ಕೆ-ಸೆಟ್ ಸಾಮಾನ್ಯ ಪತ್ರಿಕೆಯ (ಪೇಪರ್-೧) ಪಠ್ಯಕ್ರಮವನ್ನು ಕೈಗೆತ್ತಿಕೊಂಡಾಗ ಮೊದಲಿಗೆ ಕಣ್ಣಿಗೆ ರಾಚುವ ಅಧ್ಯಾಯವೇ ‘ಬೋಧನಾ ಸಾಮರ್ಥ್ಯ’. ಬಹಳಷ್ಟು ಅಭ್ಯರ್ಥಿಗಳು ಈ ಅಧ್ಯಾಯವನ್ನು ಯಾವುದೋ ಗಣಿತದ ಸೂತ್ರದಂತೆ, ಅಥವಾ ಇತಿಹಾಸದ ಇಸವಿಗಳಂತೆ ಕಂಠಪಾಠ ಮಾಡಲು ಹೋಗಿ ಎಡವುತ್ತಾರೆ. ಆದರೆ ವಾಸ್ತವದಲ್ಲಿ, ಈ ಅಧ್ಯಾಯವು ಪುಸ್ತಕದ ಬದನೆಕಾಯಿಯಲ್ಲ. ಇದು ಶಿಕ್ಷಕನೊಬ್ಬನ ಅಂತರಂಗದ, ಆತನ ದೈನಂದಿನ ಕಾಯಕದ ಜೀವಂತ ದಾಖಲೆಯಾಗಿದೆ.
‘ಶಿಕ್ಷಣವೆಂದರೆ ಮನುಷ್ಯನೊಳಗಿರುವ ಪರಿಪೂರ್ಣತೆಯನ್ನು ಹೊರತರುವುದು.’ ಈ ಮಾತು ಎಷ್ಟು ಸತ್ಯವೋ, ಕೆ-ಸೆಟ್‌ನ ಮೊದಲ ಅಧ್ಯಾಯವನ್ನು ಎದುರಿಸುವ ತಂತ್ರಗಾರಿಕೆಯೂ ಅಷ್ಟೇ ಸತ್ಯ. ಈ ಅಧ್ಯಾಯವನ್ನು ಕರಗತ ಮಾಡಿಕೊಳ್ಳಲು ಬೇಕಾಗಿರುವುದು ಕೇವಲ ಸ್ಮರಣಶಕ್ತಿಯಲ್ಲ, ಬದಲಾಗಿ ಒಬ್ಬ ‘ಆದರ್ಶ ಶಿಕ್ಷಕನ ಮನಸ್ಥಿತಿ’.
ಈ ಅಧ್ಯಾಯವನ್ನು ಭೇದಿಸಲು ಮತ್ತು ಗರಿಷ್ಠ ಅಂಕಗಳನ್ನು ಕಲೆಹಾಕಲು ಇಲ್ಲಿವೆ ನೋಡಿ ಕೆಲವು ಮೂಲಭೂತ ಅಸ್ತ್ರಗಳು:
1. ಅನುಭವವೇ ಪಠ್ಯ: ತರಗತಿಯ ವಾಸ್ತವವನ್ನು ಗ್ರಹಿಸಿ
‘ಬೋಧನಾ ಸಾಮರ್ಥ್ಯ’ದಲ್ಲಿ ಕೇಳಲಾಗುವ ಪ್ರಶ್ನೆಗಳು ನೇರವಾಗಿರುವುದಿಲ್ಲ, ಅವು ಅನ್ವಯಿಕ ಸ್ವರೂಪದಲ್ಲಿರುತ್ತವೆ. ಒಂದು ಹಳ್ಳಿಯ, ಉದಾಹರಣೆಗೆ ಒಂದು ಸರ್ಕಾರಿ ಶಾಲೆಯ ತರಗತಿಯಲ್ಲಿ ಕುಳಿತಿರುವ ನಾನಾ ಹಿನ್ನೆಲೆಯ, ಬೇರೆ ಬೇರೆ ಗ್ರಹಿಕಾ ಸಾಮರ್ಥ್ಯವುಳ್ಳ ಮುಗ್ಧ ಮಕ್ಕಳನ್ನು ಒಟ್ಟುಗೂಡಿಸಿ ಪಾಠ ಮಾಡುವುದಿದೆಯಲ್ಲ, ಅದೇ ‘ಬೋಧನಾ ಸಾಮರ್ಥ್ಯ’ದ ನಿಜವಾದ ಒರೆಗಲ್ಲು. ಪ್ರಶ್ನೆಗಳನ್ನು ಓದುವಾಗ ನಿಮ್ಮನ್ನು ನೀವು ಆ ತರಗತಿಯ ಶಿಕ್ಷಕನ ಸ್ಥಾನದಲ್ಲಿರಿಸಿಕೊಳ್ಳಿ. “ಒಬ್ಬ ವಿದ್ಯಾರ್ಥಿ ತರಗತಿಯಲ್ಲಿ ಗದ್ದಲ ಮಾಡುತ್ತಿದ್ದರೆ ಶಿಕ್ಷಕನಾಗಿ ನಿಮ್ಮ ಪ್ರತಿಕ್ರಿಯೆ ಏನಾಗಿರಬೇಕು?” ಎಂಬ ಪ್ರಶ್ನೆಗೆ, ನಿಮ್ಮೊಳಗಿನ ಕರುಣಾಮಯಿ, ಮಾರ್ಗದರ್ಶಕ ಶಿಕ್ಷಕನಿಂದ ಉತ್ತರ ಕಂಡುಕೊಳ್ಳಿ.
2. ಬಿ.ಎಡ್ ಜ್ಞಾನದ ಮರುಸ್ಮರಣೆ: ಬುನಾದಿ ಗಟ್ಟಿಯಿರಲಿ
ನೀವು ಈಗಾಗಲೇ ಶಿಕ್ಷಣಶಾಸ್ತ್ರದಲ್ಲಿ ಪಡೆದಿರುವ ಪದವಿ ಕೇವಲ ಸರ್ಟಿಫಿಕೇಟ್‌ಗೆ ಸೀಮಿತವಾಗದಿರಲಿ. ಈ ಅಧ್ಯಾಯದ ಜೀವಾಳವೇ ಶೈಕ್ಷಣಿಕ ಮನೋವಿಜ್ಞಾನ. ಬೋಧನೆಯ ಸ್ವರೂಪ, ಉದ್ದೇಶಗಳು, ಕಲಿಯುವವನ ಗುಣಲಕ್ಷಣಗಳು (ಹದಿಹರೆಯ ಮತ್ತು ವಯಸ್ಕ ಕಲಿಯುವವರು) ಇವೆಲ್ಲವೂ ನಿಮ್ಮ ಬಿ.ಎಡ್ ವ್ಯಾಸಂಗದ ಭಾಗವೇ ಆಗಿದ್ದವು. ಕೇವಲ ಆ ಹಳೆಯ ನೆನಪುಗಳ ಮೇಲೆ ಬಿದ್ದಿರುವ ದೂಳನ್ನು ಕೊಡವಿರಿ. ಬೋಧನಾ ವಿಧಾನಗಳಾದ ಶಿಕ್ಷಕ-ಕೇಂದ್ರಿತ ಮತ್ತು ವಿದ್ಯಾರ್ಥಿ-ಕೇಂದ್ರಿತ ವಿಧಾನಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ತಿಳಿದುಕೊಳ್ಳಿ.
