ಆಕಾಶವನ್ನು ನೋಡುವ ಭರದಲ್ಲಿ ಕಾಲಬುಡದಲ್ಲಿರುವ ಹುತ್ತವನ್ನು ಮರೆಯುವುದು ಮನುಷ್ಯ ಸಹಜ ಗುಣ. ಕೆ-ಸೆಟ್ (KSET) ಪರೀಕ್ಷೆ ಎದುರಿಸುವ ಬಹುಪಾಲು ಅಭ್ಯರ್ಥಿಗಳ ಕತೆಯೂ ಇದೇ ಆಗಿದೆ. ತಮ್ಮ ಸ್ನಾತಕೋತ್ತರ ವಿಷಯದ (ಪೇಪರ್-2) ದಪ್ಪ ದಪ್ಪ ಗ್ರಂಥಗಳನ್ನು ತಬ್ಬಿಕೊಂಡು ಮಲಗುವ ಇವರು, ‘ಪೇಪರ್-1’ (ಸಾಮಾನ್ಯ ಪತ್ರಿಕೆ) ಎನ್ನುವ ಸಂಜೀವಿನಿಯನ್ನು ಅಕ್ಷಮ್ಯವಾಗಿ ಕಡೆಗಣಿಸುತ್ತಾರೆ. ನೆನಪಿರಲಿ, ನಿಮ್ಮ ಐಚ್ಛಿಕ ವಿಷಯ ನಿಮ್ಮನ್ನು ಪರೀಕ್ಷೆಯ ಅಖಾಡಕ್ಕೆ ಇಳಿಸುವ ಅರ್ಹತೆ ನೀಡಿದರೆ, ಪೇಪರ್-1 ನಿಮ್ಮನ್ನು ಗೆಲುವಿನ ದಡ ಸೇರಿಸುವ, ಕಿರೀಟ ತೊಡಿಸುವ ಏಕೈಕ ನಾವೆಯಾಗಿದೆ.
ಬೆಳಗಿನಿಂದ ಸಂಜೆವರೆಗೆ ಶಾಲೆಯ ಗದ್ದಲ, ಕಡತಗಳ ವಿಲೇವಾರಿ, ಮನೆಗೆ ಬಂದರೆ ಸಂಸಾರದ ಜವಾಬ್ದಾರಿ, ಅತ್ತಿಂದಿತ್ತ ಓಡಾಡುವ ಪುಟ್ಟ ಮಕ್ಕಳ ಆರೈಕೆ… ಇವೆಲ್ಲದರ ನಡುವೆ ಪುಸ್ತಕ ಹಿಡಿದು ಕೂರುವುದೇ ಒಂದು ದೊಡ್ಡ ಸಾಹಸ. ಹೌದು, ಜೀವನದ ಈ ವಾಸ್ತವಿಕ ಜಂಜಾಟಗಳ ನಡುವೆ ಕನಸೊಂದನ್ನು ಬೆನ್ನಟ್ಟುವುದು ಸುಲಭವಲ್ಲ. “ನನಗೆ ಓದಲು ಎಲ್ಲಿ ಸಮಯವಿದೆ?” ಎಂಬ ಹತಾಶೆ ಕಾಡುವುದು ಸಹಜ. ಆದರೆ, ಇತಿಹಾಸ ಸೃಷ್ಟಿಸಿದವರಾರೂ ದಿನಕ್ಕೆ 48 ಗಂಟೆಗಳನ್ನು ಪಡೆದು ಬಂದವರಲ್ಲ. ಇಲ್ಲಿ ಬೇಕಾಗಿರುವುದು ರಾತ್ರಿ-ಹಗಲು ಎನ್ನದೆ ಮಾಡುವ ಕತ್ತೆ ದುಡಿಮೆಯಲ್ಲ, ಗುರಿಯೆಡೆಗಿನ ಸ್ಪಷ್ಟತೆ ಮತ್ತು ಹದ್ದಿನ ಕಣ್ಣಿನಂತಹ ‘ಸ್ಮಾರ್ಟ್ ಸ್ಟಡಿ’.
