ಗುರುಪೂರ್ಣಿಮೆಯ ಪವಿತ್ರ ದಿನದ ಅಂಗವಾಗಿ ಇಲ್ಲಿನ ಶ್ರೀ ಶಿವಲಿಂಗೇಶ್ವರ ವಿರಕ್ತ ಮಠದಲ್ಲಿ ಬುಧವಾರದಂದು ಶ್ರೀ ಗುರುವಂದನೆ, ಪ್ರವಚನ ಹಾಗೂ ನೂತನ ಪುಸ್ತಕ ಬಿಡುಗಡೆ ಸಮಾರಂಭವು ಅತ್ಯಂತ ಸಡಗರ ಹಾಗೂ ಭಕ್ತಿಭಾವಗಳೊಂದಿಗೆ ಸಂಪನ್ನಗೊಂಡಿತು.
ಬೆಳಿಗ್ಗೆ ಭವ್ಯ ಕುಂಭಮೇಳದೊಂದಿಗೆ ಶ್ರೀ ಶಿವಲಿಂಗೇಶ್ವರ ವಿರಕ್ತ ಮಠದವರೆಗೆ ನಡೆದ ಅದ್ಧೂರಿ ಮೆರವಣಿಗೆಯು ಭಕ್ತರ ಕಣ್ಮನ ಸೆಳೆಯಿತು. ತದನಂತರ ಜರುಗಿದ ‘ಗುರು ಕರುಣೆ’ ಪ್ರವಚನ ಕಾರ್ಯಕ್ರಮದಲ್ಲಿ ಶ್ರೀ ನೂರೊಂದಯ್ಯ ಸ್ವಾಮಿಗಳು ತಮ್ಮ ಪ್ರವಚನದ ಮೂಲಕ ಭಕ್ತ ಸಮೂಹಕ್ಕೆ ಜ್ಞಾನಾಮೃತ ಉಣಬಡಿಸಿದರು. ಅವರಿಗೆ ಗವಾಯಿಗಳಾದ ಅಪ್ಪಾಸಾಹೇಬ ಆರ್. ಪಾಟೀಲ ಅವರು ಸಾಥ್ ನೀಡಿದರು.
ಗುರುವಂದನೆ ಹಾಗೂ ಕೃತಿ ಲೋಕಾರ್ಪಣೆ:
ಶ್ರೀ ಮಠದ ಪೀಠಾಧಿಪತಿಗಳಾದ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮಿಗಳವರಿಗೆ ಸದ್ಭಕ್ತರಿಂದ ‘ಗುರುವಂದನಾ’ ಕಾರ್ಯಕ್ರಮವನ್ನು ಭಕ್ತಿಪೂರ್ವಕವಾಗಿ ನೆರವೇರಿಸಲಾಯಿತು.
ಇದೇ ಶುಭ ವೇದಿಕೆಯಲ್ಲಿ ಶ್ರೀ ಅಂಬಾರಾಯ ಮಡ್ಡೆ ಮತ್ತು ಶ್ರೀ ಶಿವರಾಜ ಸೂ. ಸಣಮನಿ ಅವರು ರಚಿಸಿರುವ ‘ಮದಗುಣಕಿ ಗ್ರಾಮದ ಸಮಗ್ರ ಐತಿಹಾಸಿಕ ಮತ್ತು ಸಾಂಸ್ಕೃತಿಕ ದರ್ಶನ’ ಎಂಬ ಮೌಲ್ಯಯುತ ಕೃತಿಯನ್ನು ಪೂಜ್ಯರ ಅಮೃತ ಹಸ್ತದಿಂದ ಗಣ್ಯರ ಸಮ್ಮುಖದಲ್ಲಿ ಲೋಕಾರ್ಪಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ರಾಜಶೇಖರ ಅಣ್ಣಾರಾಯ ಸಣಮನಿ ಉಪಸ್ಥಿತರಿದ್ದರು. ಶ್ರೀ ಮಹೇಶ ನಾಗೇಂದ್ರಪ್ಪ ಪಾಟೀಲ ಅವರು ಪುಸ್ತಕ ದಾನಿಗಳಾಗಿ ಸಹಕರಿಸಿದರು. ಶ್ರೀ ಮಹಾಂತೇಶ ಸಣಮನಿ ಅವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಭಕ್ತರು ವಿವಿಧ ಸೇವೆಗಳನ್ನು ಭಕ್ತಿಯಿಂದ ಸಮರ್ಪಿಸಿದರು. ಶ್ರೀ ಮಾಣಿಕ ಶಿವಶರಣಪ್ಪ ಬರೂಡೆ ಅವರಿಂದ ಪುಷ್ಪ ಸೇವೆ ಹಾಗೂ ಶ್ರೀ ರಾಜಕುಮಾರ ಭಜಂತ್ರಿ ಅವರಿಂದ ನೆನಪಿನ ಕಾಣಿಕೆ ಸೇವೆ ಸಮರ್ಪಣೆಯಾಯಿತು. ಶ್ರೀ ಭೀಮಸೇನ ಆಳಂದ ಹಾಗೂ ಅವರ ಪರಿವಾರದವರು ಶ್ರೀಗಳ ಪಾದಪೂಜೆ ನೆರವೇರಿಸಿ, ಆಗಮಿಸಿದ ಭಕ್ತಾದಿಗಳಿಗೆ ಅನ್ನದಾಸೋಹದ ವ್ಯವಸ್ಥೆ ಕಲ್ಪಿಸಿದ್ದರು. ಮದಗುಣಕಿಯ ಶ್ರೀ ಶಿವಲಿಂಗೇಶ್ವರ ವಿರಕ್ತ ಮಠದ ಸದ್ಭಕ್ತ ಮಂಡಳಿಯು ಈ ಸಂಪೂರ್ಣ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿತ್ತು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತಾದಿಗಳು ಗುರುಬೋಧೆ-ದರ್ಶನ-ಆಶೀರ್ವಾದ ಪಡೆದು ಕೃತಾರ್ಥರಾದರು.