ಆಳಂದ: ವಾಡಿ ಗ್ರಾಮದ ಶಿವಯೋಗಾಶ್ರಮದಲ್ಲಿ ಶರಣಿ ಶಿವದೇವಿ ಮಾತಾ ಅವರ ೮೬ನೇ ಜನ್ಮದಿನಾಚರಣೆ ಅಂಗವಾಗಿ ಪಶು ಸಂಗೋಪನಾ ಸಹಾಯಕ ನಿರ್ದೇಶಕ ಡಾ. ಯಲ್ಲಪ್ಪ ಇಂಗಳೆ, ಶಾಲಾ ಮಿತ್ರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿನಾಥ ಪರೆಣಿ ಹಾಗೂ ಮಹಾಂತೇಶ ಸಣ್ಣಮನಿ ಸಸಿ ನೆಟ್ಟು ನೀರುಣಿಸಿದರು.
ಆಳAದ: ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಸಾಮಾಜಿಕ ಹೊಣೆಗಾರಿಕೆಯಾಗಿದ್ದು, ಮುಂದಿನ ಪೀಳಿಗೆಗೆ ಹಸಿರು ಪರಿಸರವನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಸಿ ನೆಟ್ಟು ಪೋಷಿಸುವ ಸಂಕಲ್ಪ ಮಾಡಬೇಕು ಎಂದು ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಯಲ್ಲಪ್ಪ ಇಂಗಳೆ ಹೇಳಿದರು.
ತಾಲೂಕಿನ ಮಾದನಹಿಪ್ಪರಗಾ ಬಳಿಯ ಅರಗಲ ಮಡಿಯ ಶಿವಯೋಗಾಶ್ರಮದಲ್ಲಿ ಶರಣಿ ಶಿವದೇವಿ ಮಾತಾ ಅವರ ೮೬ನೇ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ನೀರುಣಿಸಿ ಅವರು ಮಾತನಾಡಿದರು.
ಶಿವದೇವಿ ಮಾತಾ ಅವರ ಜೀವನ ಸಮಾಜದಲ್ಲಿ ಸೇವೆ, ಆಧ್ಯಾತ್ಮ ಹಾಗೂ ಮಾನವೀಯ ಮೌಲ್ಯಗಳ ಬೆಳವಣಿಗೆಗೆ ಪ್ರೇರಣೆಯಾಗಿದ್ದು, ಅವರ ಜನ್ಮದಿನವನ್ನು ಪರಿಸರ ಸಂರಕ್ಷಣೆಯAತಹ ಜನೋಪಯೋಗಿ ಕಾರ್ಯದ ಮೂಲಕ ಆಚರಿಸಿರುವುದು ಶ್ಲಾಘನೀಯ ಎಂದು ಹೇಳಿದರು.
ಶಾಲಾ ಮಿತ್ರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿನಾಥ ಪರೆಣಿ ಮಾತನಾಡಿ, ಧಾರ್ಮಿಕ ಆಚರಣೆಗಳೊಂದಿಗೆ ಪರಿಸರ ಕಾಳಜಿಯನ್ನು ಬೆಳೆಸುವುದು ಇಂದಿನ ಅಗತ್ಯವಾಗಿದ್ದು, ಪ್ರತಿಯೊಬ್ಬರೂ ಕನಿಷ್ಠ ಒಂದು ಸಸಿಯನ್ನು ನೆಟ್ಟು ಅದರ ಪೋಷಣೆಯ ಜವಾಬ್ದಾರಿ ವಹಿಸಬೇಕು ಎಂದು ಕರೆ ನೀಡಿದರು.
ಮಹಾಂತೇಶ ಸಣ್ಣಮನಿ ಮಾತನಾಡಿ, ಮರ-ಗಿಡಗಳು ಜೀವ ಸಂಕುಲದ ಆಧಾರವಾಗಿದ್ದು, ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಪರಿಸರ ಜಾಗೃತಿ ಮೂಡಿಸಲು ಸಹಕಾರಿಯಾಗುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಶರಣಿ ಶಿವದೇವಿ ಮಾತಾ ಅವರು ಭಕ್ತರು ಸಲ್ಲಿಸಿದ ಗೌರವ ಸನ್ಮಾನವನ್ನು ಸ್ವೀಕರಿಸಿ, ಎಲ್ಲ ಭಕ್ತಾದಿಗಳಿಗೆ ಆಶೀರ್ವಚನ ನೀಡಿದರು. ಬಳಿಕ ಆಶ್ರಮದ ಆವರಣದಲ್ಲಿ ಸಸಿ ನೆಟ್ಟು ನೀರುಣಿಸುವ ಮೂಲಕ ಪರಿಸರ ಸಂರಕ್ಷಣೆಯ ಸಂಕಲ್ಪವನ್ನು ಪುನರುಚ್ಚರಿಸಲಾಯಿತು.