3. ಬೋಧನಾ ಉಪಕರಣಗಳು ಮತ್ತು ನವೀನ ವ್ಯವಸ್ಥೆಗಳು:
ಕಾಲ ಬದಲಾದಂತೆ ಬೋಧನಾ ವಿಧಾನಗಳೂ ಬದಲಾಗಿವೆ. ಕೇವಲ ಚಾಕ್ ಪೀಸ್ ಮತ್ತು ಬ್ಲ್ಯಾಕ್ ಬೋರ್ಡ್‌ಗೆ ಶಿಕ್ಷಣ ಸೀಮಿತವಾಗಿಲ್ಲ. ಇಂದಿನ ಡಿಜಿಟಲ್ ಯುಗದಲ್ಲಿ ಸ್ವಯಂ (SWAYAM), ಮೂಕ್ಸ್ (MOOCs) ಮುಂತಾದ ಆನ್‌ಲೈನ್ ವೇದಿಕೆಗಳ ಕುರಿತು ಕಡ್ಡಾಯವಾಗಿ ಒಂದೆರಡು ಪ್ರಶ್ನೆಗಳು ಬಂದೇ ಬರುತ್ತವೆ. ಹಾಗೆಯೇ, ‘ಸಮಗ್ರ ಶಿಕ್ಷಾ ಅಭಿಯಾನ’ದಂತಹ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳು ಶಾಲೆಗಳಿಗೆ ಒದಗಿಸುವ ನವೀನ ಬೋಧನಾ ಉಪಕರಣಗಳನ್ನು ಮತ್ತು ಐಸಿಟಿ ಆಧಾರಿತ ಬೋಧನೆಯನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಬಹುದು ಎಂಬುದನ್ನು ಸಿಲಬಸ್ ದೃಷ್ಟಿಕೋನದಿಂದ ಓದಿಕೊಳ್ಳಿ.
4. ಮೌಲ್ಯಮಾಪನ ವ್ಯವಸ್ಥೆ:
ಇದು ಅತ್ಯಂತ ಪ್ರಮುಖವಾದ ಭಾಗ. ವಿದ್ಯಾರ್ಥಿಯ ಕಲಿಕೆಯನ್ನು ಅಳೆಯುವುದು ಹೇಗೆ? ರೂಪಣಾತ್ಮಕ ಮತ್ತು ಸಂಕಲನಾತ್ಮಕ ಮೌಲ್ಯಮಾಪನದ ನಡುವಿನ ಸೂಕ್ಷ್ಮ ವ್ಯತ್ಯಾಸಗಳೇನು? ಸಿಬಿಸಿಎಸ್ (Choice Based Credit System – CBCS) ಮತ್ತು ಕಂಪ್ಯೂಟರ್ ಆಧಾರಿತ ಪರೀಕ್ಷೆಗಳ (CBT) ಸಾಧಕ-ಬಾಧಕಗಳೇನು ಎಂಬುದರ ಕುರಿತು ನಿಮ್ಮದೇ ಆದ ‘ಶಾರ್ಟ್ ನೋಟ್ಸ್’ ಮಾಡಿಕೊಳ್ಳಿ.
ಗೆಲುವಿನ ಸ್ಟ್ರಾಟಜಿ (Strategy):
ಎಲಿಮಿನೇಷನ್ ತಂತ್ರ: ಬಹು ಆಯ್ಕೆಯ ಪ್ರಶ್ನೆಗಳಲ್ಲಿ ಸರಿಯಾದ ಉತ್ತರವನ್ನು ಹುಡುಕುವುದಕ್ಕಿಂತ, ತಪ್ಪು ಉತ್ತರಗಳನ್ನು ತೆಗೆದುಹಾಕುವುದು ಸುಲಭ. ನಕಾರಾತ್ಮಕವಾಗಿರುವ ಅಥವಾ ವಿದ್ಯಾರ್ಥಿಗೆ ಮಾರಕವಾಗಿರುವ ಆಯ್ಕೆಗಳನ್ನು ಮೊದಲು ಎಲಿಮಿನೇಟ್ ಮಾಡಿ.
