ಇಂದಿನ ಧಾವಂತದ ಬದುಕಿನಲ್ಲಿ ಸ್ಮಾರ್ಟ್‌ಫೋನ್, ಕಂಪ್ಯೂಟರ್ ಮತ್ತು ಸೋಶಿಯಲ್ ಮೀಡಿಯಾಗಳು ನಮ್ಮ ಜೀವನದ ಒಡನಾಡಿಗಳಾಗಿಬಿಟ್ಟಿವೆ. ಬೆಳಗ್ಗೆ ಕಣ್ಣು ಬಿಟ್ಟ ಕ್ಷಣದಿಂದ ರಾತ್ರಿ ನಿದ್ರೆಗೆ ಜಾರುವವರೆಗೂ ನಮ್ಮ ಬೆರಳುಗಳು ಹಾಗೂ ಕಣ್ಣುಗಳು ಮೊಬೈಲ್ ಪರದೆಯ ಮೇಲೆಯೇ ನೆಟ್ಟಿರುತ್ತವೆ. ಈ ನಿರಂತರ ಡಿಜಿಟಲ್ ಸಂಪರ್ಕವು ನಮಗೆ ತಿಳಿಯದಂತೆಯೇ ತಲೆಭಾರ, ಮನಸ್ಸಿಗೆ ಆಯಾಸ ಹಾಗೂ ದೈಹಿಕ ಸುಸ್ತನ್ನು ತಂದೊಡ್ಡುತ್ತಿವೆ.
ಈ ಹಿನ್ನೆಲೆಯಲ್ಲಿ, ನಮ್ಮ ಮನಸ್ಸನ್ನು ಹಗುರಗೊಳಿಸಲು ‘ಡಿಜಿಟಲ್ ಉಪವಾಸ’ (Digital Detox) ಇಂದಿನ ದಿನಗಳಲ್ಲಿ ನಮಗೆ ಅತ್ಯಂತ ಅಗತ್ಯವಾದ ಅಭ್ಯಾಸವಾಗಿದೆ.
ನಮ್ಮ ಭಾರತವರ್ಷ ಕಂಡ ಸರಳ – ಸಜ್ಜನಿಕೆ ವ್ಯಕ್ತಿತ್ವದ ಪ್ರಧಾನಿ ಲಾಲಬಹಾದ್ದೂರ ಶಾಸ್ತ್ರೀಜಿಯವರು
1965-66ರ ಸಂದರ್ಭದಲ್ಲಿ ‘ಜೈ ಜವಾನ್, ಜೈ ಕಿಸಾನ್’ ಎಂಬ ಘೋಷಣೆಯೊಂದಿಗೆ ದೇಶದ ಜನತೆಗೆ ವಾರದಲ್ಲಿ ಒಂದು ಹೊತ್ತಿನ ಉಪವಾಸ ಮಾಡುವಂತೆ ಕರೆ ನೀಡಿದ್ದರು. ಆಹಾರದ ತೀವ್ರ ಅಭಾವದ ಹಿನ್ನೆಲೆಯಲ್ಲಿ
ಅಂದು ಅವರು ನೀಡಿದ ಕರೆ ಕೇವಲ ಆಹಾರ ಉಳಿತಾಯಕ್ಕಷ್ಟೇ ಅಲ್ಲದೆ, ದೇಶದ ಸಾರ್ವಭೌಮತ್ವ, ಆತ್ಮನಿಯಂತ್ರಣ ಮತ್ತು ಸ್ವಾವಲಂಬನೆಯ ಸಂಕೇತವಾಗಿತ್ತು.
ಅಂದು ಜಠರಕ್ಕಿತ್ತ ಉಪವಾಸ ದೇಶಕ್ಕೆ ಆಹಾರ ಭದ್ರತೆ ತಂದುಕೊಟ್ಟರೆ, ಇಂದು ನಮಗೆ ಬೇಕಿರುವುದು ಮನಸ್ಸಿಗೆ ಮತ್ತು ಇಂದ್ರಿಯಗಳಿಗೆ ಕೊಡುವ ‘ಡಿಜಿಟಲ್ ಉಪವಾಸ!’
