Shubhashaya News

ಭೂತಮಟ್ಟದ ಕಾರ್ಯಕರ್ತರಿಗೂ ರಾಷ್ಟ್ರ ಮಟ್ಟದ ಅವಕಾಶವೇ ಬಿಜೆಪಿ ವೈಶಿಷ್ಟ್ಯ :ಜಗದೀಶ ಹಿರೇಮನಿ

ಆಳಂದನಲ್ಲಿ ಬಿಜೆಪಿ ಪ್ರಶಿಕ್ಷಣ ವರ್ಗ ಚಾಲನೆ

ಆಳಂದ: ಪಟ್ಟಣದಲ್ಲಿ ಆರಂಭಗೊಂಡ ಬಿಜೆಪಿ ಮಂಡಲ ಪ್ರಶಿಕ್ಷಣ ವರ್ಗವನ್ನು ಎಸ್‍ಐಆರ್ ರಾಜ್ಯ ಸಂಚಾಲಕ ಜಗದೀಶ ಹಿರೇಮನಿ ಉದ್ಘಾಟಿಸಿದರು. ಮಾಜಿ ಶಾಸಕ ಸುಭಾಷ ಗುತ್ತೇದಾರ, ಹರ್ಷಾನಂದ ಗುತ್ತೇದಾರ, ರಾಜಶೇಖರ ನಾಗಮೂರಿ, ಅಶೋಕ ಬಗಲಿ ಇತರರು ಇದ್ದರು.

