Shubhashaya News

ಬಸವ ಜಯಂತಿಯಲ್ಲಿ ಬುದ್ಧ–ಬಸವ–ಅಂಬೇಡ್ಕರ ತತ್ವಗಳಿಗೆ ಗೌರವ ನೀಡಿ: ದತ್ತಾತ್ರೇಯ ಕುಡಕಿ ಮನವಿ

ದತ್ತಾತ್ರೆಯ ಕುಡಕಿ

ಆಳಂದ: ಕರ್ನಾಟಕದ ಸಾಂಸ್ಕೃತಿಕ ನಾಯಕ ಹಾಗೂ ವಿಶ್ವಗುರು ಬಸವಣ್ಣ ಅವರ ತತ್ವಾದರ್ಶಗಳು ಇಡೀ ಜಗತ್ತಿಗೆ ಮಾದರಿಯಾಗಿದ್ದು, ಜಾತಿ–ಧರ್ಮ–ವರ್ಗ–ವರ್ಣ ರಹಿತ ಸಮಸಮಾಜದ ಪರಿಕಲ್ಪನೆಯನ್ನು ಅವರು ನೀಡಿದ್ದರು ಎಂದು ದತ್ತಾತ್ರೇಯ ಕುಡಕಿ ಅಭಿಪ್ರಾಯಪಟ್ಟಿದ್ದಾರೆ.
ಈ ಕುರಿತು ಪ್ರಕಟಿಸಿದ ಹೇಳಿಕೆಯಲ್ಲಿ ಅವರು, ಬಸವಣ್ಣನವರು ಅಂತರ್ಜಾತಿ ವಿವಾಹಗಳಿಗೆ ಉತ್ತೇಜನ ನೀಡುವ ಮೂಲಕ ಮೇಲು–ಕೀಳು ಎಂಬ ಭೇದಭಾವ ನಿರ್ಮೂಲನೆಗೆ ಮುನ್ನುಡಿ ಬರೆದ ಮಹಾನ್ ಕ್ರಾಂತಿಕಾರಿಯಾಗಿದ್ದರು ಎಂದು ಹೇಳಿದ್ದಾರೆ. ಅವರ ತತ್ವಸಿದ್ಧಾಂತಗಳನ್ನು ನಿಜವಾಗಿ ಅಳವಡಿಸಿಕೊಂಡವರು ದಲಿತ ಸಮುದಾಯವಾಗಿದ್ದು, ದಲಿತರ ಮನೆಗಳಲ್ಲಿ ಹಾಗೂ ಕಾರ್ಯಕ್ರಮಗಳಲ್ಲಿ ಗೌತಮ ಬುದ್ಧ, ಬಸವಣ್ಣ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಇಟ್ಟು ಗೌರವಿಸುವುದು ಕಂಡುಬರುತ್ತದೆ ಎಂದು ತಿಳಿಸಿದ್ದಾರೆ.

ಲಿಂಗಾಯತ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, “ನಿಮ್ಮ ಮನೆಗಳು ಹಾಗೂ ಖಾಸಗಿ ಕಚೇರಿಗಳಲ್ಲಿ ಬುದ್ಧ ಮತ್ತು ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ಎಷ್ಟು ಪ್ರಮಾಣದಲ್ಲಿ ಅಳವಡಿಸಿಕೊಂಡಿದ್ದೀರಿ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು” ಎಂದು ಪ್ರಶ್ನಿಸಿದ್ದಾರೆ.
ಏಪ್ರಿಲ್ ೨೦ರಂದು ಬಸವ ಜಯಂತಿಯನ್ನು ರಾಜ್ಯದಾದ್ಯಂತ ಅದ್ದೂರಿಯಾಗಿ ಆಚರಿಸಲಾಗುವುದು ಸಂತಸದ ವಿಷಯವಾದರೂ, ಆ ದಿನ ಬುದ್ಧ–ಬಸವ–ಅಂಬೇಡ್ಕರರ ಭಾವಚಿತ್ರಗಳನ್ನು ಇರಿಸಿ ಗೌರವಿಸಿದರೆ ಮಾತ್ರ ಆಚರಣೆಗೆ ನಿಜವಾದ ಅರ್ಥ ಸಿಗುತ್ತದೆ ಎಂದು ಅವರು ಹೇಳಿದ್ದಾರೆ. ಈ ಮೂಲಕ ಲಿಂಗಾಯತ ಸಮುದಾಯದ ಮನಸ್ಸಿನಲ್ಲಿ ಯಾವುದೇ ಕಲ್ಮಷವಿಲ್ಲ ಎಂಬ ಸಂದೇಶ ಇತರ ಸಮುದಾಯಗಳಿಗೆ ತಲುಪುತ್ತದೆ ಎಂದಿದ್ದಾರೆ.
ಇನ್ನೂ, ಬಸವಣ್ಣನವರ ಆಶಯದಂತೆ ಜಯಂತಿ ದಿನದಂದು ಕನಿಷ್ಠ ಐದು ಜೋಡಿಗಳಾದರೂ ಅಂತರ್ಜಾತಿ ವಿವಾಹಗಳನ್ನು ನೆರವೇರಿಸಿದರೆ, ಅದು ಜಾತಿ ನಿರ್ಮೂಲನೆಗೆ ಸಂಕೇತವಾಗಿ ಉಳಿಯುತ್ತದೆ ಎಂದು ಸಲಹೆ ನೀಡಿದ್ದಾರೆ. ತತ್ವ–ಸಿದ್ಧಾಂತದ ಹಾದಿಯಲ್ಲಿ ನಡೆಯುವ ಪ್ರಗತಿಪರರಿಗೆ ಹಾಗೂ ಸಮುದಾಯದ ನಾಯಕರಿಗೆ ಇದರಿಂದ ಗೌರವ ಹೆಚ್ಚುತ್ತದೆ ಎಂದು ದತ್ತಾತ್ರೇಯ ಕುಡಕಿ ಹೇಳಿದ್ದಾರೆ.

Comments are closed.

Don`t copy text!