ಅಂದು ಆಹಾರದ ಅಭಾವವಿತ್ತು. ಇಂದು ‘ಸಮಯ ಮತ್ತು ಗಮನದ (Attention)’ ಅಭಾವವಿದೆ. ಶಾಸ್ತ್ರೀಜಿಯವರ ಸದಾಶಯದಂತೆ ನಾವಿಂದು ವಾರದಲ್ಲಿ ಒಮ್ಮೆಯಾದರೂ ಅಥವಾ ದಿನದ ಕೆಲ ಗಂಟೆಗಳ ಕಾಲ ಡಿಜಿಟಲ್ ಉಪವಾಸ ಆಚರಿಸಿದರೆ, ನಮ್ಮ ವಿಚಾರಶಕ್ತಿ, ಏಕಾಗ್ರತೆ ಮತ್ತು ಆತ್ಮನಿಯಂತ್ರಣವನ್ನು ಮರಳಿ ಪಡೆಯಲು ಸಾಧ್ಯವಿದೆ.
ಈ ದಿಶೆಯಲ್ಲಿ ಅನುಸರಿಸಬೇಕಾದ ನಿಯಮಗಳು ಹೀಗಿವೆ:
ಡಿಜಿಟಲ್ ಉಪವಾಸ ಎಂದರೆ ತಂತ್ರಜ್ಞಾನವನ್ನು ಸಂಪೂರ್ಣವಾಗಿ ತೊರೆಯುವುದಲ್ಲ; ಬದಲಾಗಿ, ಅನಗತ್ಯ ಡಿಜಿಟಲ್ ಬಳಕೆಗೆ ಕೊಂಚ ವಿಶ್ರಾಂತಿ ನೀಡಿ, ನಮ್ಮ ಅತ್ಯಮೂಲ್ಯ ಸಮಯ ಮತ್ತು ಗಮನವನ್ನು ಮರಳಿ ನಮ್ಮ ಸ್ವಂತ ನಿಯಂತ್ರಣಕ್ಕೆ ತೆಗೆದುಕೊಳ್ಳುವುದಾಗಿದೆ.
(ಅ.) ಊಟದ ಸಮಯದಲ್ಲಿ ಫೋನ್ ಬೇಡ:
ಊಟದ ಮೇಜಿನ ಬಳಿ ಕುಳಿತಾಗ ಮೊಬೈಲ್ ನೋಡುವುದು ನಾವು ತಿನ್ನುವ ಆಹಾರದ ರುಚಿ ಮತ್ತು ಮಹತ್ವವನ್ನು ಮರೆಸಿಬಿಡುತ್ತದೆ. ಕುಟುಂಬದವರೊಂದಿಗೆ ಕುಳಿತು ಊಟ ಮಾಡುವಾಗ ಫೋನ್ ಅನ್ನು ಬದಿಗಿಟ್ಟು ನೋಡಿ; ಆಗ ಮನೆಯವರ ಜೊತೆಗಿನ ಮಾತುಕತೆ ಜೀವಂತಗೊಳ್ಳುತ್ತದೆ, ಪ್ರೀತಿ-ಬಾಂಧವ್ಯಗಳು ಮತ್ತಷ್ಟು ಗಟ್ಟಿಯಾಗುತ್ತವೆ.
(ಆ.) ಮಲಗುವ ಕೋಣೆಯಲ್ಲಿ ಗೆಜೆಟ್ಸ್ ಬೇಡ:
ನಮ್ಮ ಮಲಗುವ ಕೋಣೆಯನ್ನು ಸಂಪೂರ್ಣವಾಗಿ ಡಿಜಿಟಲ್ ಮುಕ್ತ ‘ನೆಮ್ಮದಿಯ ವಲಯ’ವನ್ನಾಗಿ ಮಾಡಿಕೊಳ್ಳೋಣ. ಫೋನಿನ ನೀಲಿ ಬೆಳಕು ನಮ್ಮ ನಿದ್ರೆಯನ್ನಷ್ಟೇ ಅಲ್ಲ, ಮನಸ್ಸಿನ ಶಾಂತಿಯನ್ನೂ ಕೆಡಿಸುತ್ತದೆ. ಬೆಳಗ್ಗೆ ಏಳಲು ಫೋನ್ ಅಲಾರಾಂ ಬದಲು ಸಾಂಪ್ರದಾಯಿಕ ಗಡಿಯಾರ ಬಳಸುವುದು ಮತ್ತು ಮಲಗುವ ಮುನ್ನ ಫೋನ್ ದೂರವಿಡುವುದು ನೆಮ್ಮದಿಯ ನಿದ್ರೆಗೆ ದಾರಿ ಮಾಡಿಕೊಡುತ್ತದೆ.
