Shubhashaya News

ಜಿಡಗಾ ನವಕಲ್ಯಾಣ ಮಠದಲ್ಲಿ ಸಂಭ್ರಮ ಮಧ್ಯ ಗುರುಪೂರ್ಣಿಮೆ

ಆಳಂದ: ಜಿಡಗಾ ನವಕಲ್ಯಾಣ ಮಠದಲ್ಲಿ ನಡೆದ ಗುರುಪೂರ್ಣಿಮೆ ಮಹೋತ್ಸವದಲ್ಲಿ ಪೀಠಾಧಿಪತಿ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಧಾರ್ಮಿಕ ರೂಪಕ ಕೈಗೊಂಡ ಮಕ್ಕಳನ್ನು ಪುಷ್ಪಾರ್ಚನೆ ಕೈಗೊಂಡು ಆಶೀರ್ವದಿಸಿದರು.

“ಗುರು ಎನ್ನುವುದು ಕೇವಲ ವ್ಯಕ್ತಿಯಲ್ಲ, ಬದುಕಿಗೆ ಬೆಳಕಿನ ಜ್ಞಾನಸ್ವರೂಪ: ಜಿಡಗಾ ಶ್ರೀ
ಆಳಂದ: ತಾಲೂಕಿನ ಜಿಡಗಾ ನವಕಲ್ಯಾಣ ಮಠದಲ್ಲಿ ಬುಧವಾರ ನಡೆದ ಗುರುಪೂರ್ಣಿಮೆ ಮಹೋತ್ಸವ ಭಕ್ತಿ, ಭಾವನೆ ಹಾಗೂ ಆಧ್ಯಾತ್ಮಿಕ ವೈಭವದ ಸಮ್ಮಿಲನವಾಗಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ಸಂಭ್ರಮದಿAದ ನೆರವೇರಿತು.
ಮಠದ ಪೀಠಾಧಿಪತಿ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳ ದರ್ಶನ, ಆಶೀರ್ವಾದ ಹಾಗೂ ಗುರುವಂದನೆ ಸ್ವೀಕಾರಕ್ಕಾಗಿ ಕರ್ನಾಟಕ, ಮಹಾರಾಷ್ಟç ಮತ್ತು ತೆಲಂಗಾಣ ರಾಜ್ಯಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಮಠದ ಆವರಣವನ್ನು ಭಕ್ತಿಸಾಗರವಾಗಿಸಿದರು.
ಬೆಳಗಿನ ಜಾವ ಶಿವಯೋಗಿ ಸಿದ್ಧರಾಮೇಶ್ವರರ ಜಾಗೃತ ಗದ್ದುಗೆಗೆ ವಿಶೇಷ ಪೂಜೆ, ಅಭಿಷೇಕ ಹಾಗೂ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ನಂತರ ಭಕ್ತರು ಗದ್ದುಗೆ ದರ್ಶನ ಪಡೆದು ಗುರುಕಾಣಿಕೆ ಸಮರ್ಪಿಸಿ, ಡಾ. ಮುರುಘರಾಜೇಂದ್ರ ಶ್ರೀಗಳಿಂದ ಆಶೀರ್ವಾದ ಪಡೆದರು. ಶ್ರೀಗಳಿಗೆ ನೂರಾರು ಭಕ್ತರು ತುಲಾಭಾರ ಸೇವೆ ಸಲ್ಲಿಸಿದರು.
ವೇದಿಕೆ ಸಮಾರಂಭದಲ್ಲಿ ಗುರುವಂದನೆ ಸ್ವೀಕರಿಸಿ ಆಶೀರ್ವಚನ ನೀಡಿದ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು, “ಗುರು ಎನ್ನುವುದು ಕೇವಲ ವ್ಯಕ್ತಿಯಲ್ಲ, ಬದುಕಿಗೆ ಬೆಳಕು ನೀಡುವ ಜ್ಞಾನಸ್ವರೂಪ. ಮಾನವೀಯ ಮೌಲ್ಯಗಳು, ಧರ್ಮ ಮತ್ತು ಸಂಸ್ಕೃತಿಯ ಉಳಿವಿಗೆ ಗುರುಗಳ ಮಾರ್ಗದರ್ಶನ ಅತ್ಯಗತ್ಯ” ಎಂದು ಕರೆ ನೀಡಿದರು.
ಅತಿಥಿಗಳಾಗಿ ಆಗಮಿಸಿದ್ದ ಮುದಗಲ್ ಮಠದ ಶ್ರೀ ಮಹಾಂತ ಶಿವಯೋಗಿಗಳು ಹಾಗೂ ಚಿನ್ಮಗಿರಿ ಮಠದ ಶ್ರೀ ವೀರಮಹಾಂತ ಶಿವಾಚಾರ್ಯರು ಮಾತನಾಡಿ, ಲಿಂ. ಶಿವಯೋಗಿ ಸಿದ್ಧರಾಮೇಶ್ವರರು ಹಾಕಿಕೊಟ್ಟ ಧಾರ್ಮಿಕ, ಸಾಂಸ್ಕೃತಿಕ ಮತ್ತು ಭಾವೈಕ್ಯತೆಯ ಪರಂಪರೆಯನ್ನು ಡಾ. ಮುರುಘರಾಜೇಂದ್ರ ಶ್ರೀಗಳು ಶಿಕ್ಷಣ, ಸಮಾಜಸೇವೆ ಹಾಗೂ ಧಾರ್ಮಿಕ ಕಾರ್ಯಗಳ ಮೂಲಕ ಮತ್ತಷ್ಟು ವಿಸ್ತರಿಸುತ್ತಿದ್ದು, ಜಿಡಗಾ ಮಠ ಈ ಭಾಗದ ಭಕ್ತರ ಪಾಲಿನ ಕಲ್ಯಾಣ ಕಲ್ಪವೃಕ್ಷವಾಗಿ ಬೆಳೆಯುತ್ತಿದೆ ಎಂದು ಪ್ರಶಂಸಿಸಿದರು.
