈರ್ಯ ಕುಗ್ಗಿಸುವ ಉದ್ದೇಶದಿಂದ ನಡೆದಿರುವ ಇಂತಹ ಕೃತ್ಯವನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದರು.

ಇದು ಕೇವಲ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾಡಿದ ಅವಮಾನವಲ್ಲ; ದೇಶದ ಶೋಷಿತ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ. ಇಂತಹ ದೇಶ ಹಾಗೂ ಸಂವಿಧಾನ ವಿರೋಧಿ ಆಚರಣೆಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ಸ್ಥಳ ಶುದ್ಧೀಕರಣ ಮತ್ತು ಹೋಮ-ಹವನ ನಡೆಸಿದವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ, 1989 ಹಾಗೂ ಅಸ್ಪೃಶ್ಯತೆ ಆಚರಣೆ ವಿರೋಧಿ ಕಾನೂನುಗಳಡಿ ಪ್ರಕರಣ ದಾಖಲಿಸಿ, ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಡಿ.ಜಿ ಸಾಗರ ಒತ್ತಾಯಿಸಿದರು.

ಸರ್ಕಾರ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ದೇಶ ಹಾಗೂ ರಾಜ್ಯಾದ್ಯಂತ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಬಿ.ಸಿ. ವಾಲಿ, ಸುರೇಶ್ ಹಾದಿಮನಿ, ಎಸ್.ಪಿ. ಸುಳ್ಳದ, ಉಮೇಶ್ ನರೋಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave A Reply

Your email address will not be published.