Shubhashaya News

ಕೆಬಿಎನ್ ಆಸ್ಪತ್ರೆಯಲ್ಲಿ ಸಿಎಂಇ ಕಾರ್ಯಾಗಾರ

ಕಲಬುರಗಿ: ನಗರದ ಖ್ಯಾತ ಕೆಬಿಎನ್ ಟೀಚಿಂಗ್ ಮತ್ತು ಜನರಲ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗವು ಕೆಎಸ್‌ಒಜಿಎ ಹಾಗೂ ಕಿಮ್ಸ್ ಕಡ್ಡಲ್ಸ್ ಸಹಯೋಗದಲ್ಲಿ ರವಿವಾರ “Recent Updates in Obstetrics and Gynecological Surgeries” ವಿಷಯದ ಕುರಿತು ನಿರಂತರ ವೈದ್ಯಕೀಯ ಶಿಕ್ಷಣ (CME) ಹಾಗೂ ಕಾರ್ಯಾಗಾರವನ್ನು ಆಯೋಜಿಸಿತು.

ಕಾರ್ಯಾಗಾರದಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ಚಿಕಿತ್ಸೆಯಲ್ಲಿನ ಇತ್ತೀಚಿನ ಬೆಳವಣಿಗೆಗಳು, ಶಸ್ತ್ರಚಿಕಿತ್ಸೆಯ ಆಧುನಿಕ ವಿಧಾನಗಳು ಹಾಗೂ ವೈದ್ಯಕೀಯ ಕೌಶಲ್ಯ ವೃದ್ಧಿಗೆ ಸಂಬಂಧಿಸಿದಂತೆ ವಿವಿಧ ತಜ್ಞರು ಉಪನ್ಯಾಸ ನೀಡಿದರು. ತೆಲಂಗಾಣದ ಕಿಮ್ಸ್ ಕಡ್ಡಲ್ಸ್‌ನ ಮುಖ್ಯ ಆಡಳಿತಾಧಿಕಾರಿ ಡಾ. ಬಾಬು ಮಾದರಕರ, ಮುಖ್ಯಸ್ಥೆ ಡಾ. ತ್ರಿಪುರ ಸುಂದರಿ ಹಾಗೂ ಡಾ. ಮಹಾನಂದ ಅವರು ವಿವಿಧ ವಿಷಯಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೆಡಿಕಲ್ ಡೀನ್ ಡಾ. ಗುರುಪ್ರಸಾದ್, ವೈದ್ಯಕೀಯ ಕ್ಷೇತ್ರದಲ್ಲಿ ಇಂತಹ ಸಿಎಂಇ ಕಾರ್ಯಕ್ರಮಗಳು ಅತ್ಯಂತ ಅಗತ್ಯವಾಗಿದ್ದು, ಹೊಸ ಜ್ಞಾನ ಮತ್ತು ತಾಂತ್ರಿಕ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಲು ಸಹಕಾರಿಯಾಗುತ್ತವೆ ಎಂದು ಹೇಳಿದರು.

ಮೆಡಿಕಲ್ ಅಧೀಕ್ಷಕ ಡಾ. ಸಿದ್ಧಲಿಂಗ ಚೆಂಗಟಿ ಮಾತನಾಡಿ, ಸಿಎಂಇಗಳು ಕೇವಲ ಔಪಚಾರಿಕ ಕಾರ್ಯಕ್ರಮಗಳಲ್ಲ; ಅವು ಜ್ಞಾನದ ಭಂಡಾರಗಳಾಗಿವೆ. ಮಹಿಳಾ ಆರೋಗ್ಯದಂತಹ ಮಹತ್ವದ ವಿಷಯದ ಕುರಿತು ಕಾರ್ಯಕ್ರಮ ಆಯೋಜಿಸಿದ ಪ್ರಸೂತಿ ವಿಭಾಗವನ್ನು ಅಭಿನಂದಿಸಿದರು.

ಕಿಮ್ಸ್ ಕಡ್ಡಲ್ಸ್‌ನ ಡಾ. ತ್ರಿಪುರ ಸುಂದರಿ ಅವರು ಕೆಬಿಎನ್ ಆಸ್ಪತ್ರೆಯಲ್ಲಿ ಲಭ್ಯವಿರುವ ವೈದ್ಯಕೀಯ ಸೌಲಭ್ಯಗಳನ್ನು ಶ್ಲಾಘಿಸಿ, ಅನುಭವಗಳ ವಿನಿಮಯದ ಮೂಲಕ ಹೊಸ ವೈದ್ಯಕೀಯ ವಿಷಯಗಳನ್ನು ಪರಿಣಾಮಕಾರಿಯಾಗಿ ಕಲಿಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಐಕ್ಯೂಎಸಿ ನಿರ್ದೇಶಕ ಡಾ. ಅಬ್ದುಲ್ ಬಶೀರ್ ಮಾತನಾಡಿ, ಸಿಎಂಇ ಕಾರ್ಯಕ್ರಮಗಳ ಆಯೋಜನೆಗೆ ಕೆಬಿಎನ್ ಆಡಳಿತ ಸದಾ ಪ್ರೋತ್ಸಾಹ ನೀಡುತ್ತಿದ್ದು, ಪ್ರತಿಯೊಂದು ವಿಭಾಗವೂ ಇಂತಹ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಾಗಾರದ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ವೈದ್ಯಕೀಯ ಕೌಶಲ್ಯಗಳ ಕುರಿತು ಹ್ಯಾಂಡ್ಸ್-ಆನ್ ತರಬೇತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಸುಮಾರು 150ಕ್ಕೂ ಹೆಚ್ಚು ಅಭ್ಯರ್ಥಿಗಳು ನೋಂದಾಯಿಸಿಕೊಂಡು ಭಾಗವಹಿಸಿದ್ದರು.

ಡಾ. ಶಾನನಾಥ್ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಡಾ. ಧೃತಿ ಪ್ರಾರ್ಥನೆ ನೆರವೇರಿಸಿದರು. ವಿಭಾಗದ ಮುಖ್ಯಸ್ಥೆ ಡಾ. ಮಹವೀಶ ಅಂಜುಮ್ ಸ್ವಾಗತಿಸಿದರು. ಡಾ. ಮಿಜ್ಬಾ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಡಾ. ರಾಧಿಕಾ, ಡಾ. ಲಕ್ಷ್ಮೀ, ಡಾ. ಸುಜಾತಾ ಧಡೆದ್, ಡಾ. ಶೈಲಜಾ, ಡಾ. ನಿವೇದಿತಾ, ಡಾ. ಶಾಂತಾ, ಡಾ. ಫಾತಿಮಾ, ಡಾ. ಜೋಹರ, ಡಾ. ಫಹೇನಾ, ಡಾ. ಫಾರ್ಹತ್, ಡಾ. ಪ್ರಿಯಾಂಕಾ, ಡಾ. ರೇಷ್ಮಾ, ಡಾ. ಆಯಿಷಾ, ಡಾ. ಶ್ರಾವಣಿಕಾ, ಡಾ. ಹುಮೇರಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave A Reply

Your email address will not be published.