ಕೀ-ವರ್ಡ್ಸ್ (Keywords) ಮೇಲೆ ಕಣ್ಣಿರಲಿ: ಪೆಡಗಾಜಿ (Pedagogy), ಆಂಡ್ರಗಾಜಿ (Andragogy), ಹ್ಯೂರಿಸ್ಟಿಕ್ (Heuristic) ಮುಂತಾದ ಪಾರಿಭಾಷಿಕ ಪದಗಳ ಅರ್ಥವನ್ನು ನಿಖರವಾಗಿ ತಿಳಿದುಕೊಂಡಿರಿ.
ಹಳೆಯ ಪ್ರಶ್ನೆಪತ್ರಿಕೆಗಳ ಅಧ್ಯಯನ: ಈ ಘಟಕದಿಂದ ಕಳೆದ ಐದು ವರ್ಷಗಳಲ್ಲಿ ಕೇಳಲಾದ ಪ್ರಶ್ನೆಗಳನ್ನು ಕಲೆಹಾಕಿ ಬಿಡಿಸಿರಿ. ಪ್ರಶ್ನೆಗಳ ಸ್ವರೂಪ ನಿಮಗೆ ಅರ್ಥವಾದರೆ, ಅರ್ಧ ಯುದ್ಧ ಗೆದ್ದಂತೆ.
ಕೊನೆಯ ಮಾತು:
ಸ್ನೇಹಿತರೆ, ಬೋಧನೆ ಎಂಬುದು ಕೇವಲ ಒಂದು ವೃತ್ತಿಯಲ್ಲ, ಅದೊಂದು ತಪಸ್ಸು. ಈ ಅಧ್ಯಾಯವು ನಿಮ್ಮೊಳಗಿನ ಆ ತಪಸ್ವಿಯನ್ನು ಪರೀಕ್ಷೆಗೊಳಪಡಿಸುತ್ತದೆ. ಯಾವುದೋ ಗೈಡ್‌ಗಳನ್ನು ಕುರುಡಾಗಿ ಓದುವುದನ್ನು ಬಿಟ್ಟು, ನಿಮ್ಮ ವೃತ್ತಿಜೀವನದ, ಬದುಕಿನ ಅನುಭವಗಳನ್ನು ಈ ಪಠ್ಯಕ್ಕೆ ಬೆಸೆಯಿರಿ. ಸಕಾರಾತ್ಮಕ ಚಿಂತನೆ, ವಿದ್ಯಾರ್ಥಿಯ ಬಗೆಗಿನ ಕಾಳಜಿ ಮತ್ತು ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ಸ್ಪಷ್ಟ ಅರಿವು. ಇವಿಷ್ಟಿದ್ದರೆ ‘ಬೋಧನಾ ಸಾಮರ್ಥ್ಯ’ ಘಟಕದಲ್ಲಿ ಐದಕ್ಕೆ ಐದೂ ಪ್ರಶ್ನೆಗಳನ್ನು ಸರಿಯಾಗಿ ಉತ್ತರಿಸುವುದು ಎಳ್ಳಷ್ಟೂ ಕಷ್ಟವಲ್ಲ.
ನಿಮ್ಮೊಳಗಿನ ಜ್ಞಾನದ ದೀವಿಗೆ ಇನ್ನಷ್ಟು ಪ್ರಕಾಶಮಾನವಾಗಿ ಬೆಳಗಲಿ. ಆತ್ಮವಿಶ್ವಾಸದಿಂದ ಅಧ್ಯಯನ ಮುಂದುವರಿಸಿ, ಯಶಸ್ಸು ಖಂಡಿತ ನಿಮ್ಮದಾಗುತ್ತದೆ!
ಶಿವರಾಜ ಸೂ. ಸಣಮನಿ
ಲೇಖಕರು: ಮದಗುಣಕಿ
M.A.,B.Ed.,KSET
Comments are closed.