ಆಳಂದ: ನಂದಗೂರ ಸರ್ಕಾರಿ ಶಾಲಾ ಮಕ್ಕಳು ಗ್ರಾಮದ ಪ್ರಮುಖ ಬೀದಿಯಲ್ಲಿ ಮಾದಕವಸ್ತುಗಳ ಬಳಕೆ ತಡೆ ಜಾಗೃತಿ ಜಾಥಾ ನಡೆಸಿ ಗಮನ ಸೆಳೆದರು.
ಆಳಂದ: ತಾಲೂಕಿನ ನಂದಗೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾದಕ ವಸ್ತುಗಳ ಬಳಕೆ ತಡೆಗಟ್ಟುವ ಜಾಗೃತಿ ಕಾರ್ಯಕ್ರಮ ಹಾಗೂ ಪ್ರಚಾರಾಂದೋಲನವನ್ನು ಗಮನ ಸೆಳೆಯಿತು.
ವಿದ್ಯಾರ್ಥಿಗಳು ಘೋಷಣೆಗಳನ್ನು ಕೂಗುತ್ತ ಗ್ರಾಮದಲ್ಲಿ ಜಾಗೃತಿ ಜಾಥಾ ನಡೆಸಿ, ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಮಕ್ಕಳು ಕೈಯಲ್ಲಿ ಜಾಗೃತಿ ಫಲಕಗಳನ್ನು ಹಿಡಿದು, “ಮಾದಕ ವ್ಯಸನಕ್ಕೆ ಇಲ್ಲ ಎನ್ನೋಣ”, “ಗುಟ್ಕಾ-ತಂಬಾಕು ತ್ಯಜಿಸಿ ಆರೋಗ್ಯ ಕಾಪಾಡಿ”, “ವ್ಯಸನ ಮುಕ್ತ ಸಮಾಜ ನಿರ್ಮಿಸೋಣ” ಎಂಬ ಘೋಷಣೆಗಳನ್ನು ಮೊಳಗಿಸುತ್ತ ಗ್ರಾಮ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿದರು.
ವಿದ್ಯಾರ್ಥಿಗಳು ಫಲಕಗಳು ಕೈಯಲಿ ಹಿಡಿದು. “ದೊಡ್ಡವರೇ… ತಂಬಾಕು, ಗುಟ್ಕಾ ಹಾಗೂ ಇತರೆ ಮಾದಕ ವಸ್ತುಗಳನ್ನು ಬಿಡಿ; ನಿಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಿ, ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಿ”, “ನಿಮ್ಮ ಆರೋಗ್ಯವೇ ನಮ್ಮ ಭವಿಷ್ಯ”, “ವ್ಯಸನ ಬಿಟ್ಟು ಜೀವನವನ್ನು ಆರಿಸಿ” ಎಂಬ ಹೃದಯಸ್ಪರ್ಶಿ ಸಂದೇಶಗಳನ್ನು ಮಕ್ಕಳು ನಿರ್ಭಯವಾಗಿ ಪ್ರದರ್ಶಿಸಿದರು.
ಶಾಲೆಯ ಶಿಕ್ಷಕ ರವೀಂದ್ರ ರುದ್ರವಾಡಿ ಮಾತನಾಡಿ, ತಂಬಾಕು, ಗುಟ್ಕಾ, ಸಿಗರೇಟ್ ಹಾಗೂ ಇತರ ಮಾದಕ ವಸ್ತುಗಳ ಸೇವನೆಯಿಂದ ದೇಹದ ವಿವಿಧ ಅಂಗಗಳಿಗೆ ಉಂಟಾಗುವ ಹಾನಿ, ಬಾಯಿ ಕ್ಯಾನ್ಸರ್ ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಮತ್ತೋರ್ವ ಶಿಕ್ಷಕ ಬಸವರೆಡ್ಡಿ ಅವರು, ಮಾದಕ ವ್ಯಸನವು ವ್ಯಕ್ತಿಯ ಆರೋಗ್ಯ ಮಾತ್ರವಲ್ಲದೆ ಕುಟುಂಬದ ನೆಮ್ಮದಿ, ಆರ್ಥಿಕ ಸ್ಥಿತಿ ಹಾಗೂ ಸಮಾಜದ ಸ್ವಾಸ್ಥ್ಯಕ್ಕೂ ಮಾರಕವಾಗುತ್ತದೆ ಎಂದು ಅರಿವು ಮೂಡಿಸಿದರು.
ಗ್ರಾಮದ ಮುಖಂಡ ನಿತಿನ್ ಸರವಡೆ, ಧನರಾಜ ಕಾರಬಾರಿ, ಅಶೋಕ್ ಬಿರಾದಾರ, ಬಾಲಾಜಿ ಪಾಟೀಲ್, ಎಸ್‌ಡಿಎಂಸಿ ಅಧ್ಯಕ್ಷ ಜಯಕುಮಾರ ಗಾಯಕವಾಡ ಸೇರಿದಂತೆ ಗ್ರಾಮಸ್ಥರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.