Shubhashaya News

“ಭಕ್ತಿಯಿAದ ಭಗವಂತನನ್ನು ಕರೆದರೆ ಆತನೇ ನಮ್ಮ ನಡುವೆ ಬಂದು ರಕ್ಷಣೆ ಮಾಡುತ್ತಾನೆ.

ಜಿಡಗಾ ಮಲ್ಲಿಕಾರ್ಜುನ ದೇವಸ್ಥಾನ ಶಿಖರ–ಕಳಸಾರೋಪಣ ಮಹೋತ್ಸವ: ಭಕ್ತಿ, ಏಕತೆ ಮತ್ತು ತಾಯಂದಿರ ಸೇವೆಗೆ ಡಾ. ಮುರುಘರಾಜೇಂದ್ರ ಸ್ವಾಮಿಗಳ ಪ್ರಶಂಸೆ

ಆಳಂದ: ಜಿಡಗಾ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ನೂತನ ಶಿಖರ, ಕಳಸಾರೋಹಣ ಲೋಕಾರ್ಪಣೆ ಸಮಾರಂಭ ಸಾನ್ನಿಧ್ಯ ವಹಿಸಿದ್ದ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

 

ಆಳಂದ: ಜಿಡಗಾ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಸಮಾರಂಭದಲ್ಲಿ ನೂರಾರು ತಾಯಂದಿರಿಗೆ ಉಡಿ ತುಂಬಲಾಯಿತು.

