ಜೇವರ್ಗಿ: ಈಗಾಗಲೇ ಚಾಲ್ತಿಯಲ್ಲಿರುವ ವೈದ್ಯಕೀಯ ತುರ್ತು ಚಿಕಿತ್ಸೆಯ ಆಧಾರದ ಮೇಲೆ ಹೊಸ ಆದ್ಯತಾ ಪಡಿತರ ಚೀಟಿ (ಪಿಎಚ್‌ಹೆಚ್) ಹಾಗೂ ಜಿಎಸ್‌ಸಿ ಪಡೆಯಲು ಯಾವುದೇ ಆನ್‌ಲೈನ್ ಕೇಂದ್ರಗಳು ಅಥವಾ ಮಧ್ಯವರ್ತಿಗಳಿಗೆ ಹಣ ನೀಡಬಾರದು ಎಂದು ಆಹಾರ ಇಲಾಖೆಯು ಅರ್ಜಿದಾರರಿಗೆ ಎಚ್ಚರಿಕೆ ನೀಡಿದೆ.
ಈ ಕುರಿತು ಸಾರ್ವಜನಿಕರಿಗೆ ಪತ್ರಿಕಾ ಪ್ರಕಟಣೆ ನೀಡಿರುವ ಇಲಾಖೆ, ಜೇವರ್ಗಿ ಮತ್ತು ಯಡ್ರಾಮಿ ತಾಲೂಕುಗಳ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕೆಲವು ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳು ಹಾಗೂ ಇತರೆ ಆನ್‌ಲೈನ್ ಕೇಂದ್ರಗಳೊಂದಿಗೆ ಕೈಜೋಡಿಸಿರುವ ಮಧ್ಯವರ್ತಿಗಳು, ಹೊಸ ಪಡಿತರ ಚೀಟಿ ಮಾಡಿಸಿಕೊಡುವುದಾಗಿ ಹಾಗೂ ಪಡಿತರ ಚೀಟಿಯಲ್ಲಿ ತಿದ್ದುಪಡಿ ಮಾಡಿಕೊಡುವುದಾಗಿ ಹೇಳಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ.
ಆದ್ದರಿಂದ ಸಾರ್ವಜನಿಕರು ಇಂತಹ ದಂಧೆಕೋರರ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಯಾವುದೇ ಕಾರಣಕ್ಕೂ ಅವರಿಗೆ ಹಣ ನೀಡಬಾರದು. ಪಡಿತರ ಚೀಟಿ ಹಾಗೂ ತಿದ್ದುಪಡಿಗೆ ಸಂಬಂಧಿಸಿದಂತೆ ಅರ್ಜಿದಾರರು ನೇರವಾಗಿ ಆಹಾರ ಇಲಾಖೆಯ ಶಿರಸ್ತೇದಾರರು, ಆಹಾರ ನಿರೀಕ್ಷಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಅಗತ್ಯ ಮಾಹಿತಿ ಪಡೆದುಕೊಳ್ಳಬೇಕು. ಅಕ್ರಮವಾಗಿ ಹಣ ವಸೂಲಿ ಮಾಡುವವರ ವಿರುದ್ಧ ಇಲಾಖೆಗೆ ದೂರು ನೀಡಬಹುದು ಎಂದು ತಿಳಿಸಿದೆ.
ಕಳೆದ 6ರಿಂದ 12 ತಿಂಗಳಿನಿಂದ ಪಡಿತರ ಪಡೆಯದ ಪಡಿತರ ಚೀಟಿಗಳನ್ನು ಗುರುತಿಸಿಕೊಂಡು, ಮೃತ ವ್ಯಕ್ತಿಗಳ ಹೆಸರಿನಲ್ಲಿ ಅಥವಾ ಏಕ ಸದಸ್ಯರ ಹೆಸರಿನಲ್ಲಿ ಇರುವ ಪಡಿತರ ಚೀಟಿಗಳಿಗೆ ಬೇರೆಯವರ ಹೆಸರುಗಳನ್ನು ಅಕ್ರಮವಾಗಿ ಸೇರ್ಪಡೆ ಮಾಡಿ ಹೊಸ ಪಡಿತರ ಚೀಟಿ ಮಾಡಿಸಿಕೊಡಲಾಗುತ್ತಿದೆ ಎಂಬುದು ಇಲಾಖೆಯ ಗಮನಕ್ಕೆ ಬಂದಿದೆ. ಅಂತಹ ಪಡಿತರ ಚೀಟಿಗಳನ್ನು ಸಂಬಂಧಪಟ್ಟವರು ಕೂಡಲೇ ಇಲಾಖೆಗೆ ಮರಳಿಸಬೇಕು. ಇಲ್ಲವಾದಲ್ಲಿ ಅಂತಹ ಪಡಿತರ ಚೀಟಿಗಳನ್ನು ಪಡೆದವರು ಹಾಗೂ ಮಾಡಿಸಿಕೊಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಇಲಾಖೆ ಎಚ್ಚರಿಸಿದೆ.
ಗ್ರಾಮ ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳ ಲಾಗಿನ್‌ಗಳನ್ನು ನಕಲು ಮಾಡಿಕೊಂಡು ಇಂತಹ ಅಕ್ರಮಗಳನ್ನು ನಡೆಸುತ್ತಿರುವುದು ಸಹ ಇಲಾಖೆಯ ಗಮನಕ್ಕೆ ಬಂದಿದೆ. ಲಾಗಿನ್‌ಗಳನ್ನು ನಕಲು ಮಾಡಲು ಸಹಕರಿಸುತ್ತಿರುವ ಗ್ರಾಮ ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. ಸಂಬಂಧಪಟ್ಟ ಕೇಂದ್ರಗಳ ಐಡಿ ಮತ್ತು ಪಾಸ್‌ವರ್ಡ್‌ಗಳನ್ನು ನಿಷ್ಕ್ರಿಯಗೊಳಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ.
ಆದ್ಯತಾ ಪಡಿತರ ಚೀಟಿ ಪಡೆಯಲು ಹಾಗೂ ಪಡಿತರ ಚೀಟಿಯಲ್ಲಿ ತಿದ್ದುಪಡಿ ಮಾಡಿಸಲು ಯಾವುದೇ ಶುಲ್ಕವಿರುವುದಿಲ್ಲ. ಆದ್ದರಿಂದ ಅರ್ಜಿದಾರರು ಮಧ್ಯವರ್ತಿಗಳನ್ನು ಆಶ್ರಯಿಸದೆ ನೇರವಾಗಿ ಆಹಾರ ಇಲಾಖೆಯ ಕಚೇರಿಯನ್ನು ಸಂಪರ್ಕಿಸಿ, ಅಗತ್ಯ ದಾಖಲೆಗಳನ್ನು ಸಲ್ಲಿಸಿ ಉಚಿತವಾಗಿ ಸೇವೆ ಪಡೆಯಬೇಕು ಎಂದು ಆಹಾರ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.