ಮಾಜಿ ಶಾಸಕ ದತ್ತಾತ್ರೇಯ ಪಾಟೀಲ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಅಂಬರಾಯ ಅಷ್ಟಗಿ, ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ, ಸಿದ್ಧರಾಮ ಪ್ಯಾಟಿ ಸೇರಿದಂತೆ ಹಲವು ಗಣ್ಯರು ಮಾತನಾಡಿ, ಶ್ರೀಗಳ ಸಮಾಜಮುಖಿ, ಶೈಕ್ಷಣಿಕ ಹಾಗೂ ಧಾರ್ಮಿಕ ಸೇವೆಯನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಶಿವಯೋಗಿ ಜ್ಞಾನಮಂದಿರ ಉಚಿತ ವಸತಿ ಸಹಿತ ಶಿಕ್ಷಣ ಸಂಸ್ಥೆಯ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಕಲಾ ಬಳಗದ ಭಕ್ತಿಗಾಯನ, ನಾದಸ್ವರ ಹಾಗೂ ಧಾರ್ಮಿಕ ಸಂಗೀತ ಕಾರ್ಯಕ್ರಮಗಳು ಭಕ್ತರನ್ನು ಭಾವಲೋಕಕ್ಕೆ ಕರೆದೊಯ್ದವು.
ಮಕ್ಕಳು ಪ್ರದರ್ಶಿಸಿದ ಶಿವಯೋಗಿ ಸಿದ್ಧರಾಮೇಶ್ವರರ ಜೀವನಾಧಾರಿತ ರೂಪಕ ಎಲ್ಲರ ಮನಮುಟ್ಟಿತು. ಜೊತೆಗೆ ಗೌತಮ ಬುದ್ಧ, ಮಹಾದಾಸೋಹಿ ಶ್ರೀ ಶರಣಬಸವೇಶ್ವರ, ಮುಗಳಖೋಡದ ಶ್ರೀ ಯಲ್ಲಾಲಿಂಗ ಮಹಾಸ್ವಾಮಿಗಳು, ಪುಟ್ಟರಾಜ ಗವಾಯಿಗಳು ಸೇರಿದಂತೆ ಹಲವು ಸಂತ-ಮಹಾತ್ಮರ ವೇಷಧಾರಣೆ ಗಮನ ಸೆಳೆದು ಆಧ್ಯಾತ್ಮಿಕ ಸಂದೇಶವನ್ನು ಬೀರಿತು.
ಮುನ್ನದಿನ ಜಂಗಮ ವಟುಗಳಿಗೆ ಅಯ್ಯಾಚಾರ ಹಾಗೂ ಶ್ರೀಮಠದ ಶಾಲಾ ಮಕ್ಕಳಿಗೆ ಲಿಂಗದೀಕ್ಷೆ ನೀಡಿ ಡಾ. ಮುರುಘರಾಜೇಂದ್ರ ಶ್ರೀಗಳು ಹಸ್ತಮಸ್ತಕ ಸಂಯೋಜನೆಯೊAದಿಗೆ ಗುರುಪದೇಶ ನೀಡಿದರು.
ಕಾರ್ಯಕ್ರಮದಲ್ಲಿ ಪಂಚಗ್ಯಾರೆAಟಿ ಅಧ್ಯಕ್ಷ ಶಿವುಪುತ್ರಪ್ಪ ಪಾಟೀಲ, ಶಂಕರರಾವ್ ದೇಶಮುಖ, ಮಲ್ಲಪ್ಪ ಹತ್ತರಕಿ, ಆನಂದ ಪಾಟೀಲ, ವೀರಣ್ಣಾ ಹತ್ತರಕಿ, ಬಸವೇಶ್ವರ ಕೃಷಿ ಕೇಂದ್ರದ ರಾಜಶೇಖರ ಪಾಟೀಲ, ರೇವಣಸಿದ್ಧ ನಾಗೂರೆ, ಶ್ರೀಶೈಲ ಸುತಾರ ಮುನ್ನೊಳ್ಳಿ, ವಿಕ್ರಂ ಸಿದ್ಧರೆಡ್ಡಿ, ಪವನಕುಮಾರ ಒಳಕೇರಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಮಹಿಳೆಯರು, ಮಕ್ಕಳು ಹಾಗೂ ಭಕ್ತರು ಕುಟುಂಬ ಸಮೇತರಾಗಿ ಶ್ರೀಮಠದಲ್ಲಿ ದರ್ಶನ ಪಡೆದು, ಭವ್ಯ ಮಠದ ಆವರಣ ವೀಕ್ಷಿಸಿ, ದಾಸೋಹದಲ್ಲಿ ಮಹಾಪ್ರಸಾದ ಸ್ವೀಕರಿಸಿ ಗುರುಪೂರ್ಣಿಮೆಯ ಆಧ್ಯಾತ್ಮಿಕ ಅನುಭವವನ್ನು ಸವಿದರು.
ಬಸವರಾಜ ಚೋಪಾಟೆ ನಿರೂಪಿಸಿದರು. ಅಮೂಲ್ಯ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಪಿಐ ಶರಣಬಸಪ್ಪ ಕೊಡ್ಲಾ ಹಾಗೂ ಪಿಎಸ್‌ಐ ಸಂಜಯ ರೆಡ್ಡಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಒದಗಿಸಿದ್ದರು.

Leave A Reply

Your email address will not be published.