ಆಳಂದ: ಭಕ್ತಿಯಿಂದ ಭಗವಂತನನ್ನು ಕರೆದರೆ ಆತನೇ ನಮ್ಮ ನಡುವೆ ಬಂದು ರಕ್ಷಣೆ ಮಾಡುತ್ತಾನೆ. ಆದರ ಆತನ ಸ್ಮರಣೆ ಮತ್ತು ಸೇವೆಯ ಆತನ ಹೃದಯ ತಟ್ಟುವಂತೆ ನಾವು ಸಮರ್ಪಣೆಯಿಂದ ನಡೆದರೆ ಇದೆಯಲ್ಲವೂ ಸಾಧ್ಯ ಎಂದು ಜಿಡಗಾ, ಮುಗಳಖೋಡ ಮಠದ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಜಿಡಗಾ ಗ್ರಾಮದಲ್ಲಿ ನಡೆದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ನೂತನ ಶಿಖರ ಉದ್ಘಾಟನೆ ಹಾಗೂ ಕಳಸಾರೋಪಣ ಮಹೋತ್ಸವವು ಭಕ್ತಿ, ಸಮರ್ಪಣೆ ಮತ್ತು ಗ್ರಾಮೀಣ ಏಕತೆಯ ಪ್ರತೀಕವಾಗಿ ಭವ್ಯವಾಗಿ ಸೋಮವಾರ ನಡೆದ ಧಾರ್ಮಿಕ ಸಮಾರಂಭದ ಸಾನ್ನಿಧ್ಯ ವಹಿಸಿ ದೇವಸ್ಥಾನದಿಂದ ನೀಡಿದ ನಾಣ್ಯದ ತುಲಾಭಾರ ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು.
“ಭಕ್ತಿಯಿಂದ ಭಗವಂತನನ್ನು ಕರೆದರೆ ಆತನೇ ನಮ್ಮ ನಡುವೆ ಬಂದು ರಕ್ಷಣೆ ಮಾಡುತ್ತಾನೆ. ಶ್ರೀಶೈಲದಲ್ಲಿರುವ ಮಲ್ಲಿಕಾರ್ಜುನ ಇಂದು ಜಿಡಗಾ ಗ್ರಾಮದಲ್ಲೇ ನೆಲೆಸಿದ್ದಾನೆ ಎಂಬ ಭಾವನೆ ಜನರಲ್ಲಿ ಮೂಡಿರುವುದು ಈ ಕಾರ್ಯಕ್ರಮದ ವೈಶಿಷ್ಟ್ಯ,” ಎಂದು ಹೇಳಿದರು.
ಗ್ರಾಮದ ಭಕ್ತರು ಹಾಗೂ ವಿಶೇಷವಾಗಿ ಗಂಡನೆ ಮನೆಗೆ ಹೋದ ತಾಯಂದಿರ ಭಕ್ತಿಸೇವೆ ಬಗ್ಗೆ ಪ್ರಶಂಸಿಸಿದ ಅವರು, “ಶಿಖರ ನಿರ್ಮಾಣ ಮತ್ತು ಕಳಸಾರೋಪಣವಾದ ಊರಿಗೆ ಎಂದಿಗೂ ಅನ್ನ-ನೀರಿನ ಕೊರತೆ ಉಂಟಾಗುವುದಿಲ್ಲ ಎಂಬುದು ಪರಂಪರೆಯ ನಂಬಿಕೆ. ಇಂದು ಜಿಡಗಾ ಗ್ರಾಮದಲ್ಲಿ ಐಶ್ವರ್ಯ ಮತ್ತು ಸಮೃದ್ಧಿಯ ವಾತಾವರಣ ಕಂಡುಬರುತ್ತಿರುವುದು ಅದಕ್ಕೆ ಸಾಕ್ಷಿ,” ಎಂದು ಹೇಳಿದರು.
ತವರು ಮನೆಯಿಂದ ದೂರವಿದ್ದರೂ, ತಮ್ಮ ಶಕ್ತಿಗೆ ತಕ್ಕಂತೆ ಕಾಣಿಕೆ ನೀಡಿ ದೇವಸ್ಥಾನದ ಕಾರ್ಯಕ್ಕೆ ಕೈಜೋಡಿಸಿದ ಹೆಣ್ಮಕ್ಕಳ ಸೇವೆಯನ್ನು ಅವರು ವಿಶೇಷವಾಗಿ ಮೆಚ್ಚಿದರು. “ಒಂದು ಸಣ್ಣ ದೀಪವೂ ಕತ್ತಲೆಯನ್ನು ಓಡಿಸಬಲ್ಲದು. ಅದೇ ರೀತಿ ನಿಮ್ಮ ಪ್ರತಿಯೊಂದು ಸೇವೆಯೂ ಸಮಾಜದಲ್ಲಿ ಬೆಳಕನ್ನು ಹರಡುತ್ತದೆ. ನೀವು ನೀಡಿದ ಕಾಣಿಕೆಗಳು ಕೇವಲ ದೇಣಿಗೆಗಳಲ್ಲ, ಅದು ಭಕ್ತಿ ಮತ್ತು ಪುಣ್ಯದ ಸಂಕೇತ,” ಎಂದು ಶ್ರೀಗಳು ಹೇಳಿದರು.
ಜಿಡಗಾ ಕ್ಷೇತ್ರದ ಪವಿತ್ರತೆಯ ಕುರಿತು ಉಲ್ಲೇಖಿಸಿದ ಸ್ವಾಮಿಗಳು, ಲಿಂ.ಶಿವಯೋಗಿ ಸಿದ್ಧರಾಮೇಶ್ವರ ಪಾದಸ್ಪರ್ಶ ಪಡೆದ ಈ ಪುಣ್ಯಭೂಮಿಗೆ ಮಹಾತ್ಮರು ಆಗಮಿಸುವುದು ಸಹಜ. ಈ ಗ್ರಾಮವು ಭಕ್ತಿಪರಂಪರೆಯ ಕೇಂದ್ರವಾಗಿ ಬೆಳೆದಿದೆ,” ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಅಭಿವೃದ್ಧಿಗೆ ಕೈಜೋಡಿಸಿದ ಎಲ್ಲ ಭಕ್ತರಿಗೆ ಆಶೀರ್ವಾದ ನೀಡಿದ ಅವರು, “ಒಬ್ಬರಾಗಿ ಬದುಕುವುದಕ್ಕಿಂತ ಎಲ್ಲರೂ ಸೇರಿ ಬದುಕುವುದರಲ್ಲಿ ಶಾಂತಿ, ನೆಮ್ಮದಿ ಮತ್ತು ಸಮೃದ್ಧಿ ಇದೆ. ಈ ಏಕತೆಯೇ ಜಿಡಗಾ ಗ್ರಾಮದ ಶಕ್ತಿ,” ಎಂದು ಅವರು ಹೇಳಿದರು.
ಆಗಮಿಸಿದ್ದ ಚಿನ್ಮಯಗಿರಿಯ ಮಹಾಂತೇಶ್ವರ ಮಠದ ಸಿದ್ಧರಾಮ ಶಿವಾಚಾರ್ಯರು, ಮಾದನಹಿಪ್ಪರಗಾದ ಶ್ರೀ ಶಿವಲಿಂಗೇಶ್ವರ ವಿರಕ್ತ ಮಠದ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮಿಗಳು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯಕಾರಣಿ ಸದಸ್ಯ ಶರಣಬಸಪ್ಪ ಜಿಡಗಾ, ಕೃಷಿ ಉದ್ಯಮಿ ರಾಜಶೇಖರ ಪಾಟೀಲ, ಶಂಕರರಾವ ದೇಶಮುಖ, ಮಲ್ಲಿನಾಥ ಹತ್ತರಕಿ, ಈರಣ್ಣಾ ಹತ್ತರಕಿ, ರಾಜಶೇಖರ ಪಾಟೀಲ ಚಿತಲಿ, ಗುರುಶರಣ ಪಾಟೀಲ ಕೊರಳ್ಳಿ, ರೇವಣಸಿದ್ಧಪ್ಪ ನಾಗೂರೆ, ಗ್ರಾಮದ ದೇವರಾಯ ಜವಳಿ, ದೇವಸ್ಥಾನ ಕಮೀಟಿ ಅಧ್ಯಕ್ಷ ಹಣಮಂತರಾಯ ಹಣಮಶೆಟ್ಟಿ, ಉಪಾಧ್ಯಕ್ಷ ಭೀಮಾಶಂಕರ ಎಸ್. ಹಣಮಶೆಟ್ಟಿ, ಲಾಡಪ್ಪ ಹಣಮಶೆಟ್ಟಿ, ಶರಣಪ್ಪ ಯಾದವಾಡ, ಕಲ್ಯಾಣರಾವ್ ಪಾಟೀಲ ಅನೇಕರಿದ್ದರು.
ನೂರಾರು ತಾಯಂದಿರಿಗೆ ದೇವಸ್ಥಾನದ ಹಣಮಶೆಟ್ಟಿ ಪರಿವಾರದವರಿಂದ ಸೀರೆ ಕುಪ್ಪಸದೊಂದಿಗೆ ಉಡಿ ತುಂಬಲಾಯಿತು. ಮಹೋತ್ಸವದಲ್ಲಿ ಗ್ರಾಮಸ್ಥರು, ಮಹಿಳೆಯರು ಮತ್ತು ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.

Comments are closed.

Don`t copy text!