Shubhashaya News

ಆಳಂದದ ಶ್ರೀ ಮಹಾಂತೇಶ್ವರ ಸಂಸ್ಥಾನ ಹಿರೇಮಠದಲ್ಲಿ ಗುರುಪೂರ್ಣಿಮೆ “ಗುರುವಿನ ಕೃಪೆಯೇ ಜೀವನದ ನಿಜವಾದ ದಿವ್ಯಶಕ್ತಿ” – ಶ್ರೀ ಮಹಾಂತಲಿAಗ ಶಿವಾಚಾರ್ಯರು

ಆಳಂದ: ಪಟ್ಟಣದ ಶ್ರೀಮಹಾಂತೇಶ್ವರ ಸಂಸ್ಥಾನ ಹಿರೇಮಠದ ಭಕ್ತಾದಿಗಳು ಹಮ್ಮಿಕೊಂಡು ಗುರುವಂದನೆ ಸ್ವೀಕರಿಸಿದ ಹಿರಿಯ ಗುರುಗಳಾದ ಶ್ರೀಮಹಾಂತಲಿAಗ ಶಿವಾಚಾರ್ಯರು ಆಶೀರ್ವಚನ ನೀಡಿದರು.

ಆಳಂದ: ಭಾರತೀಯ ಸಂಸ್ಕೃತಿಯ ಜೀವನಾಡಿಯಾಗಿರುವ ಗುರು-ಶಿಷ್ಯ ಪರಂಪರೆಯು ಕೇವಲ ಧಾರ್ಮಿಕ ಆಚರಣೆಯಲ್ಲ, ಅದು ಜ್ಞಾನ, ಸಂಸ್ಕಾರ ಮತ್ತು ಆತ್ಮೋನ್ನತಿಯ ಶಾಶ್ವತ ಮಾರ್ಗವಾಗಿದೆ. ಗುರು ಎಂದರೆ ವ್ಯಕ್ತಿಯಲ್ಲ, ಅಜ್ಞಾನದ ಅಂಧಕಾರವನ್ನು ದೂರ ಮಾಡಿ ಜ್ಞಾನದ ಬೆಳಕಿನತ್ತ ಮುನ್ನಡೆಸುವ ದೈವಸ್ವರೂಪ. ಸದ್ಗುರುವಿನ ಆಶೀರ್ವಾದ, ಮಾರ್ಗದರ್ಶನ ಮತ್ತು ಕೃಪೆಯೇ ಮನುಷ್ಯನ ಬದುಕಿಗೆ ನಿಜವಾದ ಶಕ್ತಿ, ದಿಕ್ಕು ಹಾಗೂ ದಿವ್ಯತೆಯನ್ನು ನೀಡುತ್ತದೆ ಎಂದು ಶ್ರೀ ಮಹಾಂತೇಶ್ವರ ಸಂಸ್ಥಾನ ಹಿರೇಮಠದ ಪೀಠಾಧಿಪತಿ, ಹಿರಿಯ ಗುರುಗಳಾದ ಶ್ರೀ ಮಹಾಂತಲಿAಗ ಶಿವಾಚಾರ್ಯರು ಹೇಳಿದರು.
ಪಟ್ಟಣದ ಶ್ರೀ ಮಹಾಂತೇಶ್ವರ ಸಂಸ್ಥಾನ ಹಿರೇಮಠದಲ್ಲಿ ಭಕ್ತವೃಂದದ ಆಶ್ರಯದಲ್ಲಿ ಅತ್ಯಂತ ಶ್ರದ್ಧಾ-ಭಕ್ತಿಯಿಂದ ನಡೆದ ಗುರುಪೂರ್ಣಿಮೆ ಮಹೋತ್ಸವದಲ್ಲಿ ಗುರುವಂದನೆ ಸ್ವೀಕರಿಸಿ ಆಶೀರ್ವಚನ ನೀಡಿದ ಅವರು, ಗುರುಪೂರ್ಣಿಮೆ ಭಾರತೀಯ ಆಧ್ಯಾತ್ಮಿಕ ಪರಂಪರೆಯ ಶ್ರೇಷ್ಠ ಸಂಕೇತವಾಗಿದ್ದು, ಗುರುವಿನ ಕೃಪೆಯಿಲ್ಲದೆ ಜ್ಞಾನ, ಆತ್ಮಶಾಂತಿ ಹಾಗೂ ಜೀವನದ ಪರಿಪೂರ್ಣತೆ ದೊರೆಯುವುದು ಅಸಾಧ್ಯ ಎಂದು ತಿಳಿಸಿದರು.
ಸದ್ಗುರುವಿನ ಪಾದಸೇವೆ ಎಂದರೆ ಕೇವಲ ಆಚರಣೆ ಅಥವಾ ಪೂಜೆಯಲ್ಲ. ಅದು ಬದುಕಿನಲ್ಲಿ ಸತ್ಯ, ಧರ್ಮ, ಸೇವೆ ಹಾಗೂ ಸದಾಚಾರದ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಸಂಕಲ್ಪವಾಗಿದೆ. ತನು, ಮನ ಮತ್ತು ಧನದಿಂದ ಗುರುಸೇವೆಯಲ್ಲಿ ತೊಡಗುವವರು ನಿಜವಾದ ಭಾಗ್ಯಶಾಲಿಗಳಾಗಿದ್ದು, ಅಂತಹ ಭಕ್ತರ ಜೀವನದಲ್ಲಿ ದೈವಾನುಗ್ರಹ ಸದಾ ನೆಲೆಸಿರುತ್ತದೆ. ಗುರು ತೋರಿದ ಆದರ್ಶದ ಮಾರ್ಗದಲ್ಲಿ ನಡೆದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ಅವರು ಹೇಳಿದರು.