(ಇ.) ಮುದ್ರಣ ಪುಸ್ತಕಕ್ಕೆ ಆದ್ಯತೆ:
ಸ್ಕ್ರೀನ್ ಮೇಲೆ ಅಥವಾ ಇ-ಬುಕ್‌ನಲ್ಲಿ ಓದುವುದಕ್ಕಿಂತ, ಕೈಯಲ್ಲಿ ಪುಸ್ತಕ ಹಿಡಿದು ಪುಟಗಳನ್ನು ತಿರುಗಿಸುತ್ತಾ ಓದುವ ಆನಂದವೇ ಬೇರೆ! ಮುದ್ರಣ ಪುಸ್ತಕಗಳನ್ನು ಓದುವುದರಿಂದ ಕಣ್ಣಿನ ಮೇಲಿನ ಆಯಾಸ ತಪ್ಪುತ್ತದೆ ಮತ್ತು ವಿಷಯದ ಆಳಕ್ಕೆ ಇಳಿದು ಆನಂದಿಸಲು ಸಾಧ್ಯವಾಗುತ್ತದೆ.
(ಈ.) ಮೊಬೈಲ್ ಮುಕ್ತ ವಾಯುವಿಹಾರ:
ಬೆಳಗಿನ ಅಥವಾ ಸಂಜೆಯ ನಡಿಗೆಗೆ ಹೋಗುವಾಗ ಮೊಬೈಲ್ ಫೋನ್ ಅನ್ನು ಮನೆಯಲ್ಲೇ ಬಿಟ್ಟು ಹೋಗಿ. ಪ್ರಕೃತಿಯ ನಡುವೆ, ತಂಗಾಳಿಯನ್ನು ಆಸ್ವಾದಿಸುತ್ತಾ, ಹಕ್ಕಿಗಳ ಕಲರವ ಆಲಿಸುತ್ತಾ ನಡೆಯುವುದರಿಂದ ಮನಸ್ಸಿನಲ್ಲಿರುವ ಒತ್ತಡವೆಲ್ಲ ಕರಗಿ ಇಡೀ ದಿನ ಹೊಸ ಉತ್ಸಾಹ ತುಂಬಿಕೊಳ್ಳುತ್ತದೆ.
(ಉ.) ಸೆಲ್ಫಿ ಮತ್ತು ಸ್ಟೇಟಸ್ ಗೀಳು ಕಡಿಮೆಯಾಗಲಿ:
ಪ್ರತಿಯೊಂದು ಸುಂದರ ಕ್ಷಣವನ್ನೂ ಕ್ಯಾಮೆರಾದಲ್ಲಿ ಬಂಧಿಸಿ, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಗೀಳಿನಲ್ಲಿ ನಾವು ಆ ಕ್ಷಣದ ನಿಜವಾದ ಖುಷಿಯನ್ನೇ ಕಳೆದುಕೊಳ್ಳುತ್ತಿದ್ದೇವೆ. ‘ಲೈಕ್ಸ್’ ಮತ್ತು ‘ಕಾಮೆಂಟ್ಸ್’ಗಳಿಗಾಗಿ ಹಂಬಲಿಸುವ ಬದಲು, ಕ್ಷಣಗಳನ್ನು ಪರದೆಯ ಹಿಂದಿನಿಂದ ನೋಡದೆ, ನೇರವಾಗಿ ಕಣ್ಣಾರೆ ಕಂಡು ಹೃದಯದಲ್ಲಿ ತುಂಬಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳೋಣ.
