ಕಲಬುರಗಿ: ಆಗಸ್ಟ್ 15ರಂದು ನಡೆಯಲಿರುವ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಜಿಲ್ಲೆಯಾದ್ಯಂತ ಅತ್ಯಂತ ವಿಜೃಂಭಣೆ, ಅರ್ಥಪೂರ್ಣತೆ ಹಾಗೂ ಶಿಸ್ತಿನಿಂದ ಆಚರಿಸಲು ಅಗತ್ಯವಿರುವ ಎಲ್ಲ ಪೂರ್ವಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಶನಿವಾರ ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ 80ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾರ್ಯಕ್ರಮದ ಯಶಸ್ವಿ ಆಯೋಜನೆಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಜವಾಬ್ದಾರಿಗಳನ್ನು ಹಂಚಿಕೆ ಮಾಡಿದರು.
ಡಿ.ಆರ್. ಪರೇಡ್ ಮೈದಾನದಲ್ಲಿ ಮುಖ್ಯ ಕಾರ್ಯಕ್ರಮ ಹಾಗೂ ಧ್ವಜಾರೋಹಣ ನಡೆಯಲಿದ್ದು, ಮಳೆ ಬಂದರೂ ಯಾವುದೇ ಅಡಚಣೆ ಉಂಟಾಗದಂತೆ ಜರ್ಮನ್ ಟೆಂಟ್ ಹಾಗೂ ಶಾಮಿಯಾನ ವ್ಯವಸ್ಥೆ ಮಾಡಲಾಗುತ್ತಿದೆ. ಮೈದಾನ ಸಮತಟ್ಟುಗೊಳಿಸುವಿಕೆ ಮತ್ತು ವೇದಿಕೆ ನಿರ್ಮಾಣದ ಜವಾಬ್ದಾರಿಯನ್ನು ಲೋಕೋಪಯೋಗಿ ಇಲಾಖೆ ಹಾಗೂ ಮಹಾನಗರ ಪಾಲಿಕೆಗೆ ವಹಿಸಲಾಗಿದೆ. ಕಾರ್ಯಕ್ರಮದ ಸುರಕ್ಷತೆಗಾಗಿ ಅಗ್ನಿಶಾಮಕ ವಾಹನ, ಆಂಬ್ಯುಲೆನ್ಸ್ ಹಾಗೂ ವೈದ್ಯಕೀಯ ತಂಡಗಳು ಸನ್ನದ್ಧವಾಗಿರಬೇಕು ಎಂದು ಸೂಚಿಸಿದರು.
ಆಗಸ್ಟ್ 15ರಂದು ಬೆಳಿಗ್ಗೆ 7.30ಕ್ಕೆ ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಧ್ವಜಾರೋಹಣ ನೆರವೇರಿಸಬೇಕು. ಎಲ್ಲಾ ಇಲಾಖೆ ಸಿಬ್ಬಂದಿ ಬೆಳಿಗ್ಗೆ 8.15ರೊಳಗೆ ಡಿ.ಆರ್. ಪರೇಡ್ ಮೈದಾನದಲ್ಲಿ ಹಾಜರಿರಬೇಕು. ಕರ್ತವ್ಯಲೋಪ ಅಥವಾ ಗೈರುಹಾಜರಾಗುವ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ಕಟ್ಟುನಿಟ್ಟಿನ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಬಾರಿಯ ಸ್ವಾತಂತ್ರ್ಯೋತ್ಸವದ ವಿಶೇಷ ಆಕರ್ಷಣೆಯಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಕಲಾವಿದರಿಗೆ ಮುಕ್ತ ಆಡಿಷನ್ ಆಯೋಜಿಸಲಾಗುತ್ತಿದೆ. ಆಸಕ್ತರು ಮುಂದಿನ 3–4 ದಿನಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಿಡಿಪಿಐ ಅಥವಾ ಡಿಡಿಪಿಯು ಕಚೇರಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಆಗಸ್ಟ್ 5 ಅಥವಾ 6ರಂದು ನಡೆಯುವ ಆಡಿಷನ್‌ನಲ್ಲಿ ಆಯ್ಕೆಯಾಗುವ ತಂಡಗಳಿಗೆ ಮುಖ್ಯ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡುವ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪೊಲೀಸ್, ಅರಣ್ಯ, ಗೃಹರಕ್ಷಕ ದಳ ಹಾಗೂ ಎನ್‌ಸಿಸಿ ತಂಡಗಳಿಂದ ಪಥಸಂಚಲನ ನಡೆಯಲಿದೆ. ನಗರದ ಪ್ರಮುಖ ವೃತ್ತಗಳಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್, ಸರ್ದಾರ್ ವಲ್ಲಭಭಾಯಿ ಪಟೇಲ್, ಮಹಾತ್ಮ ಗಾಂಧಿ, ಬಾಬು ಜಗಜೀವನ ರಾಂ ಸೇರಿದಂತೆ ಮಹನೀಯರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಲಾಗುವುದು. ಅಲ್ಲದೆ ವಿಧಾನಸೌಧ ಆವರಣ ಸೇರಿದಂತೆ ಸರ್ಕಾರಿ ಕಚೇರಿಗಳು ಹಾಗೂ ಪ್ರಮುಖ ವಾಣಿಜ್ಯ ಸಂಕೀರ್ಣಗಳನ್ನು ಆಕರ್ಷಕ ವಿದ್ಯುತ್ ದೀಪಾಲಂಕಾರದಿಂದ ಅಲಂಕರಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸ್ವಾತಂತ್ರ್ಯೋತ್ಸವದ ಅಂಗವಾಗಿ ಸಂಜೆ 5 ಗಂಟೆಗೆ ನಗರದ ಡಾ. ಎಸ್.ಎಂ. ಪಂಡಿತ್ ರಂಗಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕರಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ ಅಡ್ಡೂರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಸಂಕನೂರು, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಸಿಂಧೆ, ಎಸಿಪಿ ಪ್ರವೀಣ್ ನಾಯಕ್, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತೆ ಸಾಹಿತ್ಯ ಆಲದಕಟ್ಟಿ, ಪ್ರೊಬೆಷನರಿ ಐಎಎಸ್ ಅಧಿಕಾರಿ ಶಿಖರ್ ಮೋಘ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.