‘ಬೀಜವೊಂದು ಮರವಾಗಿ ಬೆಳೆಯಲು ಅದಕ್ಕೆ ಮಣ್ಣಿನ ಕತ್ತಲೆಯೂ ಬೇಕು, ಸೂರ್ಯನ ಬೆಳಕೂ ಬೇಕು.’ ನಿಮ್ಮ ಶ್ರಮ ಕತ್ತಲೆಯಾದರೆ, ತಂತ್ರಗಾರಿಕೆ ಸೂರ್ಯನ ಬೆಳಕಾಗಿದೆ. ಪೇಪರ್-1 ರಲ್ಲಿ ಗೆಲ್ಲಲು ಇಲ್ಲಿವೆ ಕೆಲವು ರಣತಂತ್ರಗಳು:
1. ಹತ್ತು ತಲೆಗಳ ರಾವಣನಲ್ಲ, ಹತ್ತು ಮೆಟ್ಟಿಲುಗಳ ಸೋಪಾನ:
ಪೇಪರ್-1 ರ ಪಠ್ಯಕ್ರಮದಲ್ಲಿ ಒಟ್ಟು 10 ಘಟಕಗಳಿವೆ. ಬೋಧನಾ ಸಾಮರ್ಥ್ಯದಿಂದ ಹಿಡಿದು, ಪರಿಸರ, ಉನ್ನತ ಶಿಕ್ಷಣ ವ್ಯವಸ್ಥೆಯವರೆಗೆ ಇದು ವಿಸ್ತರಿಸಿದೆ. ಮೊದಲು ಈ ಸಿಲಬಸ್ ಅನ್ನು ನಿಮ್ಮ ಮನಸ್ಸಿನಲ್ಲಿ ಅಚ್ಚೊತ್ತಿಕೊಳ್ಳಿ. ಇದೊಂದು ಹತ್ತು ತಲೆಗಳ ರಾವಣನೆಂದು ಹೆದರಬೇಡಿ. ಪ್ರತಿಯೊಂದು ಘಟಕದಿಂದಲೂ ತಲಾ 5 ಪ್ರಶ್ನೆಗಳು ಬರುತ್ತವೆ ಎಂಬುದು ಪರೀಕ್ಷೆಯ ನೀಲನಕ್ಷೆ. ಯಾವುದೋ ಒಂದೇ ಘಟಕದಲ್ಲಿ ಪಿಎಚ್‌ಡಿ ಮಾಡುವಷ್ಟು ಓದುವುದಕ್ಕಿಂತ, ಹತ್ತೂ ಘಟಕಗಳ ಮೂಲ ಪರಿಕಲ್ಪನೆಗಳನ್ನು ಸ್ಪಷ್ಟಪಡಿಸಿಕೊಳ್ಳುವುದು ಜಾಣತನ.
2. ಬೋಧನೆ ಮತ್ತು ಸಂಶೋಧನೆ: ನಿಮ್ಮ ಬದುಕಿನ ಪ್ರತಿಬಿಂಬ
Teaching Aptitude ಮತ್ತು Research Aptitude ಘಟಕಗಳು ನಿಮ್ಮ ವೃತ್ತಿಜೀವನದ ಪ್ರತಿಬಿಂಬವಿದ್ದಂತೆ. ತರಗತಿಯಲ್ಲಿ ಪಾಠ ಮಾಡುವಾಗ ಒಬ್ಬ ಶಿಕ್ಷಕ ಎದುರಿಸುವ ಸವಾಲುಗಳು, ವಿದ್ಯಾರ್ಥಿಯ ಮನೋವಿಜ್ಞಾನ, ಇವುಗಳೇ ಅಲ್ಲಿ ಪ್ರಶ್ನೆಗಳಾಗಿ ಬರುತ್ತವೆ. ನಿಮ್ಮ ದೈನಂದಿನ ಬೋಧನಾ ಅನುಭವವನ್ನು ಇಲ್ಲಿನ ಸೈದ್ಧಾಂತಿಕ ಚೌಕಟ್ಟಿಗೆ ಅಳವಡಿಸಿ ನೋಡಿ. ಉತ್ತರ ತಾನಾಗಿಯೇ ಹೊಳೆಯುತ್ತದೆ.
3. ಡೇಟಾ ಇಂಟರ್ಪ್ರಿಟೇಷನ್ (DI) ಮತ್ತು ತಾರ್ಕಿಕತೆ: ಒಲಿದರೆ ನಾರಿ, ಮುನಿದರೆ ಮಾರಿ
ಅನೇಕ ಸಾಹಿತ್ಯ ಮತ್ತು ಕಲಾ ವಿಭಾಗದ ವಿದ್ಯಾರ್ಥಿಗಳು ಗಣಿತವೆಂದರೆ ಮಾರುದ್ದ ದೂರ ಓಡುತ್ತಾರೆ. ಆದರೆ, ಪೇಪರ್-1 ರಲ್ಲಿ DI ಮತ್ತು Logical Reasoning ಅತ್ಯಂತ ಸುಲಭವಾಗಿ ಸ್ಕೋರ್ ಮಾಡಬಹುದಾದ ಜಾಗ. ಶೇಕಡಾವಾರು, ಸರಾಸರಿ ಮತ್ತು ಅನುಪಾತ – ಕೇವಲ ಈ ಮೂರು ಪರಿಕಲ್ಪನೆಗಳನ್ನು ಕರಗತ ಮಾಡಿಕೊಂಡರೆ, 10 ರಿಂದ 15 ಅಂಕಗಳು ನಿಮ್ಮ ಜೇಬಿನಲ್ಲಿ ಇದ್ದಂತೆ. ನಿತ್ಯ ಕೇವಲ 20 ನಿಮಿಷ ಹಳೆಯ ಪ್ರಶ್ನೆಪತ್ರಿಕೆಗಳ ಲೆಕ್ಕ ಬಿಡಿಸಿ, ಭಯ ತಾನಾಗಿಯೇ ಓಡಿಹೋಗುತ್ತದೆ.
