Shubhashaya News

ಮೊದಲ ಬಾರಿಗೆ ಸಚಿವ ಸ್ಥಾನ: ಹೈಕಮಾಂಡ್‌, ರಾಜ್ಯ ನಾಯಕರಿಗೆ ಡಾ. ಅಜಯ್‌ ಸಿಂಗ್‌ ಕೃತಜ್ಞತೆ ಹೇಳಿದ ಡಾ.ಅಜಯಸಿಂಗ್

ಕಲಬುರಗಿ: ರಾಜ್ಯ ಸಚಿವ ಸಂಪುಟದಲ್ಲಿ ಮೊದಲ ಬಾರಿಗೆ ಸಚಿವ ಸ್ಥಾನ ಪಡೆದಿರುವ ಜೇವರ್ಗಿ ಶಾಸಕ ಡಾ. ಅಜಯ್‌ ಧರ್ಮಸಿಂಗ್‌ ಅವರು ಕಾಂಗ್ರೆಸ್‌ ಹೈಕಮಾಂಡ್‌, ರಾಜ್ಯ ನಾಯಕರು ಹಾಗೂ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಈ ಕುರಿತು ಸೋಮವಾರ ಪ್ರಕಟಣೆ ನೀಡಿರುವ ಅವರು, ತಮ್ಮ ಮೇಲೆ ವಿಶ್ವಾಸವಿಟ್ಟು ಸಚಿವ ಸ್ಥಾನ ನೀಡಿದ ಕಾಂಗ್ರೆಸ್‌ ರಾಷ್ಟ್ರೀಯ ನಾಯಕಿ ಸೋನಿಯಾ ಗಾಂಧಿ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲಾ, ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಎಲ್ಲ ಹಿರಿಯ ನಾಯಕರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಜೇವರ್ಗಿ ಮತಕ್ಷೇತ್ರದ ಜನತೆ, ಯಡ್ರಾಮಿ ಭಾಗದ ಜನರು ಹಾಗೂ ಕಲಬುರಗಿ ಜಿಲ್ಲೆಯ ಕಾಂಗ್ರೆಸ್‌ ಕಾರ್ಯಕರ್ತರು ತಮ್ಮ ಮೇಲೆ ಇಟ್ಟಿರುವ ನಂಬಿಕೆಗೆ ಸದಾ ಚಿರಋಣಿಯಾಗಿರುವುದಾಗಿ ಅವರು ತಿಳಿಸಿದ್ದಾರೆ.

ತಮ್ಮ ರಾಜಕೀಯ ಪಯಣದಲ್ಲಿ ಸದಾ ಮಾರ್ಗದರ್ಶನ ನೀಡಿದ ತಂದೆ ದಿವಂಗತ ಧರ್ಮಸಿಂಗ್‌, ತಾಯಿ ಪ್ರಭಾತಿ ಧರ್ಮಸಿಂಗ್‌, ಕುಟುಂಬದ ಸದಸ್ಯರು, ಬೆಂಬಲಿಗರು ಹಾಗೂ ಹಿತೈಷಿಗಳಿಗೂ ಡಾ. ಅಜಯ್‌ ಸಿಂಗ್‌ ಕೃತಜ್ಞತೆ ಸಲ್ಲಿಸಿದ್ದಾರೆ.
ಪಕ್ಷವು ನೀಡಿರುವ ಜವಾಬ್ದಾರಿ ಅತ್ಯಂತ ಮಹತ್ವದ್ದಾಗಿದ್ದು, ಜನರ ನಿರೀಕ್ಷೆಗೆ ತಕ್ಕಂತೆ ಪ್ರಾಮಾಣಿಕವಾಗಿ ಹಾಗೂ ಸಮರ್ಥವಾಗಿ ಕರ್ತವ್ಯ ನಿರ್ವಹಿಸಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸುವುದಾಗಿ ಅವರು ಹೇಳಿದ್ದಾರೆ.

Leave A Reply

Your email address will not be published.