Shubhashaya News

ಕೆಕೆಸಿಸಿಐ ಸಂವಾದದಲ್ಲಿ ಕೈಗಾರಿಕಾ ಸಮಸ್ಯೆಗಳ ಪರಿಹಾರಕ್ಕೆ ಕೆಐಎಡಿಬಿ ಸಿಇಒ ಗೋವಿಂದ ರೆಡ್ಡಿ ಭರವಸೆ

ಕಲಬುರಗಿ: ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ) ವತಿಯಿಂದ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಕಾರ್ಯನಿರ್ವಾಹಕ ಸದಸ್ಯ ಗೋವಿಂದ ರೆಡ್ಡಿ, ಐಎಎಸ್ ಅವರೊಂದಿಗೆ ಕೈಗಾರಿಕೋದ್ಯಮಿಗಳ ಸಂವಾದ ಕಾರ್ಯಕ್ರಮ ನಗರದ ಕೆಕೆಸಿಸಿಐ ಎಸ್.ಎಸ್. ಪಾಟೀಲ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಎಂ. ಪಪ್ಪಾ ಅವರು, ಗೋವಿಂದ ರೆಡ್ಡಿ ಅವರ ಆಡಳಿತಾನುಭವ ಹಾಗೂ ನಾಯಕತ್ವದಿಂದ ಕಲ್ಯಾಣ ಕರ್ನಾಟಕ ಭಾಗದ ಕೈಗಾರಿಕಾ ಅಭಿವೃದ್ಧಿಗೆ ಹೊಸ ಚೈತನ್ಯ ದೊರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಪ್ರದೇಶದಲ್ಲಿ ಕೈಗಾರಿಕಾ ಭೂಮಿ, ಮೂಲಸೌಕರ್ಯ ಹಾಗೂ ಇತರೆ ಸಮಸ್ಯೆಗಳ ಕುರಿತು ಕೈಗಾರಿಕೋದ್ಯಮಿಗಳೊಂದಿಗೆ ನೇರ ಸಂವಾದ ನಡೆಸಲು ಆಗಮಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.
ಪಿಎಂ ಮಿತ್ರ ಮೆಗಾ ಟೆಕ್ಸ್ಟೈಲ್ ಪಾರ್ಕ್ ಯೋಜನೆಯು ಶೀಘ್ರ ಅನುಷ್ಠಾನಗೊಂಡರೆ ಲಕ್ಷಾಂತರ ಉದ್ಯೋಗ ಸೃಷ್ಟಿಯಾಗಿ ಕಲ್ಯಾಣ ಕರ್ನಾಟಕದ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಹೊಸ ದಿಕ್ಕು ದೊರೆಯಲಿದೆ. ಆದ್ದರಿಂದ ಯೋಜನೆಗೆ ಸಂಬಂಧಿಸಿದ ಬಾಕಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಅವರು ಮನವಿ ಮಾಡಿದರು.
ಪ್ರತಿಕ್ರಿಯಿಸಿದ ಕೆಐಎಡಿಬಿ ಸಿಇಒ ಗೋವಿಂದ ರೆಡ್ಡಿ ಅವರು, ಪಿಎಂ ಮಿತ್ರ ಟೆಕ್ಸ್ಟೈಲ್ ಪಾರ್ಕ್ ಅಭಿವೃದ್ಧಿ ಕಾಮಗಾರಿ ಈಗಾಗಲೇ ಆರಂಭಗೊಂಡಿದ್ದು, ಭೂ ಅಭಿವೃದ್ಧಿಗೆ ಸುಮಾರು 350 ಕೋಟಿ ಮೀಸಲಿಡಲಾಗಿದೆ ಎಂದು ತಿಳಿಸಿದರು. ಯೋಜನೆಯಡಿ ಅಭಿವೃದ್ಧಿಪಡಿಸಿದ ಕೈಗಾರಿಕಾ ಭೂಮಿಯ ಬೆಲೆ ಪ್ರತಿ ಎಕರೆಗೆ ಸುಮಾರು 49 ಲಕ್ಷ ಆಗುವ ನಿರೀಕ್ಷೆಯಿದ್ದು, ಡಿಪಿಆರ್ ಅನುಮೋದನೆ ಹಾಗೂ ಮೂಲಸೌಕರ್ಯ ಕಾಮಗಾರಿ ಪೂರ್ಣಗೊಂಡ ಬಳಿಕ ಪಾರ್ಕ್ ಅನ್ನು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಲಾಗುವುದು ಎಂದರು.
ನಂದೂರು ಕೈಗಾರಿಕಾ ಪ್ರದೇಶದ ಮೂರನೇ ಹಂತದ ಭೂ ಹಂಚಿಕೆ ಪ್ರಕ್ರಿಯೆ ಮುಂದಿನ ಐದರಿಂದ ಆರು ತಿಂಗಳಲ್ಲಿ ಆರಂಭವಾಗುವ ನಿರೀಕ್ಷೆಯಿದೆ. ಕೆ-ಲ್ಯಾಂಪ್ ಮಹಿಳಾ ಕೈಗಾರಿಕಾ ಪಾರ್ಕ್‌ನಲ್ಲಿ ಬೀದಿ ದೀಪ, ಭದ್ರತಾ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಶೀಘ್ರದಲ್ಲೇ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಗುಲ್ಬರ್ಗಾ ಟೆಕ್ಸ್ಟೈಲ್ ಪಾರ್ಕ್ ಪ್ರೈವೇಟ್ ಲಿಮಿಟೆಡ್‌ಗೆ ಸಂಬಂಧಿಸಿದ ಭೂ ಹಂಚಿಕೆ ಹಾಗೂ ಅವಧಿ ವಿಸ್ತರಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ವಿಷಯವನ್ನು ಸಮಗ್ರವಾಗಿ ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಕೆಐಎಡಿಬಿ ಅಧೀಕ್ಷಕ ಅಭಿಯಂತರ ಟಿ.ಎಸ್. ಲಕ್ಷ್ಮೀಶ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಅಬ್ದುಲ್ ಅಜೀಮ್, ಎಂಎಸ್‌ಎಂಇ ಸಮಿತಿಯ ಅಧ್ಯಕ್ಷ ಅಭಿಜಿತ್ ಪಡಶೆಟ್ಟಿ ಸೇರಿದಂತೆ ವಿವಿಧ ಕೈಗಾರಿಕಾ ಸಂಘಟನೆಗಳ ಪ್ರತಿನಿಧಿಗಳು, ಕೈಗಾರಿಕೋದ್ಯಮಿಗಳು ಹಾಗೂ ಕೆಕೆಸಿಸಿಐ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರವೀಶಂಕರ್ ಜಮದಾರಖಾನಿ ನಿರೂಪಿಸಿ, ಶಿವರಾಜ್ ವಿ. ಇಂಗಿನಶೆಟ್ಟಿ ವಂದಿಸಿದರು.
Leave A Reply

Your email address will not be published.