Shubhashaya News

ಜಿಲ್ಲೆಯಲ್ಲಿ ಬೇಸಿಗೆ ನೀರಿನ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಅಧ್ಯಯನ: ಸಿಇಒ ಭಂವರಸಿಂಗ್ ಮೀನಾ

ಆಳಂದ: ತಾಲೂಕಿನ ಹಲವು ಗ್ರಾಪಂಗಳಿಗೆ ಪ್ರವಾಸ ಕೈಗೊಂಡಿದ್ದ ಜಿಪಂ ಸಿಇಒ ಭಂವರಸಿಂಗ್ ಮೀನಾ ಅವರು ಸ್ಥಳೀಯ ಸಮಸ್ಯೆ ಮಾಹಿತಿ ಕಲೆಹಾಕಿದರು. ಇಒ ಮಾನಪ್ಪ ಕಟ್ಟಿಮನಿ, ಎಇಇ ಸಂಗಮೇಶ ಬಿರಾದಾರ ಇದ್ದರು.

ಆಳಂದ: “ಕಚೇರಿಯಲ್ಲಿ ಕುಳಿತುಕೊಂಡು ಆಡಳಿತ ನಡೆಸುವುದರಿಂದ ಸಮಸ್ಯೆಗಳ ಸಂಪೂರ್ಣ ಅರಿವು ಆಗುವುದಿಲ್ಲ; ಸ್ಥಳಕ್ಕೆ ಭೇಟಿ ನೀಡಿದಾಗ ಮಾತ್ರ ಜನರ ನೈಜ ತೊಂದರೆ ತಿಳಿಯುತ್ತದೆ” ಎಂದು ಜಿಲ್ಲಾ ಪಂಚಾಯತ್ ಸಿಇಒ ಭಂವರಸಿಂಗ್ ಮೀನಾ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರಗಿ ಜಿಲ್ಲೆಯಲ್ಲಿನ ಕುಡಿಯುವ ನೀರಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿನ ಕಳೆದ 10 ವರ್ಷಗಳಿಂದ ನೀರಿನ ಸಮಸ್ಯೆ ಇರುವ ಗ್ರಾಮಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಒಟ್ಟು 101 ಗ್ರಾಮ ಪಂಚಾಯತ್‍ಗಳಲ್ಲಿ ಸಮಸ್ಯೆ ಗುರುತಿಸಲಾಗಿದೆ. ಇದರಲ್ಲಿ ಆಳಂದ ತಾಲೂಕಿನ 33 ಗ್ರಾಮ ಪಂಚಾಯತ್‍ಗಳ 50ಕ್ಕೂ ಹೆಚ್ಚು ಹಳ್ಳಿಗಳಿಗೆ ಶಾಶ್ವತ ನೀರಿನ ವ್ಯವಸ್ಥೆ ಕಲ್ಪಿಸಲು ವಿಶೇಷ ಅಧ್ಯಯನ ನಡೆಸಿ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಜಿಲ್ಲೆಯ ಸುಮಾರು 500 ಪಂಚಾಯತ್‍ಗಳಿಗೆ 120 ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಒಬ್ಬರಿಗೆ ಎರಡು ಗ್ರಾಮ ಪಂಚಾಯತ್‍ಗಳ ಹೊಣೆಗಾರಿಕೆ ವಹಿಸಲಾಗಿದೆ. ಸಿಬ್ಬಂದಿ ಕೊರತೆಯ ನಡುವೆಯೂ ಆಡಳಿತವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು ಸವಾಲಾಗಿದೆ ಎಂದು ಅವರು ಹೇಳಿದರು. ಖಾಲಿ ಇರುವ ಹುದ್ದೆಗಳಿಗೆ ಅಧಿಕಾರಿಗಳ ವರ್ಗಾವಣೆಗೆ ಸರ್ಕಾರದ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಕುಡಿಯುವ ನೀರಿನ ಗುಣಮಟ್ಟವನ್ನು ಕಟ್ಟುನಿಟ್ಟಾಗಿ ಪರಿಶೀಲಿಸಿ ಸರಬರಾಜು ಮಾಡಲಾಗುತ್ತಿದೆ. ಕಲಬುರಗಿ ಜಿಲ್ಲೆಯ 261 ಗ್ರಾಮಗಳಿಗೆ ಇದುವರೆಗೆ ಭೇಟಿ ನೀಡಲಾಗಿದ್ದು, ಆಳಂದ ತಾಲೂಕಿನ ಹಲವು ಹಳ್ಳಿಗಳಿಗೆ ಸತತವಾಗಿ ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸಲಾಗಿದೆ. ಇಂದು ಕೂಡ 9 ಹಳ್ಳಿಗಳಿಗೆ ಭೇಟಿ ನೀಡಿದ್ದು, ವಾರದ ಹಿಂದೆ ಕೂಡ ಪರಿಶೀಲನೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ನಿರ್ದೇಶನ ನೀಡಿ, ಸಮಸ್ಯೆಗಳ ಪ್ರಾತ್ಯಕ್ಷಿಕೆ ಮೂಲಕ ಪರಿಹಾರ ಮಾರ್ಗಗಳನ್ನು ತಿಳಿಸಲಾಗುತ್ತಿದೆ. ಇದರಿಂದ ಕಾರ್ಯನಿರ್ವಹಣೆಯಲ್ಲಿ ಸ್ಪಷ್ಟತೆ ಬರುತ್ತದೆ ಮತ್ತು ಕೆಲಸ ಸುಗಮವಾಗುತ್ತದೆ ಎಂದು ಹೇಳಿದರು.
ಬೇಸಿಗೆ ನೀರಿನ ಸಮಸ್ಯೆ ತಡೆಗಟ್ಟಲು ಕ್ರಿಯಾ ಯೋಜನೆ ರೂಪಿಸಲಾಗಿದೆ. ಜಿಲ್ಲೆಯಿಂದ ಆರ್‍ಡಿಪಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅಗತ್ಯ ಅನುದಾನ ಮಂಜೂರಾದ ಬಳಿಕ ಕಾರ್ಯಗಳನ್ನು ವೇಗವಾಗಿ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲೆಯ ಎಲ್ಲಾ ಪಂಚಾಯತ್ ಅಧಿಕಾರಿಗಳನ್ನು ನೀರಿನ ಸಮಸ್ಯೆ ಪರಿಹಾರಕ್ಕಾಗಿ ಸಕ್ರಿಯಗೊಳಿಸಲಾಗಿದ್ದು, ಸಹಾಯವಾಣಿ ವ್ಯವಸ್ಥೆಯನ್ನೂ ಪ್ರಾರಂಭಿಸಲಾಗಿದೆ. ಜನರ ವಿಶ್ವಾಸ ಗಳಿಸಲು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುವುದು ಅತ್ಯಗತ್ಯ ಎಂದು ಅವರು ಒತ್ತಿಹೇಳಿದರು.
ಗ್ರಾಮ ಪಂಚಾಯತ್‍ಗಳಿಗೆ ಲಭಿಸುವ ಪ್ರಶಸ್ತಿ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಸರ್ಕಾರಿ ಅಧಿಕಾರಿಗಳು ಹೆಸರಿಗಾಗಿ ಕೆಲಸ ಮಾಡಬಾರದು. ಆದರೆ ಶ್ರಮಿಸಿದವರನ್ನು ಗುರುತಿಸಿ ಪ್ರಶಂಸಿಸುವುದು ಅಗತ್ಯ. ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು” ಎಂದು ಹೇಳಿದರು.

Comments are closed.

Don`t copy text!