ಕಲಬುರಗಿ: ಇಂಜಿನಿಯರಿಂಗ್ ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿ, ಸಂಶೋಧನೆ ಹಾಗೂ ನವೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಶರಣಬಸವ ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ಬ್ಯಾಂಕ್‌ನ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಯೋಜನೆಯಡಿ 12.98 ಲಕ್ಷ ಅನುದಾನದ ನೆರವಿನಿಂದ ಅತ್ಯಾಧುನಿಕ ಡ್ರೋನ್ ಪ್ರಯೋಗಾಲಯವನ್ನು ಶೀಘ್ರದಲ್ಲೇ ಸ್ಥಾಪಿಸಲಾಗುತ್ತಿದೆ.
ಶ್ರೀ ಶರಣಬಸವೇಶ್ವರ ಸಂಸ್ಥಾನದ ದಾಸೋಹ ಮಹಾಮನೆಯಲ್ಲಿ ನಡೆದ ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾಂಕ್‌ನ ಸಹಾಯಕ ಮಹಾಪ್ರಬಂಧಕ ಮಲ್ಲನಗೌಡ ಬಿರಾದಾರ ಅವರು 12.98 ಲಕ್ಷ ಮೊತ್ತದ ಚೆಕ್ ಅನ್ನು ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ದಾಕ್ಷಾಯಿಣಿ ಅವ್ವಾಜಿ ಹಾಗೂ ಶರಣಬಸವೇಶ್ವರ ಸಂಸ್ಥಾನದ 9ನೇ ಮಹಾದಾಸೋಹ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪಾಜಿ ಅವರಿಗೆ ಅಧಿಕೃತವಾಗಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಅನಿಲಕುಮಾರ ಬಿಡವೆ, ಕುಲಸಚಿವೆ ಡಾ. ಲಕ್ಷ್ಮೀ ಪಾಟೀಲ ಮಾಕಾ, ಕರ್ನಾಟಕ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ಶಶಿಕಿರಣ, ಕ್ಲಸ್ಟರ್ ಮುಖ್ಯಸ್ಥ ಹಾಗೂ ಮುಖ್ಯ ವ್ಯವಸ್ಥಾಪಕ ಕಾಲೋ ಕುಲಕರ್ಣಿ, ಆರ್‌ಎಲ್‌ಪಿಎಸ್‌ಸಿ ಮುಖ್ಯ ವ್ಯವಸ್ಥಾಪಕ ಜಿ. ಸೋಮಶೇಖರ್, ಶಾಖಾ ವ್ಯವಸ್ಥಾಪಕ ಆರ್.ಡಿ. ಗುರುರಾಜ ಸೇರಿದಂತೆ ವಿಶ್ವವಿದ್ಯಾಲಯ ಮತ್ತು ಬ್ಯಾಂಕ್‌ನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸಂಪೂರ್ಣ ಸಜ್ಜಿತ ಡ್ರೋನ್ ಪ್ರಯೋಗಾಲಯದ ಸ್ಥಾಪನೆಗೆ ಸಿಎಸ್‌ಆರ್ ಅನುದಾನಕ್ಕಿಂತ ಹೆಚ್ಚಿನ ವೆಚ್ಚವಾಗಲಿರುವುದರಿಂದ, ಉಳಿದ ಮೊತ್ತವನ್ನು ಶರಣಬಸವ ವಿಶ್ವವಿದ್ಯಾಲಯವೇ ಭರಿಸಿ ತನ್ನ ಮುಖ್ಯ ಆವರಣದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಪ್ರಯೋಗಾಲಯವನ್ನು ನಿರ್ಮಿಸಲಿದೆ.
ಸಿಎಸ್‌ಆರ್ ಯೋಜನೆಯಡಿ ಮಹತ್ವದ ಅನುದಾನ ಒದಗಿಸಿದ ಹಿನ್ನೆಲೆಯಲ್ಲಿ ಡಾ. ದಾಕ್ಷಾಯಿಣಿ ಅವ್ವಾಜಿ ಅವರು ಕರ್ನಾಟಕ ಬ್ಯಾಂಕ್‌ನ ಅಧಿಕಾರಿಗಳನ್ನು ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು.
ಸ್ಥಾಪನೆಯಾಗಲಿರುವ ಡ್ರೋನ್ ಪ್ರಯೋಗಾಲಯವು ವಿದ್ಯಾರ್ಥಿಗಳು ಹಾಗೂ ಸಂಶೋಧನಾ ವಿದ್ಯಾರ್ಥಿಗಳ ಸಂಶೋಧನೆ, ನವೋದ್ಯಮ, ಕೌಶಲ್ಯಾಭಿವೃದ್ಧಿ ಮತ್ತು ತಾಂತ್ರಿಕ ತರಬೇತಿಗೆ ಹೊಸ ಅವಕಾಶಗಳನ್ನು ಕಲ್ಪಿಸಲಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಆಧಾರಿತ ಡಿಜಿಟಲ್ ಸ್ವಯಂಚಾಲನಾ ತಂತ್ರಜ್ಞಾನ, ಮಾನವರಹಿತ ವೈಮಾನಿಕ ವಾಹನಗಳ (ಡ್ರೋನ್) ವಿನ್ಯಾಸ, ಕಾರ್ಯವಿಧಾನ ಹಾಗೂ ಸಂಬಂಧಿತ ಅಲ್ಗಾರಿದಮ್‌ಗಳ ಕುರಿತು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನ ನೀಡುವ ಕೇಂದ್ರವಾಗಿ ಇದು ರೂಪುಗೊಳ್ಳಲಿದೆ.
ಈ ಪ್ರಯೋಗಾಲಯದಿಂದ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮಷಿನ್ ಲರ್ನಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಡೇಟಾ ಸೈನ್ಸ್, ಮೆಕ್ಯಾನಿಕಲ್, ಸಿವಿಲ್ ಹಾಗೂ ಎನರ್ಜಿ ಇಂಜಿನಿಯರಿಂಗ್ ಸೇರಿದಂತೆ ವಿವಿಧ ವಿಭಾಗಗಳ 1,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೇರ ಪ್ರಯೋಜನ ಪಡೆಯಲಿದ್ದಾರೆ.