(ಊ.) ರೀಲ್ಸ್ ಬದಲು ಆಡಿಯೋ ಸಂಗೀತ ಕೇಳಿ:
ಇತ್ತೀಚೆಗೆ ಕಿರು ವೀಡಿಯೊಗಳು (ರೀಲ್ಸ್/ಶಾರ್ಟ್ಸ್) ಒಂದರ ಮೇಲೊಂದರಂತೆ ಬಂದು ನಮ್ಮ ಅಮೂಲ್ಯ ಸಮಯವನ್ನು ಕ್ಷಣಾರ್ಧದಲ್ಲಿ ಕಸಿದುಕೊಳ್ಳುತ್ತಿವೆ. ಈ ನಿರಂತರ ದೃಶ್ಯಗಳ ಪ್ರವಾಹವು ಮೆದುಳಿಗೆ ಆಯಾಸ ತಂದುಕೊಟ್ಟು, ನಮ್ಮ ಏಕಾಗ್ರತೆಯನ್ನು ಕುಗ್ಗಿಸುತ್ತದೆ. ಇದಕ್ಕೆ ಅತ್ಯುತ್ತಮ ಮತ್ತು ಹಿತಕರವಾದ ಪರ್ಯಾಯವೆಂದರೆ ಆಡಿಯೋ ಸಂಗೀತ.
ಪರದೆಯ ಅಡಚಣೆ ಇಲ್ಲದೆ ಕೇವಲ ಮಧುರವಾದ ವಾದ್ಯ ಸಂಗೀತ, ಶಾಸ್ತ್ರೀಯ ಸಂಗೀತ ಅಥವಾ ನೆನಪಿನಾಳದ ಭಾವಗೀತೆಗಳನ್ನು ಕೇಳುವುದರಿಂದ ನರಮಂಡಲ ಪ್ರಶಾಂತಗೊಂಡು ಮನಸ್ಸಿನ ಭಾರ ಇಳಿಯುತ್ತದೆ. ಸಂಗೀತ ಕೇಳುವಾಗ ಕಣ್ಣುಗಳನ್ನು ಪ್ರೀತಿಯಿಂದ ಮುಚ್ಚಿ ವಿಶ್ರಮಿಸಲು ಸಾಧ್ಯವಾಗುವುದರಿಂದ ಕಣ್ಣಿನ ಸುಸ್ತು ಇಲ್ಲವಾಗುತ್ತದೆ.
ದೃಶ್ಯಗಳನ್ನು ಬಲವಂತವಾಗಿ ನೋಡುವುದಕ್ಕಿಂತ, ಆಡಿಯೋ ಆಲಿಸಿದಾಗ ನಮ್ಮ ಮನಸ್ಸಿನಲ್ಲಿ ನವೀನ ಕಲ್ಪನಾ ಶಕ್ತಿ ಹಾಗೂ ಸೃಜನಶೀಲತೆ ಅರಳುತ್ತದೆ.
ಶಾಸ್ತ್ರೀಜಿಯವರ ಕರೆ ಅಂದು ದೇಶದ ಶಕ್ತಿಯನ್ನು ಉನ್ನತೀಕರಿಸಿದಂತೆ, ಇಂದು ನಾವು ಕೈಗೊಳ್ಳುವ ‘ಡಿಜಿಟಲ್ ಉಪವಾಸ’ ನಮ್ಮ ವ್ಯಕ್ತಿತ್ವವನ್ನು, ಮಾನಸಿಕ ಆರೋಗ್ಯವನ್ನು ಮತ್ತು ಕುಟುಂಬ ಸಂಬಂಧಗಳನ್ನು ಮತ್ತೆ ಶಕ್ತಿಗೊಳಿಸಲಿದೆ. ಯಾಂತ್ರಿಕ ಬದುಕಿನ ಜಂಜಾಟದಿಂದ ಹೊರಬಂದು, ಈ ಸರಳ ಅಭ್ಯಾಸಗಳನ್ನು ನಮ್ಮ ದಿನಚರಿಯ ಭಾಗವಾಗಿಸಿಕೊಳ್ಳೋಣ. ಈ ಸಣ್ಣ ಹೆಜ್ಜೆ ನಮ್ಮ ಮನಸ್ಸಿಗೆ ನಿಜವಾದ ಶಾಂತಿ ನೀಡುವ ಜೊತೆಗೆ, ಸುಂದರ ಹಾಗೂ ಆರೋಗ್ಯಕರ ಬದುಕಿಗೆ ದಾರಿ ಮಾಡಿಕೊಡುತ್ತದೆ.
– ಎಸ್.ಎಸ್.ಹಿರೇಮಠ
ಕಲಬುರಗಿ
ಮೊಬೈಲ್: 9342356222