4. ಕಂಠಪಾಠವಲ್ಲ, ಗ್ರಹಿಕೆ (Comprehension) ಮುಖ್ಯ:
ಪ್ಯಾರಾಗ್ರಾಫ್ ಓದಿ ಉತ್ತರಿಸುವ ವಿಭಾಗವು ನಿಮ್ಮ ಓದುವ ವೇಗ ಮತ್ತು ಅರ್ಥೈಸಿಕೊಳ್ಳುವ ಸಾಮರ್ಥ್ಯವನ್ನು ಪರೀಕ್ಷಿಸುತ್ತದೆ. ಇದನ್ನು ಅಭ್ಯಾಸ ಮಾಡಲು ಪ್ರತಿದಿನ ಒಂದು ಉತ್ತಮ ಸಂಪಾದಕೀಯ ಲೇಖನವನ್ನು ಓದುವ ರೂಢಿ ಇಟ್ಟುಕೊಳ್ಳಿ. ಸಾಲುಗಳ ನಡುವಿನ ಅರ್ಥವನ್ನು (Reading between the lines) ಗ್ರಹಿಸುವ ಕಲೆ ಸಿದ್ಧಿಸಿದರೆ, ಈ ವಿಭಾಗದಲ್ಲಿ ಪೂರ್ಣ ಅಂಕ ಗ್ಯಾರಂಟಿ.
5. ಹಳೆಯ ಪ್ರಶ್ನೆಪತ್ರಿಕೆಗಳ ‘ಶವಪರೀಕ್ಷೆ’:
ಕಳೆದ 10 ವರ್ಷಗಳ KSET ಮತ್ತು UGC NET ಪೇಪರ್-1 ಪ್ರಶ್ನೆಪತ್ರಿಕೆಗಳನ್ನು ಸಂಗ್ರಹಿಸಿ. ಕೇವಲ ಸರಿಯಾದ ಉತ್ತರ ಯಾವುದು ಎಂದು ನೋಡುವುದಲ್ಲ; ಉಳಿದ ಮೂರು ಆಯ್ಕೆಗಳು ಏಕೆ ತಪ್ಪಾಗಿವೆ ಎಂಬುದನ್ನು ವಿಶ್ಲೇಷಿಸಿ. ಪರೀಕ್ಷಕನ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಇದೊಂದೇ ದಾರಿ.
ಮಿತವಾಕ್ಯದಲ್ಲಿ ಹೇಳಬೇಕೆಂದರೆ, ಪೇಪರ್-1 ಅನ್ನು ಕಡೆಗಣಿಸುವುದು ಯುದ್ಧಭೂಮಿಯಲ್ಲಿ ಗುರಾಣಿಯನ್ನು ಬಿಸಾಡಿದಂತೆ. ಕನಿಷ್ಠ 75-80 ಅಂಕಗಳನ್ನು ಇದರಲ್ಲಿ ಗಳಿಸುವ ಗುರಿ ನಿಮ್ಮದಾಗಿರಲಿ. ನಿಮ್ಮ ಕನಸು ಮತ್ತು ವಾಸ್ತವದ ನಡುವೆ ಇರುವುದು ‘ಪ್ರಯತ್ನ’ ಎಂಬ ಸೇತುವೆ ಮಾತ್ರ. ಟೀಕೆ ಮಾಡುವವರ ಬಗ್ಗೆ, ‘ಕಾಂಪಿಟೇಷನ್ ಬಹಳ ಇದೆ’ ಎಂದು ಹೆದರಿಸುವವರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ನಿಮ್ಮ ಸ್ಪರ್ಧೆ ನಿನ್ನೆಯ ‘ನಿಮ್ಮ’ ಜೊತೆಗೆ ಮಾತ್ರ. ಎದ್ದು ನಿಲ್ಲಿ, ದೃಢವಾಗಿ ಹೆಜ್ಜೆ ಇಡಿ. ಈ ಬಾರಿಯ ಕೆ-ಸೆಟ್ ಕಣದಲ್ಲಿ ಜಯಭೇರಿ ನಿಮ್ಮದೇ ಆಗಲಿ! ಕಾದಿದೆ ಗೆಲುವು, ಮುನ್ನುಗ್ಗಿ!
ಶಿವರಾಜ ಸೂ. ಸಣಮನಿ
ಲೇಖಕರು: ಮದಗುಣಕಿ
M.A.,B.Ed.,KSET
Comments are closed.