ಆಳಂದ, ನಂದವಾಡಗಿ ಹಾಗೂ ವಿಜಯಪುರ ಜಿಲ್ಲೆಯ ಜಾಲವಾದಿಯಲ್ಲಿರುವ ಶ್ರೀಮಠದ ವಿವಿಧ ಶಾಖೆಗಳ ಭಕ್ತರು ಹಲವು ವರ್ಷಗಳಿಂದ ಗುರುಪರಂಪರೆಯ ಮೇಲಿನ ಅಚಲ ನಿಷ್ಠೆ ಮತ್ತು ಭಕ್ತಿಯನ್ನು ಉಳಿಸಿಕೊಂಡು ಬರುತ್ತಿದ್ದಾರೆ. ಗುರುವಿನ ಆಶೀರ್ವಾದವೇ ತಮ್ಮ ಕುಟುಂಬದ ಸುಖ-ಶಾಂತಿ, ಸಮಾಜದ ಪ್ರಗತಿ ಹಾಗೂ ಜೀವನದ ಯಶಸ್ಸಿಗೆ ಮೂಲಾಧಾರ ಎಂಬ ನಂಬಿಕೆಯಿAದ ಭಕ್ತರು ಸೇವೆಯಲ್ಲಿ ನಿರಂತರವಾಗಿ ತೊಡಗಿರುವುದು ಶ್ಲಾಘನೀಯ ಸಂಗತಿಯಾಗಿದೆ ಎಂದು ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಭಾರತೀಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ಮಹತ್ವವನ್ನು ಜಗತ್ತಿಗೆ ಪರಿಚಯಿಸುವ ಪವಿತ್ರ ಆಚರಣೆಯಾಗಿ ಗುರುಪೂರ್ಣಿಮೆ ದೇಶದಾದ್ಯಂತ ಆಚರಿಸಲಾಗುತ್ತಿದೆ. ಆದಿಗುರುಗಳ ಸ್ಮರಣೆ ಮತ್ತು ಸದ್ಗುರುಗಳ ಆಶೀರ್ವಾದಕ್ಕೆ ಆಧ್ಯಾತ್ಮಿಕ ಜೀವನದಲ್ಲಿ ಅಪಾರ ಮಹತ್ವವಿದ್ದು, ಪ್ರತಿಯೊಬ್ಬರೂ ಗುರುಪರಂಪರೆಯ ಆದರ್ಶಗಳನ್ನು ತಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಇದಕ್ಕೂ ಮುನ್ನ ವಿಜಯಪುರ ಜಿಲ್ಲೆಯ ಜಾಲವಾದಿ ಶ್ರೀಮಠದಲ್ಲಿ ಗುರುಪೂರ್ಣಿಮೆ ಅಂಗವಾಗಿ ನಡೆದ ಗುರುವಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಆಳಂದದ ಶ್ರೀ ಮಹಾಂತೇಶ್ವರ ಸಂಸ್ಥಾನ ಹಿರೇಮಠದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಿದವು. ವಿವಿಧ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಭಕ್ತರು ಶ್ರೀಗಳ ಪಾದಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.
ಭಕ್ತರು ಸಾಮೂಹಿಕ ಹಾಗೂ ವೈಯಕ್ತಿಕವಾಗಿ ಶ್ರೀಗಳಿಗೆ ಶಾಲು ಹೊದಿಸಿ, ಪುಷ್ಪಹಾರ ಅರ್ಪಿಸಿ, ಫಲ-ಫಲಾದಿ ಹಾಗೂ ಕಾಣಿಕೆಗಳನ್ನು ಸಮರ್ಪಿಸಿ ಆಶೀರ್ವಾದ ಪಡೆದರು. ತಮ್ಮ ಕುಟುಂಬದ ಸುಖ-ಶಾಂತಿ, ಆರೋಗ್ಯ, ಐಶ್ವರ್ಯ ಹಾಗೂ ಸಮೃದ್ಧಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಗುರುಪೂರ್ಣಿಮೆ ಮಹೋತ್ಸವದ ಅಂಗವಾಗಿ ಶ್ರೀಮಠದ ಆವರಣ ಭಕ್ತಿಯ ಸಾಗರವಾಗಿ ಮಾರ್ಪಟ್ಟಿತ್ತು. ಶಿವನಾಮ ಸ್ಮರಣೆ, ಭಜನೆ, ಜಯಘೋಷ ಹಾಗೂ ಧಾರ್ಮಿಕ ವಿಧಿವಿಧಾನಗಳ ನಡುವೆ ನಡೆದ ಗುರುವಂದನೆ ಕಾರ್ಯಕ್ರಮ ಭಕ್ತರಲ್ಲಿ ಆಧ್ಯಾತ್ಮಿಕ ಉತ್ಸಾಹ ಮೂಡಿಸಿತು. ಕಾರ್ಯಕ್ರಮದ ಅಂತ್ಯದಲ್ಲಿ ಎಲ್ಲ ಭಕ್ತರಿಗೆ ಮಹಾಪ್ರಸಾದ ವಿತರಿಸಲಾಯಿತು.

Leave A Reply

Your email address will not be published.