Shubhashaya News

ಶರಣಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ಸಂಭ್ರಮಕ್ಕೆ ವೈಭವದ ಚಾಲನೆ

ಸಾವಿರಾರು ಭಕ್ತರಿಂದ ಶರಣಬಸವೇಶ್ವರರ ದರ್ಶನ; ವಿಶೇಷ ಪೂಜೆ, ಅಭಿಷೇಕ, ಭಜನೆ ಹಾಗೂ ದಾಸೋಹ

ಕಲಬುರಗಿ: ಪವಿತ್ರ ಶ್ರಾವಣ ಮಾಸದ ಮೊದಲ ದಿನವೇ ಕಲಬುರಗಿ ನಗರದ ಆರಾಧ್ಯ ದೈವ ಶರಣಬಸವೇಶ್ವರ ದೇವಸ್ಥಾನದಲ್ಲಿ ಭಕ್ತಿಯ ವೈಭವ ಮನೆಮಾಡಿತ್ತು. ಸಾವಿರಾರು ಭಕ್ತರು ಮುಂಜಾನೆಯಿಂದಲೇ ದೇವಸ್ಥಾನಕ್ಕೆ ಆಗಮಿಸಿ ಶರಣಬಸವೇಶ್ವರರ ದರ್ಶನ ಪಡೆದು ವಿಶೇಷ ಪೂಜೆ, ಅಭಿಷೇಕ ಹಾಗೂ ಪ್ರಾರ್ಥನೆ ಸಲ್ಲಿಸಿದರು. ಇದರಿಂದ ದೇವಸ್ಥಾನದ ಆವರಣವು ಇಡೀ ದಿನ ಭಕ್ತಿಸಾಗರವಾಗಿ ಕಂಗೊಳಿಸಿತು.

ಶ್ರಾವಣ ಮಾಸದ ಅಂಗವಾಗಿ ದೇವಸ್ಥಾನವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಬಣ್ಣಬಣ್ಣದ ಹೂವುಗಳು, ತಳಿರು-ತೋರಣಗಳು ಹಾಗೂ ವಿದ್ಯುತ್ ದೀಪಾಲಂಕಾರಗಳಿಂದ ದೇವಸ್ಥಾನದ ಆವರಣ ಕಂಗೊಳಿಸುತ್ತಿತ್ತು. “ಶರಣಬಸವೇಶ್ವರ ಮಹಾರಾಜ್ ಕಿ ಜೈ” ಎಂಬ ಘೋಷಣೆಗಳು ಮುಗಿಲು ಮುಟ್ಟುತ್ತಿದ್ದರೆ, ಭಜನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಇಡೀ ಪರಿಸರದಲ್ಲಿ ಆಧ್ಯಾತ್ಮಿಕ ವಾತಾವರಣವನ್ನು ನಿರ್ಮಿಸಿದ್ದವು.

ಶರಣಬಸವೇಶ್ವರ ಸಂಸ್ಥಾನದ 9ನೇ ಮಹಾದಾಸೋಹ ಪೀಠಾಧಿಪತಿಗಳಾದ ಪೂಜ್ಯ ದೊಡ್ಡಪ್ಪ ಅಪ್ಪಾಜಿಯವರು ಶ್ರಾವಣ ಮಾಸದ ಆರಂಭದ ಅಂಗವಾಗಿ ಸಾಂಪ್ರದಾಯಿಕ ಪಾದಪೂಜೆ, ತ್ರಿಕಾಲ ಪೂಜೆ ಹಾಗೂ ವಿವಿಧ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಶರಣಬಸವೇಶ್ವರರ ವಿಗ್ರಹವನ್ನು ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಲಾಗಿದ್ದು, ಭಕ್ತರ ಗಮನ ಸೆಳೆಯಿತು.

ಶರಣಬಸವ ವಿವಿಯ ಕುಲಾಧಿಪತಿ ಹಾಗೂ ಶರಣ ಸಂಸ್ಥಾನದ ಮಾತೋಶ್ರೀ ಪೂಜ್ಯ ಡಾ. ದಾಕ್ಷಾಯಿಣಿ ಅವ್ವಾಜಿಯವರು ನೂರಾರು ಭಕ್ತರಿಗೆ ದಾಸೋಹಗೈದರು. ಸಂಸ್ಥಾನದ 9ನೇ ಪೀಠಾಧಿಪತಿಗಳಾದ ಪೂಜ್ಯ ದೊಡ್ಡಪ್ಪ ಅಪ್ಪಾಜಿಯವರು ಸಹ ಅವ್ವಾಜಿಯವರೊಂದಿಗೆ ದಾಸೋಹ ಸೇವೆಯಲ್ಲಿ ಪಾಲ್ಗೊಂಡರು.

ಶ್ರಾವಣ ಮಾಸದ ಮೊದಲ ದಿನವೇ ದೇವಸ್ಥಾನದಲ್ಲಿ ಕಂಡುಬಂದ ಭಕ್ತರ ಅಪಾರ ಉತ್ಸಾಹ, ಸಂಭ್ರಮ ಹಾಗೂ ಆಧ್ಯಾತ್ಮಿಕ ವಾತಾವರಣವು ಮುಂದಿನ 40 ದಿನಗಳ ಶ್ರಾವಣ ಮಾಸದ ಧಾರ್ಮಿಕ ಕಾರ್ಯಕ್ರಮಗಳಿಗೆ ಅದ್ದೂರಿ ಮುನ್ನುಡಿಯಾಯಿತು. ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶವೂ ಭಕ್ತರಿಂದ ತುಂಬಿ ತುಳುಕುತ್ತಿದ್ದ ದೃಶ್ಯ ಗಮನ ಸೆಳೆಯಿತು.

Leave A Reply

Your email address will not be published.