ಆಳಂದ: ಭೂತಮಟ್ಟದಿಂದ ಹಿಡಿದು ರಾಷ್ಟ್ರ ಮಟ್ಟದವರೆಗೆ ಶ್ರಮಿಸುವ ಕಾರ್ಯಕರ್ತರಿಗೆ ಸಮರ್ಪಕ ಗುರುತಿನೊಂದಿಗೆ ಅವಕಾಶ ನೀಡುವ ಏಕೈಕ ರಾಜಕೀಯ ಪಕ್ಷ ಭಾರತಿ ಜನತಾ ಪಾರ್ಟಿ (ಬಿಜೆಪಿ) ಆಗಿದೆ ಎಂದು ಎಸ್‍ಐಆರ್ ಬಿಜೆಪಿ ರಾಜ್ಯ ಸಂಚಾಲಕ ಜಗದೀಶ ಹಿರೇಮನಿ ಹೇಳಿದರು.
ಪಟ್ಟಣದ ಎಸ್‍ಆರ್‍ಜಿ ಆಂಗ್ಲಮಾಧ್ಯಮ ಶಾಲಾ ಆವರಣದಲ್ಲಿ ಭಾರತಿಯ ಜನತಾ ಪಾರ್ಟಿ ಆಳಂದ ಮಂಡಲದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಪಂಡಿತ ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ–2026’ ಎರಡೂ ದಿನಗಳ ಮಂಡಲ ಮಟ್ಟದ ಪ್ರಶಿಕ್ಷಣ ವರ್ಗವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಗತವೈಭವವನ್ನು ಅನುಭವಿಸಿದ್ದರೂ, ತತ್ವಸಿದ್ಧಾಂತಗಳ ಕೊರತೆಯಿಂದ ಇಂದು ಹೀನಾಯ ಸ್ಥಿತಿಗೆ ತಲುಪಿದೆ ಎಂದು ಟೀಕಿಸಿದ ಅವರು, ಬಿಜೆಪಿಯು ಸ್ಪಷ್ಟವಾದ ತತ್ವಾಧಾರಿತ ಪಕ್ಷವಾಗಿದ್ದು, ಪಂಡಿತ ದೀನದಯಾಳ ಉಪಾಧ್ಯಾಯ, ಡಾ. ಶ್ಯಾಮ ಪ್ರಸಾದ ಮುಖರ್ಜಿ, ಎಲ್.ಕೆ. ಅಡ್ವಾನಿ, ಅಟಲ್ ಬಿಹಾರಿ ವಾಜಪೇಯಿ, ಮುರಳಿ ಮನೋಹರ ಜೋಷಿ ಮುಂತಾದ ಮಹಾನ್ ನಾಯಕರು ಪಕ್ಷ ನಿರ್ಮಾಣಕ್ಕೆ ಶ್ರಮಿಸಿದ ಇತಿಹಾಸವಿದೆ ಎಂದು ಹೇಳಿದರು.
ಪಕ್ಷದ ಮೂಲ ಮಟ್ಟದ ಕಾರ್ಯಕರ್ತರಿಂದಲೇ ರಾಷ್ಟ್ರ ಮಟ್ಟದ ನಾಯಕರಾಗುವ ಅವಕಾಶ ಬಿಜೆಪಿ ನೀಡುತ್ತಿರುವುದು ಅದರ ವೈಶಿಷ್ಟ್ಯ ಎಂದು ಹೇಳಿದ ಅವರು, ಸಾಮಾನ್ಯ ಕಾರ್ಯಕರ್ತನಿಗೂ ಉನ್ನತ ಹುದ್ದೆ ಸಿಗುವಂತಹ ವ್ಯವಸ್ಥೆ ಈ ಪಕ್ಷದಲ್ಲಿದೆ ಎಂದು ಅಭಿಪ್ರಾಯಪಟ್ಟರು.
ಪಕ್ಷ ಸಂಕಷ್ಟದಲ್ಲಿದ್ದ ಕಾಲದಲ್ಲಿ ಈ ಭಾಗದಲ್ಲಿ ಸಂಘಟನೆಯನ್ನು ಬಲಪಡಿಸಿದ ಡಿ.ಎ. ಚಿಲ್ಲಾಳ ಸೇರಿದಂತೆ ಅನೇಕ ಹಿರಿಯ ನಾಯಕರ ಸೇವೆಯನ್ನು ಸ್ಮರಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶ ಪುನರ್ ನಿರ್ಮಾಣದ ದಿಕ್ಕಿನಲ್ಲಿ ಬಿಜೆಪಿ ಸಾಗುತ್ತಿದೆ ಎಂದು ಹೇಳಿದರು. ಪಂಡಿತ ದೀನದಯಾಳ ಉಪಾಧ್ಯಾಯರ ‘ಅಂತ್ಯೋದಯ’ ತತ್ವ ಇಂದು ‘ಆತ್ಮನಿರ್ಭರ ಭಾರತ’ ಕನಸಿನ ರೂಪದಲ್ಲಿ ಕಾರ್ಯರೂಪ ಪಡೆಯುತ್ತಿದ್ದು, ಸಾಮಾನ್ಯ ನಾಗರಿಕರ ಸಮೃದ್ಧ ಜೀವನಕ್ಕೆ ಸರ್ಕಾರ ಒತ್ತು ನೀಡುತ್ತಿದೆ ಎಂದು ಹೇಳಿದರು.
ಈ ವೇಳೆ ಬಿಜೆಪಿ ಗ್ರಾಮಾಂತರ ಘಟಕದ ಜಿಲ್ಲಾಧ್ಯಕ್ಷ ಅಶೋಕ ಬಗಲಿ ಮಾತನಾಡಿ, ಮೂರು ವರ್ಷಕ್ಕೊಮ್ಮೆ ಇಂತಹ ಪ್ರಶಿಕ್ಷಣ ವರ್ಗಗಳನ್ನು ಆಯೋಜಿಸುವ ಮೂಲಕ ಪಕ್ಷದ ತತ್ವ, ಸಿದ್ಧಾಂತಗಳನ್ನು ಹಳೆಯ ಹಾಗೂ ಹೊಸ ಕಾರ್ಯಕರ್ತರಿಗೆ ಮನದಟ್ಟು ಮಾಡಲಾಗುತ್ತಿದೆ ಎಂದು ಹೇಳಿದರು.
ರಾಜ್ಯಾದ್ಯಂತ ಸುಮಾರು 700ಕ್ಕೂ ಹೆಚ್ಚು ಪ್ರಶಿಕ್ಷಣ ವರ್ಗಗಳು ನಡೆಯುತ್ತಿದ್ದು, ಕಲಬುರಗಿ ಜಿಲ್ಲೆಯಲ್ಲಿ 21 ವರ್ಗಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ ಅವರು, ಕಾರ್ಯಕರ್ತರು ಶಿಸ್ತುಬದ್ಧವಾಗಿ ಪಕ್ಷದ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಸಂಘಟನೆಯನ್ನು ಬಲಪಡಿಸಬೇಕು ಎಂದು ಕರೆ ನೀಡಿದರು.
ಹಿರಿಯ ಮಾಜಿ ಶಾಸಕ ಸುಭಾಷ ಗುತ್ತೇದಾರ, ಜಿಪಂ ಮಾಜಿ ಸದಸ್ಯ ಹರ್ಷಾನಂದ ಗುತ್ತೇದಾರ, ಪ್ರಶಿಕ್ಷಣ ರಾಜ್ಯ ಸಂಚಾಲಕ ರಾಜಶೇಖರ ನಾಗಮೂರ್ತಿ, ವಿಭಾಗೀಯ ಸಹ ಪ್ರಭಾರಿ ಶರಣಪ್ಪ ತಳವಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಬಿರಾದಾರ, ಆನಂದ ಪಾಟೀಲ ಕೊರಳ್ಳಿ, ಸಂಜಯ ಮಿಷ್ಕಿನ್, ಮಹೇಶ ಸೂರೆ, ಬಸವರಾಜ ನಿಪ್ಪಾಣಿ, ಬಿಸವರಾಜ ಬಿರಾದಾರ, ಶ್ರೀಶೈಲ ಕಡಗಂಚಿ, ಸಂತೋಷ ಹಾದಿಮನಿ ಸೇರಿದಂತೆ ಇನ್ನಿತರ ವೇದಿಕೆಯಲ್ಲಿದ್ದರು.
ಪ್ರಶಿಕ್ಷಣಾರ್ಥಿ ಸಿದ್ಧು ಹಿರೋಳಿ, ಅಶೋಕ ಹತ್ತರಕಿ, ಸಿದ್ಧು ಶೇಖಾಪೂರ, ಮಹಿಬೂಬ ನಿಂಬರಗಾ, ಮಹಿಬೂಬ ಭಾಷಾಶೇಖ, ಶ್ರೀಶೈಲ ಖಜೂರಿ, ಅಶೋಕ ಗುತ್ತೇದಾರ, ಲಿಂಗರಾಜ ಬಿರಾದಾರ, ಮಲ್ಲಿಕಾರ್ಜುನ ತಡಕಲ್, ಸುನಿಲ ಹಿರೋಳಿಕರ್, ಶಿವುಪುತ್ರ ನಡಗೇರಿ ಮಲ್ಲಣ್ಣಾ ನಾಗೂರೆ ಸೇರಿದಂತೆ ಭೂತಮಟ್ಟದ ಅಧ್ಯಕ್ಷರು ಪ್ರಮುಖರು ಭಾಗವಹಿಸಿದ್ದರು.
ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗುಳೆ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪ್ರಕಾಶ ಮಾನೆ ಸ್ವಾಗತಿಸಿದರು. ಜಿಲ್ಲಾ ಮಹಿಳಾ ಘಟಕದ ಗೌರಿ ಚಿಟಕೋಟಿ ಪ್ರಾರ್ಥನೆ ಹಾಡಿದರು.

Comments are closed.

Don`t copy text!